ವಕೀಲರ ಹತ್ಯೆ ಖಂಡಿಸಿ: ಚಿಕ್ಕಮಗಳೂರಿನಲ್ಲಿ ವಕೀಲರ ಸಂಘದ ಪ್ರತಿಭಟನೆ

KannadaprabhaNewsNetwork | Published : Aug 15, 2024 1:51 AM

ಸಾರಾಂಶ

ಚಿಕ್ಕಮಗಳೂರು, ವಿಜಯಪುರದ ವಕೀಲ ರವಿ ಎಂಬುವವರ ಹತ್ಯೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ ನೊಂದ ಕುಟುಂಬಕ್ಕೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಚಿಕ್ಕಮಗಳೂರು ವಕೀಲರ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತ ಮುಖಾಂತರ ರಾಜ್ಯ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.

ಜಿಲ್ಲಾಡಳಿತ ಮುಖಾಂತರ ರಾಜ್ಯ ಸರ್ಕಾರಕ್ಕೆ ಸಂಘದ ಪದಾಧಿಕಾರಿಗಳ ಮನವಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿಜಯಪುರದ ವಕೀಲ ರವಿ ಎಂಬುವವರ ಹತ್ಯೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ ನೊಂದ ಕುಟುಂಬಕ್ಕೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಚಿಕ್ಕಮಗಳೂರು ವಕೀಲರ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತ ಮುಖಾಂತರ ರಾಜ್ಯ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.

ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ, ಮೂಲತಃ ರವಿ ಅವರು ವಕೀಲ ವೃತ್ತಿಯಲ್ಲಿದ್ದು ದುಷ್ಕರ್ಮಿಗಳ ಗುಂಪೊಂದು ವಕೀಲರ ದ್ವಿಚಕ್ರ ವಾಹನಕ್ಕೆ ದುರುದ್ದೇಶದಿಂದ ಡಿಕ್ಕಿ ಹೊಡೆದು ಸುಮಾರು 2 ಕಿ.ಮೀ. ದೂರವರೆಗೆ ಎಳೆದುಕೊಂಡು ಹೋಗಿ ಭೀಕರವಾಗಿ ಕೊಲೆಗೈದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಐವರು ಆರೋಪಿತರನ್ನು ಬಂಧಿಸಿದ್ದು ಕಠಿಣ ಶಿಕ್ಷೆ ನೀಡಬೇಕು ಎಂದರು.ಮುಂದಿನ ದಿನಗಳಲ್ಲಿ ವಕೀಲರ ಮೇಲೆ ಈ ರೀತಿ ಹಲ್ಲೆ, ದೌರ್ಜನ್ಯ ಪ್ರಕರಣಗಳು ಜರುಗದಂತೆ ಹಾಗೂ ಪ್ರಾಣಹಾನಿ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರಕರಣವನ್ನು ನ್ಯಾಯೋಚಿತವಾಗಿ ಸೂಕ್ತ ತನಿಖೆ ಮಾಡಿ ಆರೋಪಿಗೆ ಶಿಕ್ಷೆ ಆಗುವಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.ಈ ರೀತಿಯ ಪ್ರಕರಣದ ವಿಚಾರಣೆ ನಡೆಸಲು ವಿಶೇಷ ತ್ವರಿತ ನ್ಯಾಯಾಲಯವನ್ನು ಗೊತ್ತುಪಡಿಸಿ ಶೀಘ್ರ ನ್ಯಾಯ ದೊರಕುವಂತೆ ಮಾಡಬೇಕು. ನೊಂದ ಕುಟುಂಬಕ್ಕೆ ಭದ್ರತೆಯನ್ನು ಸರ್ಕಾರದಿಂದ ನೀಡಬೇಕು ಎಂದು ವಕೀಲರ ಸಂಘ ಒತ್ತಾಯಿಸುತ್ತದೆ ಎಂದರು.ಇದೇ ವೇಳೆ ವಕೀಲರು ಹಾಗೂ ನ್ಯಾಯಾಧೀಶರ ಕುಟುಂಬದ ಸದಸ್ಯರಿಗೆ ಆಟೋಟ, ಒಳಾಂಗಣ, ಹೊರಾಂಗಣ ಚಟುವಟಿಕೆ ನಡೆಸಲು ಸ್ಥಳಾವಕಾಶದ ಅಗತ್ಯವಿದೆ. ಅಲ್ಲದೇ ಹೊರಭಾಗದಿಂದ ಜಿಲ್ಲೆಗೆ ಬರುವ ಅತಿಥಿ ವಕೀಲರು ಹಾಗೂ ಕುಟುಂಬದ ಸದಸ್ಯರಿಗೆ ಊಟ, ವಸತಿ, ಅಧ್ಯಯನ ಕೇಂದ್ರ, ಗ್ರಂಥಾಲಯ, ಸಾಂಸ್ಕೃತಿಕ ಚಟುವಟಿಕೆ, ವಸತಿಗೃಹ, ಸಭಾಂಗಣ ನಿರ್ಮಿಸಲು ಹಾಗೂ ಸಮಾಜಮುಖಿ ಕಾರ್ಯಕ್ರಮಕ್ಕೆ ನೂತನ ನ್ಯಾಯಾಲಯ ಕಟ್ಟಡದ ಸಮೀಪ 4.30 ಎಕರೆ ಸರ್ಕಾರಿ ಜಮೀನು ಮೀಸಲಿಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೆ.ಎಸ್.ಶರತ್‌ಚಂದ್ರ, ಕಾರ್ಯದರ್ಶಿ ಆರ್.ಅನಿಲ್‌ಕುಮಾರ್, ಖಜಾಂಚಿ ಡಿ.ಬಿ.ದೀಪಕ್, ಸಹ ಕಾರ್ಯದರ್ಶಿ ಎನ್.ಎ.ಪ್ರಿಯದರ್ಶಿನಿ, ಕಾರ್ಯಕಾರಿ ಸಮಿತಿ ಸದಸ್ಯ ಪಿ.ಪರಮೇಶ್, ವಕೀಲರಾದ ವನಿತಾ ಹಾಜರಿದ್ದರು. 14 ಕೆಸಿಕೆಎಂ 4ವಿಜಯಪುರದ ವಕೀಲ ರವಿ ಎಂಬುವವರ ಹತ್ಯೆಗೈದ ಆರೋಪಿ ಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ವಕೀಲರು ಬುಧವಾರ ಮನವಿ ಸಲ್ಲಿಸಿದರು.

Share this article