ಅಂಡಾಶಯ, ಸ್ತನ ಕ್ಯಾನ್ಸರ್‌ ಪೀಡಿತ ಮಹಿಳೆಗೆ ಕ್ಲಿಷ್ಟ ಶಸ್ತ್ರಚಿಕಿತ್ಸೆ

KannadaprabhaNewsNetwork | Published : Feb 15, 2024 1:16 AM

ಸಾರಾಂಶ

ದಾವಣಗೆರೆಯಲ್ಲಿ ಬುಧವಾರ ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಎಂಎಸ್ಎಸ್‌ಸಿಎಚ್‌ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ಶಸ್ತ್ರಚಿಕಿತ್ಸಕ ಡಾ.ಎನ್.ನಿಶ್ಚಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಂಡಾಶಯದ ಕ್ಯಾನ್ಸರ್ ಮತ್ತು ಸ್ತನದ ಕ್ಯಾನ್ಸರ್ ಎರಡರಿಂದಲೂ ಬಳಲುತ್ತಿದ್ದ 51ವರ್ಷದ ಮಹಿಳೆಗೆ ದಾವಣಗೆರೆ ನಂಜಪ್ಪ ಆಸ್ಪತ್ರೆ ಕ್ಯಾನ್ಸರ್ ಚಿಕಿತ್ಸಾ(ಆಂಕಾಲಜಿ) ವಿಭಾಗವು ಕ್ಯಾನ್ಸರ್‌ ಶಸ್ತ್ರಚಿಕಿತ್ಸೆ ಜೊತೆ ಸಿಆರ್‌ಎಸ್‌(ಸೈಟೋರೆಡೆಕ್ಟಿವ್‌) ಮತ್ತು ಹೈಪೆಕ್‌(HIPEC) ಎಂಬ ಸಂಕೀರ್ಣ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೀಡಿದ್ದು, ಮಹಿಳೆ ಈಗ ಆರೋಗ್ಯವಾಗಿದ್ದಾರೆ ಎಂದು ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆ ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಎನ್.ನಿಶ್ಚಲ್ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1ತಿಂಗಳ ಹಿಂದೆ 51ವರ್ಷದ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಈ ಸಂಕೀರ್ಣ ಶಸ್ತ್ರಚಿಕಿತ್ಸೆ ಸುಮಾರು 10 ಗಂಟೆಗಳ ಕಾಲ ನಡೆಸಲಾಗಿತ್ತು. ಈಗ ರೋಗಿಯ ಆರೋಗ್ಯ ಸ್ಥಿರವಾಗಿದ್ದು, ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದರು.

ಶಿವಮೊಗ್ಗದಲ್ಲಿ ಮೂರೂವರೆ ದಶಕದ ಇತಿಹಾಸ ಹೊಂದಿರುವ ನಂಜಪ್ಪ ಆಸ್ಪತ್ರೆ ದಾವಣಗೆರೆಯಲ್ಲೂ ತನ್ನ ಗಮನಾರ್ಹ, ಗುಣಮಟ್ಟದ ವೈದ್ಯಕೀಯ ಸೇವೆ ವಿಸ್ತರಿಸಿದೆ. ಹೈಪರ್ಥೆರ್ಮಿಕ್ ಇಂಟ್ರಾಪೆರಿಟೋನಿಯಲ್ ಕಿಮೋಥೆರಪಿ((HIPEC)ಯು ಅನೇಕ ಆಕ್ರಮಣಾಕಾರಿ ಕಿಬ್ಬೊಟ್ಟೆಯ ಕ್ಯಾನ್ಸರ್‌ಗಳಿಗೆ, ಅಪೆಂಡಿಕ್ಯುಲರ್ ಕ್ಯಾನ್ಸರ್‌ನಂತಹ ಗಡ್ಡೆಗಳಿಗೆ ತುಲನಾತ್ಮಕವಾಗಿ ಹೊಸ ಚಿಕಿತ್ಸೆಯ ಆಯ್ಕೆಯಾಗಿದೆ. ಕಿಬ್ಬೊಟ್ಟೆ ಕುಳಿಯೊಳಗೆ ಹರಡಿರುವ ಕೊಲೊರೆಕ್ಟಲ್ ಕ್ಯಾನ್ಸರ್‌ ಅಂಡಾಶಯದ ಕ್ಯಾನ್ಸರ್‌, ಹೊಟ್ಟೆ ಕ್ಯಾನ್ಸರ್‌, ಮೆಸೊಧೆಲಿಯೋಮಾ(ದೇಹದ ಬಹುತೇಕ ಆಂತರಿಕ ಅಂಗಾಂಗಗಳಲ್ಲಿ ವ್ಯಾಪಿಸಿರುವ ತೆಳುವಾದ ಅಂಗಾಂಶ ಪದರದಲ್ಲಿ ಕಂಡು ಬರುವ ಒಂದು ಬಗೆಯ ಕ್ಯಾನ್ಸರ್‌)ವನ್ನು ಈ ಚಿಕಿತ್ಸೆಯಿಂದ ನಿಯಂತ್ರಿಸಬಹುದು, ಕೆಲವೊಮ್ಮೆ ಗುಣಪಡಿಸಬಹುದು ಎಂದು ಅವರು ಹೇಳಿದರು.

ದಾವಣಗೆರೆ ನಂಜಪ್ಪ ಹಾಸ್ಪಿಟಲ್‌ನ ಸಮರ್ಪಿತ ತಂಡವು ಕ್ಯಾನ್ಸರ್ ಶಸ್ತ್ರಚಿಕಿತ್ಸಕರು(ಸರ್ಜಿಕಲ್ ಅಂಕಾಲಜಿಸ್ಟ್), ಕ್ಯಾನ್ಸರ್ ರೋಗ ಶಾಸ್ತ್ರಜ್ಞರು(ಆಂಕೋ ಪ್ಯಾತಾಲಜಿಸ್ಟ್) ಒಳಗೊಂಡ ಸಮಗ್ರ ಟ್ಯೂಮರ್‌ ಬೋರ್ಡ್ ಕಾರ್ ವಿಧಾನದ ಮೂಲಕ ಪ್ರತಿಯೊಬ್ಬ ರೋಗಿಗೆ ಸಾಧ್ಯವಾದಷ್ಟು ಅತ್ಯುತ್ತಮ ಚಿಕಿತ್ಸೆ ದೊರೆಯುವಂತೆ ಖಾತರಿ ವಹಿಸಲು ಶ್ರಮಿಸುತ್ತದೆ. ಅತ್ಯಾಧುನಿಕ ಆಪರೇಷನ್ ಥೇಟರ್, ಉಪಕರಣಗಳು, ಅತ್ಯುತ್ತಮ ಐಸಿಯು ಬ್ಯಾಕಪ್ ಇದೆ. ವ್ಯಾಪಕವಾದ ಪೆರಿಟೋನಿಯಲ್‌ ಕ್ಯಾನ್ಸರ್ ಹೊಂದಿರುವ ರೋಗಿಗಳಿಗೆ ಹತಾಶ ಸಂದರ್ಭಗಳಲ್ಲಿ ಸಂಪೂರ್ಣ ಸೈಟೋರೆಡೆಕ್ಟಿವ್‌ ಶಸ್ತ್ರಚಿಕಿತ್ಸೆ ಮೂಲಕ ಭರವಸೆ ಒದಗಿಸುತ್ತೇವೆ ಎಂದು ತಿಳಿಸಿದರು.

ಕಿಬ್ಬೊಟ್ಟೆಯೊಳಗಿನ ಎಲ್ಲಾ ಗೋಚರ ಗಡ್ಡೆಗಳನ್ನು ವಿಸ್ತೃತವಾದ ಮತ್ತು ಸಂಕೀರ್ಣ ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕಲಾಗುತ್ತದೆ.(ಸಂಪೂರ್ಣ ಸೈಟೋರೆಡೆಕ್ಟಿವ್ ಶಸ್ತ್ರಚಿಕಿತ್ಸೆ) ಸ್ವಲ್ಪ ಸಮಯದ ನಂತರ(ಅದೇ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹೆಸ್ಟೆಡ್‌ ಕೆಮೋಥೆರಪಿಯನ್ನು ಸುಮಾರು 41-42ರಷ್ಟು ಉಷ್ಣಾಂಶದಲ್ಲಿ ಪ್ರಸಾರ ಮಾಡಲು ವಿಶೇಷ ಯಂತ್ರ ಬಳಕೆ ಮಾಡಲಾಗುತ್ತದೆ. ಆದರೆ, ಎಲ್ಲಾ ರೋಗಿಗಳು ಇಂತಹ ಚಿಕಿತ್ಸೆಗೆ ಅರ್ಹರಾಗಿರುವುದಿಲ್ಲ. ಗೆಡ್ಡೆ ವ್ಯಾಪಿಸಿರುವ ಪ್ರದೇಶವು ಹೊಟ್ಟೆಗೆ ಸೀಮಿತವಾಗಿರಬೇಕು. ರೋಗಿಯು ಸಾಮಾನ್ಯವಾಗಿ ದೊಡ್ಡ ಶಸ್ತ್ರಚಿಕಿತ್ಸೆ ಸಹಿಸಿಕೊಳ್ಳುವಷ್ಟು ಸದೃಢರಾಗಿರಬೇಕು. ಅನೇಕ ಗೆಡ್ಡೆಗಳಿಗೆ ಗಡ್ಡೆಯ ಬಹುಭಾಗವನ್ನು ಕಡಿಮೆ ಮಾಡಲು ಮತ್ತು ಚಿಕಿತ್ಸೆಯ ಪ್ರತಿಕ್ರಿಯೆಯನ್ನು ಮೊದಲು ರಕ್ತದ ಹರಿವಿನ ಮೂಲಕ ಕೆಮೋಥೆರಪಿ ನೀಡಲಾಗುತ್ತದೆ. ಹೈಪೆಕ್ ಕುರಿತು ಜಾಗತಿಕ ಜಾಗೃತಿ ಹೆಚ್ಚುತ್ತಿದ್ದು, ರೋಗಿಗಳು ಇದರಿಂದ ಪ್ರಯೋಜನ ಪಡೆಯುತ್ತಿದ್ದಾದರೆ. ನಮ್ಮ ದೇಶದಲ್ಲಿ ನಾವು ಎಚ್‌ಐಪಿಇಸಿ ಫಲಿತಾಂಶಗಳ ಬಗ್ಗೆ ದೃಢವಾದ ಪುರಾವೆ ನೀಡುತ್ತಿದ್ದೇವೆ ಎಂದು ಡಾ.ಎನ್.ನಿಶ್ಚಲ್ ಹೇಳಿದರು.

ನಂಜಪ್ಪ ಆಸ್ಪತ್ರೆಯ ಮೆಡಿಕಲ್ ಅಂಕಾಲಜಿಸ್ಟ್ ಡಾ.ಪ್ರಸಾದ ಪಿ.ಗುಣಾರಿ, ಅರಿವಳಿಕೆ ತಜ್ಞ ಡಾ.ವಿಜಯ ಚಂದ್ರಪ್ಪ, ಪ್ರಶಾಂತ, ತ್ರಿವೇಣಿ ಇತರರು ಇದ್ದರು.

Share this article