ಗಾರ್ಬೇಜ್ ಯಾರ್ಡ್ ತೆರವುಗೊಳಿಸಲು ಒತ್ತಾಯ

KannadaprabhaNewsNetwork |  
Published : Mar 05, 2024, 01:32 AM IST
ಗಾರ್ಬೇಜ್‌ ಯಾರ್ಡ್‌ ತೆರವಿಗೆ ಒತ್ತಾಯಿಸಿ ಸೋಮವಾರ ಸ್ಥಳೀಯ ನಿವಾಸಿಗಳು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕೂಡಲೇ ಯಾರ್ಡ್‌ನ ಸಮರ್ಪಕ ನಿರ್ವಹಣೆಗೆ ಪಾಲಿಕೆ ಕ್ರಮ ಕೈಗೊಳ್ಳಬೇಕು. ಇಲ್ಲವೇ ಇದನ್ನು ತೆರವುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಇಲ್ಲಿನ ಕಾರವಾರ ರಸ್ತೆಯಲ್ಲಿರುವ ಗಾರ್ಬೇಜ್ ಯಾರ್ಡ್ ತೆರವುಗೊಳಿಸಲು ಒತ್ತಾಯಿಸಿ ಸೋಮವಾರ ಹೇಸಿಗೆಮಡ್ಡಿ (ಗಾರ್ಬೇಜ್ ಯಾರ್ಡ್) ತೆರವು ಹೋರಾಟ ಸಮಿತಿಯ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಸೋಮವಾರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಹೇಸಿಗೆಮಡ್ಡಿ (ಗಾರ್ಬೇಜ್ ಯಾರ್ಡ್) ತೆರವು ಹೋರಾಟ ಸಮಿತಿಯ ಅಧ್ಯಕ್ಷ ನಾಗರಾಜ್ ಗೌರಿ ಮಾತನಾಡಿ, ಈ ಗಾರ್ಬೇಜ್ ಯಾರ್ಡ್‌ನಿಂದಾಗಿ ಸ್ಥಳೀಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. 19.15 ಎಕರೆ ಜಾಗ ಇರುವಂತಹ ಈ ಯಾರ್ಡ್ ಸುತ್ತಮುತ್ತಲೂ ಸರಿಯಾದ ತಡೆಗೋಡಿಯಿಲ್ಲ. ಇಲ್ಲಿ 2 ಸಾವಿರಕ್ಕೂ ಅಧಿಕ ಶ್ವಾನಗಳು ವಾಸಿಸುತ್ತಿವೆ. ಇವು ರಾತ್ರಿಯ ವೇಳೆಯಲ್ಲಿ ಇಲ್ಲಿನ ಕಸ ಹಿಡಿದುಕೊಂಡು ರಸ್ತೆ ಹಾಗೂ ಮನೆಗಳ ಮುಂದುಗಡೆ ಬಂದು ಬೀಸಾಡುತ್ತಿದ್ದು, ಇದರಿಂದಾಗಿ ಸುತ್ತಮುತ್ತಲೂ ವಾಸ ಮಾಡುತ್ತಿರುವ ಕುಟುಂಬಸ್ಥರಿಗೆ ಕಸದ ದುರ್ವಾಸನೆ ಬೀರುತ್ತಿದೆ.

ಸಂಜೆಯಾಗುತ್ತಿದ್ದಂತೆ ಯಾರ್ಡ್‌ನಲ್ಲಿರುವ ಕಸಕ್ಕೆ ಅಲ್ಲಿನ ಸಿಬ್ಬಂದಿಗಳೇ ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದಾಗಿ 8 ಕಿ.ಮೀ ವರೆಗೆ ದುರ್ವಾಸನೆಯಿಂದ ಗರ್ಭಿಣಿಯರಿಗೆ, ವಯೋವೃದ್ಧರಿಗೆ ಅಸ್ತಮಾ ರೋಗ ಬರುತ್ತಿದ್ದು, ಜನನವಾಗುವ ಮಕ್ಕಳು ಅನಾರೋಗ್ಯದಿಂದ ಬಳಲುವಂತಾಗಿದೆ.

ಗಾರ್ಬೇಜಿನಲ್ಲಿರುವ ತ್ಯಾಜ್ಯ ಕರಗಿಸುವುದಕ್ಕಾಗಿಯೇ ಕೋಟ್ಯಾಂತರ ರುಪಾಯಿ ಖರ್ಚು ಮಾಡಿ ಯಂತ್ರಗಳನ್ನು ಅಳವಡಿಸಲಾಗಿದೆ. ಆದರೆ, 5 ವರ್ಷ ಕಳೆದರೂ ಯಂತ್ರಗಳ ಬಳಕೆ ಮಾಡದಿರುವುದರಿಂದ ತುಕ್ಕುಹಿಡಿದು ಹಾಳಾಗುತ್ತಿವೆ. ಇವುಗಳ ಬಳಕೆಗೆ ಆದ್ಯತೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಸ್ಯೆ ಈಡೇರಿಕೆಗೆ ಒತ್ತಾಯಿಸಿ ಈಗಾಗಲೇ ಹಲವು ಬಾರಿ ಪ್ರತಿಭಟನೆ ನಡೆಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರೂ ಸಹ ಈ ವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆದ್ದಾರಿ ತಡೆ:

ಈ ಕೂಡಲೇ ಯಾರ್ಡ್‌ನ ಸಮರ್ಪಕ ನಿರ್ವಹಣೆಗೆ ಪಾಲಿಕೆ ಕ್ರಮ ಕೈಗೊಳ್ಳಬೇಕು. ಇಲ್ಲವೇ ಇದನ್ನು ತೆರವುಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿಗಳು ಆಗಮಿಸಿ ಸಮಸ್ಯೆ ಆಲಿಸುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಗಂಟೆಗೂ ಹೆಚ್ಚುಕಾಲ ಗಾರ್ಬೇಜ್‌ ಯಾರ್ಡ್‌ ಎದುರಿಗಿರುವ ರಾಜ್ಯ ಹೆದ್ದಾರಿ ಬಂದ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಕೆಲಕಾಲ ವಾಗ್ವಾದ ನಡೆಯಿತು.

ಕಾನೂನು ಹೋರಾಟದ ಎಚ್ಚರಿಕೆ:

ಇಲ್ಲಿನ ನಿವಾಸಿಗಳು ಅನುಭವಿಸುತ್ತಿರುವ ಸಮಸ್ಯೆ ಪಾಲಿಕೆ ಅಧಿಕಾರಿಗಳಿಗೂ ಗೊತ್ತಾಗಬೇಕು. 2-3 ದಿನಗಳಲ್ಲಿ ಸಮಸ್ಯೆ ಪರಿಹರಿಸದೇ ಇದ್ದಲ್ಲಿ ಪಾಲಿಕೆಯ ಆವರಣದಲ್ಲಿ ಇಲ್ಲಿನ ತ್ಯಾಜ್ಯ ತಗೆದುಕೊಂಡು ಹೋಗಿ ಹಾಕಿ ಸುಡುತ್ತೇವೆ. ಇಲ್ಲಿನ ಶ್ವಾನಗಳನ್ನು ತಗೆದುಕೊಂಡು ಹೋಗಿ ಪಾಲಿಕೆ ಆಯುಕ್ತರ ಕಚೇರಿಯೊಳಗೆ ಬಿಡುವ ಮೂಲಕ ಪ್ರತಿಭಟಿಸಲಾಗುವುದು. ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಕ್ರಮ ಕೈಗೊಳ್ಳುವ ಭರವಸೆ:

ಸ್ಥಳಕ್ಕೆ ಆಗಮಿಸಿದ ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಆದಷ್ಟು ಬೇಗ ನಿಮ್ಮ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಲಾಗುವುದು. ಸಂಗ್ರಹಗೊಂಡಿರುವ ಕಸ ಕರಗಿಸಲು ಟೆಂಡರ್‌ ಕರೆಯಲಾಗಿದ್ದು, ಕೆಲವೇ ದಿನಗಳಲ್ಲಿ ಕೆಲಸ ಪ್ರಾರಂಭವಾಗಲಿದೆ. ಯಾರ್ಡ್‌ ನಿರ್ವಹಣೆ ಬೇಕಾದ ಅಗತ್ಯ ಸಿಬ್ಬಂದಿಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಯಾರ್ಡ್‌ ಸುತ್ತಲೂ ತಡೆಗೋಡೆ ಕಟ್ಟಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಆದರೆ, ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಪ್ರತಿಭಟನೆ ಮಾಡಿದ ವೇಳೆ ಬರಿ ಆಶ್ವಾಸನೆ ನೀಡಿ ಹೋಗುತ್ತೀರಿ. ಆದರೆ, ಕೆಲಸ ಮಾತ್ರ ಆಗುತ್ತಿಲ್ಲ. ಸೂಕ್ತ ಕ್ರಮ ಕೈಗೊಳ್ಳುವ ವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು.

ಈ ವೇಳೆ ಹೋರಾಟ ಸಮಿತಿಯ ಉಪಾಧ್ಯಕ್ಷ ಖಾಜಾಹುಸೇನ ಶಿರೂರ, ಸಂಘಟನಾ ಕಾರ್ಯದರ್ಶಿ ದೀಪಾ ಗೌರಿ, ಶಿವಕುಮಾರ ಗೋಕಾವಿ, ಪಾಪಾ ನವಲೂರ, ಶಿವಕುಮಾರ ಉಳ್ಳಾಗಡ್ಡಿ, ರಘುನಾಥ ಮಾಡಳ್ಳಿ, ಯಾಸೀನ ಬಾದಾಮಿ, ಸಾಧಿಕ ಮೀಠೆಬಾಯಿ ಸೇರಿದಂತೆ ಸ್ಥಳಿಯ ನಿವಾಸಿಗಳು ಪಾಲ್ಗೊಂಡಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ