ಸರ್ಕಾರದಿಂದ ಮಂಜೂರಾದ ಮನೆಗಳ ನಿರ್ಮಾಣ ಪೂರ್ಣಗೊಳಿಸಿ

KannadaprabhaNewsNetwork |  
Published : Jul 03, 2024, 12:18 AM IST
2ಕೆಎಂಎನ್ ಡಿ23 | Kannada Prabha

ಸಾರಾಂಶ

ಸರ್ಕಾರ ಕಳೆದ 2-3 ವರ್ಷಗಳಿಂದ 2475 ಮನೆ ನೀಡಿದೆ. ಆದರೆ, ಅವುಗಳ ಪೈಕಿ ನೀಡಿರುವ 1005 ಮನೆಗಳ ಕಾಮಗಾರಿಯನ್ನು ಆರಂಭಿಸಿಯೇ ಇಲ್ಲ. ಇನ್ನು ಹಲವು ಮನೆಗಳ ಕಾಮಗಾರಿ ಪ್ರಗತಿಯಲ್ಲಿವೆ. ಸರ್ಕಾರದಿಂದ ಮಂಜೂರಾದ ಎಲ್ಲಾ ಮನೆಗಳ ನಿರ್ಮಾಣ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸರ್ಕಾರದಿಂದ ತಾಲೂಕಿಗೆ ಮಂಜೂರಾಗಿರುವ ಮನೆಗಳ ನಿರ್ಮಾಣ ಕಾರ್ಯವನ್ನು ನಿಗಧಿತ ಸಮಯದಲ್ಲಿ ಮುಕ್ತಾಯಗೊಳಿಸಬೇಕು. ಒಂದು ವೇಳೆ ವಿಳಂಬ ಮಾಡಿದರೆ ಶಿಸ್ತಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕ ಎಚ್.ಟಿ.ಮಂಜು ಪಿಡಿಒಗಳಿಗೆ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗ್ರಾಪಂ ಪಿಡಿಒಗಳ ಸಭೆ ನಡೆಸಿ ಮಾತನಾಡಿ, ಸರ್ಕಾರ ಕಳೆದ 2-3 ವರ್ಷಗಳಿಂದ 2475 ಮನೆ ನೀಡಿದೆ. ಆದರೆ, ಅವುಗಳ ಪೈಕಿ ನೀಡಿರುವ 1005 ಮನೆಗಳ ಕಾಮಗಾರಿಯನ್ನು ಆರಂಭಿಸಿಯೇ ಇಲ್ಲ. ಇನ್ನು ಹಲವು ಮನೆಗಳ ಕಾಮಗಾರಿ ಪ್ರಗತಿಯಲ್ಲಿವೆ ಎಂದರು.

ಸರ್ಕಾರದಿಂದ ಮಂಜೂರಾದ ಎಲ್ಲಾ ಮನೆಗಳ ನಿರ್ಮಾಣ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಮನೆ ಕಾಮಗಾರಿ ಕೆಲಸಕ್ಕೆ ಲಂಚಕ್ಕೆ ಬೇಡಿಕೆ ಇಡುವುದು ಸರಿಯಲ್ಲ. ಜಿಪಿಎಸ್ ಸೇರಿದಂತೆ ಎಲ್ಲಾ ಕೆಲಸಕ್ಕೆ ರೈತರಿಂದ ಹಣ ಕೇಳುವುದಕ್ಕೆ ನಿಮಗೆ ನಾಚಿಕೆಯಾಗಬೇಕು ಎಂದು ಪಿಡಿಒಗಳನ್ನು ತರಾಟೆ ತೆಗೆದುಕೊಂಡರು.

ತಾಲೂಕಿನ ಬಹುತೇಕ ಗ್ರಾಮಗಳ ಸ್ಮಶಾನ ಇನ್ನು ಸಾರ್ವಜನಿಕರಿಗೆ ಬಳಕೆಯಾಗುತ್ತಿಲ್ಲ. ಉಳಿದೆಡೆ ಸ್ಮಶಾನಕ್ಕೆ ಹೋಗುವ ರಸ್ತೆಯಲ್ಲಿ ಗಿಡಗಂಟಿಗಳು ಬೆಳೆದು ತೊಂದರೆಯಾಗಿದೆ. ಸ್ಮಶಾನಗಳ ಅಭಿವೃದ್ಧಿಗೆ ಸೂಚಿಸಿದ್ದರೂ ಕ್ರಮ ವಹಿಸಿಲ್ಲ ಎಂದರು.

ಬಹು ದಿನಗಳಿಂದಲೂ ಐಚನಹಳ್ಳಿ ಹಿರೀಕಳಲೆ, ಮುರುಕನಹಳ್ಳಿ, ಹರಳಹಳ್ಳಿ, ಮಾಕವಳ್ಳಿ, ಕಿಕ್ಕೇರಿ, ಆನೆಗೋಳ, ಬಳ್ಳೇಕೆರೆ, ಅಕ್ಕಿಹೆಬ್ಬಾಳು, ಭಾರತೀಪುರ ಕ್ರಾಸ್, ಹರಿಹರಪುರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಹಲವು ಸಮಸ್ಯೆಗಳಿವೆ. ಅನೇಕ ಬಾರಿ ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿದಾಗಲೂ ಪಿಡಿಒಗಳು ಗ್ರಾಪಂಗಳಲ್ಲಿ ಕಂಡುಬಂದಿಲ್ಲ ಎಂದರು.

ಮೊಬೈಲ್ ಮೂಲಕವೂ ಕೆಲವು ಪಿಡಿಒಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಸರ್ಕಾರದ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದು ಅಧಿಕಾರಿಗಳ ಕರ್ತವ್ಯ. ಪಿಡಿಒಗಳು ಹಾಗೂ ಕಾರ್ಯದರ್ಶಿಗಳು ಗ್ರಾಪಂಗೆ ನಿಗದಿತ ವೇಳೆಗೆ ಹಾಜರಾಗಬೇಕು ಎಂದು ಸೂಚಿಸಿದರು.

ರೈತರ, ಸಾರ್ವಜನಿಕರ ಕೆಲಸಗಳಲ್ಲಿ ವಿಳಂಬ ತೋರುವ ಅಧಿಕಾರಿಗಳು ನನ್ನ ಕ್ಷೇತ್ರಕ್ಕೆ ಬೇಡ. 2 ವರ್ಷಗಳಾದರೂ ಮನೆ ನಿರ್ಮಾಣಕ್ಕೆ ಸಂಬಂದಿಸಿದಂತೆ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಇಓ ಸತೀಶ್ ಅವರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ತಾಪಂ ಇಒ ಸತೀಶ್, ತಾಲೂಕು ಯೋಜನಾಧಿಕಾರಿ ಶ್ರೀನಿವಾಸ್, ನರೇಗ ಆಡಳಿತ ಸಹಾಯಕ ನಿರ್ದೇಶಕ ನರಸಿಂಹರಾಜು, ನರೇಗಾ ಎಡಿ ಉಮಾಶಂಕರ್, ಶಾಸಕರ ಆಪ್ತಸಹಾಯಕ ಪ್ರತಾಪ್, ಕುಮಾರಸ್ವಾಮಿ ಸೇರಿದಂತೆ ತಾಲೂಕಿನ ಎಲ್ಲಾ ಪಿಡಿಒಗಳು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ