ಪಟ್ಟಣ ಪಂಚಾಯಿತಿ ಕ್ರಮಕ್ಕೆ ಸಾರ್ವಜನಿಕರ ಆಗ್ರಹ
ಕನ್ನಡಪ್ರಭ ವಾರ್ತೆ, ಕೊಪ್ಪಪಟ್ಟಣದಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ದಿನನಿತ್ಯ ಶಾಲೆಗೆ ಬರುವ ಮಕ್ಕಳಿಗೆ ಮತ್ತು ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಬಹಳ ತೊಂದರೆ ಉಂಟಾಗಿದೆ. ಈ ಕೂಡಲೇ ಪಟ್ಟಣ ಪಂಚಾಯಿತಿಯಿಂದ ಬೀದಿ ನಾಯಿಗಳನ್ನು ನಿಯಂತ್ರಿಸಲು ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಬೀದಿನಾಯಿಗಳ ಸಂಖ್ಯೆ ದಿನದಿಂದ ದಿನ ಹೆಚ್ಚಾಗುತ್ತಿದ್ದು ರಸ್ತೆಯಲ್ಲಿ ಓಡಾಡುವವರ ಮೇಲೆ, ವಿದ್ಯಾರ್ಥಿಗಳ ಮೇಲೆ ನಾಯಿಗಳು ಆಕ್ರಮಣ ಮಾಡುತ್ತಿವೆ. ಗುಂಪು ಗುಂಪಾಗಿ ಬರುವ ನಾಯಿಗಳು ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ಏಕಾಏಕಿ ಅಡ್ಡಬರುವುದರಿಂದ ದ್ವಿಚಕ್ರ ವಾಹನ ಸವಾರರು ಬಿದ್ದು ಪೆಟ್ಟುಮಾಡಿಕೊಳ್ಳುತ್ತಿದ್ದಾರೆ. ಪಪಂ.ನವರು ಬೀದಿ ನಾಯಿಗಳಿಗೆ ಸಂತಾನಹರಣ ಚುಚ್ಚುಮದ್ದು ಕೊಡಿಸಿ ನಾಯಿಗಳ ಸಂಖ್ಯೆ ನಿಯಂತ್ರಿಸಬೇಕು. ರೇಬಿಸ್ ನಿಯಂತ್ರಣ ಚುಚ್ಚುಮದ್ದುಗಳನ್ನು ಕೊಡಿಸಲು ಮುಂದಾಗಬೇಕು. ಶಾಲೆಗಳಿಗೆ ಕಾಲ್ನಡಿಗೆಯಲ್ಲಿ ಹೋಗಿಬರುವ ಪುಟಾಣಿ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡುವ ಸಂಭವ ಹೆಚ್ಚಿದ್ದು, ಹಗಲು ರಾತ್ರಿ ಎನ್ನದೆ ಬಸ್ ನಿಲ್ದಾಣ, ಜನಸಂಚಾರ ಇರುವ ಮಾರ್ಕೆಟ್ ರಸ್ತೆಗಳಲ್ಲಿ ನಾಯಿಗಳ ಹಾವಳಿ ಮಿತಿಮೀರಿದ್ದು ರಸ್ತೆಯಲ್ಲಿ ಕಾಲ್ನಡಿಗೆ ಸಂಚಾರ ಹಾಗೂ ದ್ವಿಚಕ್ರ ವಾಹನಗಳ ಸಂಚಾರ ಭೀತಿ ಮೂಡಿಸುತ್ತಿದೆ. ಬೀದಿನಾಯಿಗಳ ನಿಯಂತ್ರಣಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೂಡಲೇ ಕ್ರಮವಹಿಸಬೇಕು ಎಂದು ಪಟ್ಟಣದ ಸಾರ್ವಜನಿಕರರ ಪರವಾಗಿ ವರ್ತಕ ಸಿ.ಎಚ್.ಪ್ರಕಾಶ್ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ತಾಲೂಕಿನ ಪ್ರತೀ ಗ್ರಾಪಂ ಗಳಲ್ಲೂ ಬೀದಿನಾಯಿಗಳ ಹಾವಳಿ ಅತಿಯಾಗಿದ್ದು ಗ್ರಾಮಸ್ಥರು ಶಾಲಾ ಮಕ್ಕಳು ಓಡಾಡುವ ಸಮಯದಲ್ಲಿ, ಜಾನುವಾರುಗಳು ಮೇಯಲು ಹೋಗುವ ಸಮಯದಲ್ಲಿ ಗುಂಪು ಕಟ್ಟಿ ಬರುವ ನಾಯಿಗಳು ದಾಳಿ ಮಾಡಲು ಮುಂದಾಗುತ್ತವೆ. ಅನಾಹುತಗಳಾಗುವ ಮುನ್ನ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ತಮ್ಮ ಗ್ರಾ.ಪಂ. ವ್ಯಾಪ್ತಿ ಗಳಲ್ಲಿ ಬೀದಿನಾಯಿಗಳ ಹಾವಳಿ ತಡೆಗಟ್ಟಲು ಸೂಕ್ತ ಕ್ರಮ ವಹಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.