ಅಸಮರ್ಪಕ ವಿದ್ಯುತ್ ಪೂರೈಕೆಗೆ ಖಂಡನೆ

KannadaprabhaNewsNetwork |  
Published : Mar 11, 2025, 12:46 AM IST
ಪ್ರತಿಭಟನೆ ನಡೆಯಿತು | Kannada Prabha

ಸಾರಾಂಶ

ಸಾಗರ: ಗ್ರಾಮಾಂತರ ಪ್ರದೇಶದಲ್ಲಿನ ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಹಾಗೂ ಟಿ.ಸಿ. ಕೊರತೆ ನೀಗಿಸುವಂತೆ ಒತ್ತಾಯಿಸಿ ಸೋಮವಾರ ಬಿಜೆಪಿ ವತಿಯಿಂದ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಸಾಗರ: ಗ್ರಾಮಾಂತರ ಪ್ರದೇಶದಲ್ಲಿನ ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಹಾಗೂ ಟಿ.ಸಿ. ಕೊರತೆ ನೀಗಿಸುವಂತೆ ಒತ್ತಾಯಿಸಿ ಸೋಮವಾರ ಬಿಜೆಪಿ ವತಿಯಿಂದ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಚ್.ಹಾಲಪ್ಪ ಮಾತನಾಡಿ, ಜಿಲ್ಲೆಯಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ರೈತರು, ಜನಸಾಮಾನ್ಯರು ಕಂಗಾಲಾಗಿದ್ದಾರೆ. ಬಹುವಾರ್ಷಿಕ ಬೆಳೆಗಳು ನೀರಿನ ಅಭಾವದಿಂದ ಸಂಪೂರ್ಣ ನಾಶವಾಗಿದ್ದು, ಕೂದಲು ಸರಿ ಮಾಡಿಕೊಂಡು ಓಡಾಡುವ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಕನ್ನಡಕ ಹಾಕಿಕೊಂಡು ತಿರುಗುವ ಶಾಸಕರಿಗೆ ರೈತರ ಕಷ್ಟ ಗೊತ್ತಾಗುತ್ತಿಲ್ಲವೇ ಎಂದು ಪ್ರಶ್ನಿಸಿದರು.

೬೦ ವರ್ಷದ ಮುಳುಗಡೆ ಸಮಸ್ಯೆ ಕುರಿತು ಹಾಲಪ್ಪ ಸಗಣಿ ತಿನ್ನುತ್ತಿದ್ದರಾ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಪ್ರಶ್ನೆ ಮಾಡಿದ್ದರು. ಕಳೆದ ಮೂರು ತಿಂಗಳಿನಿಂದ ಗ್ರಾಮಾಂತರ ಪ್ರದೇಶದಲ್ಲಿನ ವಿದ್ಯುತ್ ಸಮಸ್ಯೆಗೊತ್ತಿದ್ದೂ ಗೊತ್ತಿಲ್ಲದಂತೆ ಇರುವ ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರೆ ನೀವು ಏನು ತಿನ್ನುತ್ತಿದ್ದೀರಿ ಎಂದು ಖಾರವಾಗಿ ತಿರುಗೇಟು ನೀಡಿದರು.

ರಾಜ್ಯದ ವಿದ್ಯುತ್ ಸಮಸ್ಯೆ ಬಗ್ಗೆ ಗಮನ ಹರಿಸಲು ವಿದ್ಯುತ್ ಸಚಿವರಿಗೆ ಖಾತೆ ಕುರಿತು ಮಾಹಿತಿಯೆ ಇಲ್ಲ. ಭ್ರಷ್ಟಾಚಾರದ ಹಣದಲ್ಲಿ ಕೂರ್ಗ್ನಲ್ಲಿ ಸಾವಿರಾರು ಎಕರೆ ತೋಟ ಖರೀದಿ ಮಾಡಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಒಂದು ದಿನವೂ ತೋಟದಲ್ಲಿ ಓಡಾಡಿದ ಅನುಭವ ಹೊಂದಿಲ್ಲ. ಈ ಹಿಂದೆ ಶೋಭಾ ಕರಂದ್ಲಾಜೆ, ಕೆ.ಎಸ್.ಈಶ್ವರಪ್ಪ ಅಂಥವರು ಮಳೆ ಕೊರತೆ, ಡ್ಯಾಂಗಳಲ್ಲಿ ನೀರಿನ ಸಂಗ್ರಹಣೆ ಕಡಿಮೆ ಇದ್ದ ಸಂದರ್ಭದಲ್ಲಿಯೂ ರಾಜ್ಯದ ಜನರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಿದ್ದರು. ಆದರೆ ಈಗಿನ ಸಚಿವರಿಗೆ ವಿದ್ಯುತ್ ನಿರ್ವಹಣೆ ಬಗ್ಗೆಯೆ ಗಮನ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿದರು.

ಕ್ಷೇತ್ರವ್ಯಾಪ್ತಿಯಲ್ಲಿ ನಾನು ಶಾಸಕನಾಗಿದ್ದಾಗ, ಎಂಎಸ್‌ಐಎಲ್ ಅಧ್ಯಕ್ಷನಾಗಿದ್ದಾಗ ಏನೇನು ಅಭಿವೃದ್ಧಿಮಾಡಿದ್ದೇನೆ, ಅನುದಾನ ಎಷ್ಟು ತಂದಿದ್ದೇನೆ ಎಂದು ಅಂಕಿಅಂಶಗಳ ವಿವರ ನನ್ನಲ್ಲಿದೆ. ನೀವು ಶಾಸಕರಾಗಿ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೀವು ಎಷ್ಟು ಅನುದಾನ ತಂದಿದ್ದೀರಿ ಎಂದು ಲೆಕ್ಕಕೊಡಿ ಎಂದು ಶಾಸಕ ಬೇಳೂರಿಗೆ ಸವಾಲು ಹಾಕಿದರು.

ಮುಂದಿನ ನಾಲ್ಕೈದು ದಿನಗಳಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸದೆ ಹೋದಲ್ಲಿ ಕಚೇರಿಗೆ ಬೀಗ ಹಾಕುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಮಾಜಿ ಶಾಸಕ ಬಿ.ಸ್ವಾಮಿರಾವ್ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ಗಂಭೀರವಾದ ವಿದ್ಯುತ್ ಸಮಸ್ಯೆಯಿದ್ದು ಸಚಿವರು, ಶಾಸಕರು ಏನು ಮಾಡುತ್ತಿದ್ದೀರಿ. ರೈತರು ತಮ್ಮ ಜಮೀನಿಗೆ ವಿದ್ಯುತ್ ಸಮಸ್ಯೆಯಿಂದ ನೀರು ಹರಿಸಲಾಗದೆ ಫಸಲು ಕಳೆದುಕೊಳ್ಳುತ್ತಿದ್ದಾರೆ. ಶಾಸಕರು ಸುಮಾರು ೨ ಕೋಟಿ ರು. ವೆಚ್ಚದಲ್ಲಿ ಅನುಶ್ರೀಯನ್ನು ಕರೆಸಿ ರಸಮಂಜರಿ ಕಾರ್ಯಕ್ರಮ ಏರ್ಪಡಿಸಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಎಂದು ದೂರಿದ ಅವರು, ಅಮ್ಮನಘಟ್ಟ ದೇವಸ್ಥಾನಕ್ಕೆ ಸರ್ಕಾರದಿಂದ ಮಂಜೂರಾಗಿದ್ದ ಹಣವನ್ನು ತಡೆಹಿಡಿದು ದೈವ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.

ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ಶಾಸಕರಿಗೆ ಕ್ಷೇತ್ರದ ಸಮಸ್ಯೆ ಬಗೆಹರಿಸುವ ಇರಾದೆ ಇಲ್ಲ. ಅವರು ಯಾವ ಅಧಿಕಾರಿ ಬಂದು ಎಷ್ಟು ವರ್ಷವಾಗಿದೆ, ಎಲ್ಲಿಗೆ ವರ್ಗಾಯಿಸಬೇಕು ಎನ್ನುವ ಚಿಂತೆಯಲ್ಲಿದ್ದಾರೆ. ರೈತರ ಸಂಕಷ್ಟ ನಿವಾರಿಸಲು ಶಾಸಕರ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಯೋಜನಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಪ್ರಸನ್ನ ಕೆರೆಕೈ, ದೇವೇಂದ್ರಪ್ಪ ಯಲಕುಂದ್ಲಿ, ಗಣೇಶಪ್ರಸಾದ್, ಮೈತ್ರಿ ಪಾಟೀಲ್, ಸವಿತಾ ವಾಸು, ಮಧುರಾ ಶಿವಾನಂದ್, ಪ್ರೇಮ ಸಿಂಗ್, ಸುಮ ರವಿ, ಸಂತೋಷ ಶೇಟ್, ವಿನೋದ್ ರಾಜ್, ಹರೀಶ್ ಮೂಡಳ್ಳಿ, ಅರುಣ ಕುಗ್ವೆ, ವಿ.ಮಹೇಶ್, ನಟರಾಜ ಗೇರುಬೀಸು, ಗಣಪತಿ ಇರುವಕ್ಕಿ, ಬಿ.ಸಿ.ಲಕ್ಷ್ಮಿನಾರಾಯಣ, ಸುರೇಶ್ ಸ್ವಾಮಿರಾವ್, ವೀರೇಶ್, ಇಸಾಕ್ ಇನ್ನಿತರರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ