ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಮಗ್ರ ಅಭಿವೃದ್ಧಿ: ಬಸವರಾಜ ರಾಯರಡ್ಡಿ

KannadaprabhaNewsNetwork | Published : Apr 14, 2024 1:52 AM

ಸಾರಾಂಶ

ಬಿಜೆಪಿ ಸರ್ಕಾರದಿಂದ ಭಾರತದ ಆರ್ಥಿಕತೆ ಹದಗೆಟ್ಟಿದೆ. ಬಿಜೆಪಿ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಸಾಲಮನ್ನಾ ಮಾಡಿದೆಯೇ ಹೊರತು ಬಡವರ ಪರ ಯೋಜನೆಗೆ ಆದ್ಯತೆ ನೀಡಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಆರೋಪಿಸಿದ್ದಾರೆ.

ಕುಕನೂರು: ರಾಷ್ಟ್ರದ ಸಮಗ್ರ ಅಭಿವೃದ್ಧಿ ಕಾಂಗ್ರೆಸ್ ಸರ್ಕಾರದಿಂದ ಆಗಿದೆಯೇ ಹೊರತು ಇನ್ನುಳಿದ ಯಾವುದೇ ಸರ್ಕಾರದ ಕೊಡುಗೆಗಳು ರಾಷ್ಟ್ರಾಭಿವೃದ್ಧಿ ಪೂರಕ ಆಗಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ರಾಜೂರು, ಶಿರೂರು ಗ್ರಾಮದಲ್ಲಿ ಲೋಕಸಭೆ ಕೊಪ್ಪಳ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಬಿಜೆಪಿ ಸರ್ಕಾರದಿಂದ ಭಾರತದ ಆರ್ಥಿಕತೆ ಹದಗೆಟ್ಟಿದೆ. ಬಿಜೆಪಿ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಸಾಲಮನ್ನಾ ಮಾಡಿದೆಯೇ ಹೊರತು ಬಡವರ ಪರ ಯೋಜನೆಗೆ ಆದ್ಯತೆ ನೀಡಿಲ್ಲ. ರೈತರ ಸಾಲವನ್ನು ಕಾಂಗ್ರೆಸ್ ಸರ್ಕಾರ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿ ಮಂತ್ರಿ ಆಗಿದ್ದಾಗ ಮನ್ನಾ ಮಾಡಿದರು. ಬಡವರಿಗೆ ಹೊಲ, ಮಾಸಾಶನ, ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರಿಗೆ ವೇತನ ಜಾರಿಗೆ ತಂದಿತು. ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ ಏರಿಸಿ ಬಿಜೆಪಿ ಸರ್ಕಾರ ಬಡವರ್ಗದ ಮೇಲೆ ಹೊರೆ ಹಾಕಿತು. ಆರ್ಥಿಕ ಸ್ಥಿತಿ ಅರಿಯದೆ ಪೆಟ್ರೋಲ್, ಡೀಸೆಲ್‌ ಬೆಲೆ ಇಳಿಸುತ್ತೇವೆ ಎಂದು ಭರವಸೆ ನೀಡಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಿತು ಎಂದರು.

ಮನಮೋಹನ್ ಸಿಂಗ್ ಸರಳ ವ್ಯಕ್ತಿತ್ವದ ಪ್ರಧಾನ ಮಂತ್ರಿಯಾಗಿದ್ದರು. ಆದರೆ ನರೇಂದ್ರ ಮೋದಿ ಅವರು ಹೈಫೈ ಪ್ರಧಾನಿ ಆಗಿದ್ದಾರೆ. ಮನಮೋಹನ್ ಸಿಂಗ್ ಅವರು ಒಂದು ಸಾವಿರ ರು. ಬೆಲೆಯ ಬಟ್ಟೆ ಧರಿಸುತ್ತಿದ್ದರು. ಆದರೆ ಮೋದಿ ಅವರನ್ನು ನೋಡಿ, ದುಬಾರಿ ಬೆಲೆಯ ಬಟ್ಟೆ ಧರಿಸಿ, ಹೈಫೈ ಆಗಿದ್ದಾರೆ. ವಿಶೇಷ ಕಾರು, ವಿಮಾನ ಹೀಗೆ ಪ್ರಧಾನಿ ನರೇಂದ್ರ ಮೋದಿ ಅವರು ಐಷಾರಾಮಿ ಬದುಕಿನಲ್ಲಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಭಾರತದ ಆರ್ಥಿಕತೆ ಬಗ್ಗೆ ಹಾಗೂ ಅಭಿವೃದ್ಧಿ ಬಗ್ಗೆ ಯೋಜನೆ ರೂಪಿಸುತ್ತಿದ್ದರು. ಎಂದಿಗೂ ಅವರು ಜನರ ಹಿತ ವಿರುದ್ಧ ಕಾರ್ಯ ಮಾಡಲಿಲ್ಲ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರ್ಗದ ಜನರ ಹಿತಕ್ಕೆ ಗ್ಯಾರಂಟಿ ಯೋಜನೆ ರೂಪಿಸಿದ್ದು, ಅದನ್ನು ಸಹಿಸದೆ ಬಿಜೆಪಿಯವರು ಸುಖಾಸುಮ್ಮನೆ ಆರೋಪ ಮಾಡುತ್ತಾರೆ ಎಂದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಚಂಡೂರು, ಪ್ರಮುಖರಾದ ಮಂಜುನಾಥ ಕಡೇಮನಿ, ದೇವಪ್ಪ ಅರಕೇರಿ, ಸಂಗಮೇಶ ಗುತ್ತಿ ಇತರರಿದ್ದರು.

Share this article