ಕನ್ನಡಪ್ರಭ ವಾರ್ತೆ ಧಾರವಾಡ
ಅಹೋರಾತ್ರಿ ಸಂಗೀತ ಕಛೇರಿಗಳು ಯುವ ಕಲಾವಿದರಿಗೆ ಅಹೋರಾತ್ರಿ ರಾಗಗಳ ಪರಿಚಯವನ್ನು ಆಳವಾಗಿ ಅಧ್ಯಯನ ಮಾಡುವುದಕ್ಕೆ ಪ್ರಮುಖ ವೇದಿಕೆಯಾಗಿವೆ ಎಂದು ಸಿತಾರರತ್ನ ಸಮಿತಿ ಅಧ್ಯಕ್ಷ ರಾಘವೇಂದ್ರ ಆಯಿ ಹೇಳಿದರು.ಶಿವಸ್ಫೂರ್ತಿ ಮಹಾಶಿವರಾತ್ರಿ ಸಂಗೀತೋತ್ಸವ ಸಮಿತಿಯು ಇಲ್ಲಿಯ ಮಂಗಳವಾರ ಪೇಟೆಯ ಮುದಿಮಾರುತಿ ದೇವಸ್ಥಾನದಲ್ಲಿ ಆಯೋಜಿಸಿದ್ದ 48ನೇ ಶಿವರಾತ್ರಿ ಅಹೋರಾತ್ರಿ ಸಂಗೀತೋತ್ಸವದಲ್ಲಿ ಮಾತನಾಡಿದರು.
ಅಹೋರಾತ್ರಿ ಸಂಗೀತ ಕಛೇರಿಗಳನ್ನು ನಡೆಸುವುದು ಕಷ್ಟಸಾಧ್ಯ. ಇಂತಹ ಸಂದರ್ಭದಲ್ಲಿ ಮುದಿ ಮಾರುತಿ ದೇವಸ್ಥಾನದಲ್ಲಿ ಕಳೆದ 48 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ. ಈ ವೇದಿಕೆಯಲ್ಲಿ ಭಾರತದ ಪ್ರಸಿದ್ಧ ಗಾಯಕರೆಲ್ಲರೂ ತಮ್ಮ ಕಲಾ ಪ್ರೌಢಿಮೆಯನ್ನು ಮೆರೆದಿದ್ದಾರೆ. ಜೊತೆಗೆ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದಾರೆ. ಮಗುವಿನಿಂದ ಹಿಡಿದು ವೃದ್ಧರ ವರೆಗೂ ಎಲ್ಲ ಕಲಾವಿದರು ಭಾಗವಹಿಸಿದ್ದು ಸಾಧನೆಯೇ ಸರಿ ಎಂದರು.ಜಯಪೂರ ಅತ್ರೋಲಿ ಘರಾಣೆಯ ಗಾಯಕರಾದ ಪಂ.ಮೃತ್ಯುಂಜಯ ಅಗಡಿ ಮಾತನಾಡಿ, ಧಾರವಾಡ ಕಲಾಕ್ಷೇತ್ರವಾಗಿದ್ದು ಮಕ್ಕಳಿಂದ ಹಿಡಿದು ಹಿರಿಯ ಗಾಯಕರನ್ನು ಗೌರವಿಸಿ ಕಛೇರಿಗಳನ್ನು ಏರ್ಪಡಿಸುವುದರಿಂದ ಕಲಾವಿದರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಧಾರವಾಡ ಮೊದಲಿನಂತೆ ಸಂಗೀತದಲ್ಲಿ ತುಂಬ ಬೆಳೆಯುತ್ತಿದೆ ಎಂದರು.
ಪುಣೆಯ ಪಂ. ನಾಗೇಶ ಅಡಗಾಂವಕರ, ಧಾರವಾಡದಲ್ಲಿ ಪ್ರಥಮ ಬಾರಿಗೆ ತಾವು ಗಾಯನ ಪ್ರಸ್ತುತಪಡಿಸುವುದಕ್ಕೆ ಹರ್ಷ ವ್ಯಕ್ತ ಪಡಿಸಿ ಕಲಾ ಆಯೋಜಕರಿಗೆ ತಮ್ಮ ಕೃತಜ್ಞತೆ ಸಲ್ಲಿಸಿದರು. ಇದಕ್ಕೂ ಮುಂಚೆ ಪಂ.ಮೃತ್ಯುಂಜಯ ಅಗಡಿ, ಹಿಂದೂಸ್ತಾನಿ ವಾಯೋಲಿನ್ ವಾದಕ ಪಂ.ವಾದಿರಾಜ್ ನಿಂಬರಗಿ, ಖ್ಯಾತ ಸಿತಾರ ವಾದಕ ಉಸ್ತಾದ್ ಶಫೀಕ್ ಖಾನ್, ಹಿಂದೂಸ್ತಾನಿ ಗಾಯಕಿ ವಿದುಷಿ ರೇಖಾ ಹೆಗಡೆ, ಉಸ್ತಾದ ನಿಸಾರ ಅಹಮ್ಮದ, ಪಂ. ನಾಗೇಶ ಅಡಗಾಂವಕರ ಅವರಿಗೆ ಸಾಧಕ ಶಿವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರೊಂದಿಗೆ ರಾಘವೇಂದ್ರ ಆಯಿ ಅವರಿಗೆ ಕಲಾ ಪೋಷಕ ಸಾಧಕ ಶಿವ ಹಾಗೂ ಖ್ಯಾತ ಯುವ ಹಿಂದೂಸ್ತಾನಿ ಗಾಯಕರಾದ ಸರ್ಫರಾಜ್ ಖಾನ್ ಮತ್ತು ಫರಾಜ್ ಖಾನ್ ಅವರಿಗೆ ಯುವ ಸಾಧಕ ಶಿವ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಅವರು ವಿವಿಧ ರಾಗಗಳಲ್ಲಿ ಸಂಗೀತ ಕಛೇರಿ ನಡೆಸಿದರು.ಆರಂಭದಲ್ಲಿ ಕಲಕೇರಿ ಸಂಗೀತ ವಿದ್ಯಾಲಯ, ನಾಗಶಿವ ಸಂಗೀತ ವಿದ್ಯಾಲಯ, ಡಾ. ಪರಶುರಾಮ ಕಟ್ಟಿಸಂಗಾವಿ ಅವರ ಶಿಷ್ಯ ಬಳಗದಿಂದ ಭಕ್ತಿ ಸಂಗೀತ ನಡೆಯಿತು. ಬೆಂಗಳೂರಿನ ಅನಿತಾ ಕಬೀರ, ಸುಷ್ಮಾ ಚಿವುಟೆ ಹಾಗೂ ಅನಿತಾ ಪತ್ತಾರ ಸುಗಮ ಸಂಗೀತ ಪ್ರಸ್ತುತಪಡಿಸಿದರು. ವಿದ್ವಾನ್ ಹರ್ಷಾ ಆಚಾರ್ಯ ಭಕ್ತಿಗೀತೆಗಳು ಜನಮನ ಸೊರೆಗೊಂಡವು. ದೇವಸ್ಥಾನದ ವಿಶ್ವಸ್ಥ ಮಂಡಳಿ ಪದಾಧಿಕಾರಿಗಳು, ಆನಂದಕಂದ ಗೆಳೆಯರ ಬಳಗ, ಸ್ನೇಹಿತರು ಸಂಗೀತ ಪ್ರೀಯರ ಬಳಗ, ಸಂಘಟಕರಾದ ವೀರಣ್ಣಾ ಪತ್ತಾರ, ಸುಖದ ಜೋಶಿ, ಲಲಿತ ಭಂಡಾರಿ, ಶಶಿಧರ ನರೇಂದ್ರ, ರಾಜು ಕುಲಕರ್ಣಿ, ಶಂಕರ ಮಂಗಳಗಟ್ಟಿ, ಸೋಮೇಶ ಪಟ್ಟಣಕೋಡಿ, ಪ್ರಕಾಶ ಬಾಳಿಕಾಯಿ ಮತ್ತಿತರರು ಇದ್ದರು. ಆರತಿ ದೇವಶಿಖಾಮಣಿ, ಹರ್ಷವರ್ಧನ ಶೀಲವಂತ ನಿರೂಪಿಸಿದರು. ಅರ್ಚನಾ ಪತ್ತಾರ ವಂದಿಸಿದರು. ಸಂಗೀತೋತ್ಸವದ ವಿನ್ಯಾಸವನ್ನು ನಯನ ಶಿರೋಳಕರ ನಿರ್ವಹಿಸಿದರು.