ಕಾಂಗ್ರೆಸ್‌ ದುರಾಡಳಿತ ಖಂಡಿಸಿ ಮಂಡ್ಯದಲ್ಲಿ 5ರಿಂದ ಮೈತ್ರಿ ಮುಖಂಡರಿಂದ ಪಾದಯಾತ್ರೆ

KannadaprabhaNewsNetwork | Published : Aug 4, 2024 1:22 AM

ಸಾರಾಂಶ

ಮೈಸೂರು ಚಲೋ ಕಾರ್ಯಕ್ರಮ ಯಶಸ್ವಿಗೆ ಪ್ರತಿಯೊಂದು ಜಿಲ್ಲೆಯಲ್ಲಿಯೂ ಒಂದೊಂದು ಮೋರ್ಚಾಕ್ಕೆ ಜವಾಬ್ದಾರಿ ನೀಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ರೈತ ಮೋರ್ಚಾಕ್ಕೆ ಜವಾಬ್ದಾರಿ ನೀಡಿದ್ದಾರೆ. ಮಂಡ್ಯದ ಶಶಿಕಿರಣ ಕಾನ್ಷೇಷನ್ ಹಾಲ್‌ನಿಂದ ಇಂಡುವಾಲು ಗ್ರಾಮದವರೆಗೆ ಪಾದಯಾತ್ರೆಯಲ್ಲಿ 25,000ಕ್ಕೂ ಹೆಚ್ಚು ಕಾರ್ಯಕರ್ತರು ಆ.7 ರಂದು ಭಾಗವಹಿಸಲಿದ್ದಾರೆ. ರೈತರು, ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಕಾಂಗ್ರೆಸ್ ಸರ್ಕಾರದ ಭ್ರಷ್ಟಚಾರ ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಯಿಂದ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಯೂ ಮಂಡ್ಯ ಜಿಲ್ಲೆಯಲ್ಲಿ ಆ.5 ರಿಂದ 9 ರವರೆಗೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಎಚ್.ಆರ್.ಅಶೋಕ್‌ಕುಮಾರ್ ತಿಳಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರು ಚಲೋ ಕಾರ್ಯಕ್ರಮ ಯಶಸ್ವಿಗೆ ಪ್ರತಿಯೊಂದು ಜಿಲ್ಲೆಯಲ್ಲಿಯೂ ಒಂದೊಂದು ಮೋರ್ಚಾಕ್ಕೆ ಜವಾಬ್ದಾರಿ ನೀಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ರೈತ ಮೋರ್ಚಾಕ್ಕೆ ಜವಾಬ್ದಾರಿ ನೀಡಿದ್ದಾರೆ. ಮಂಡ್ಯದ ಶಶಿಕಿರಣ ಕಾನ್ಷೇಷನ್ ಹಾಲ್‌ನಿಂದ ಇಂಡುವಾಲು ಗ್ರಾಮದವರೆಗೆ ಪಾದಯಾತ್ರೆಯಲ್ಲಿ 25,000ಕ್ಕೂ ಹೆಚ್ಚು ಕಾರ್ಯಕರ್ತರು ಆ.7 ರಂದು ಭಾಗವಹಿಸಲಿದ್ದಾರೆ. ರೈತರು, ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಬೇಕು ಎಂದು ಹೇಳಿದರು.

ನಿಗಮದ ಹಣವನ್ನು ನೇರವಾಗಿ ಖಾತೆಗೆ ವರ್ಗಾಹಿಸಿಕೊಂಡು ದುರುಪಯೋಗಪಡಿಸಿಕೊಂಡಿರುವ ಜೊತೆಗೆ ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನವನ್ನು ಅಕ್ರಮವಾಗಿ ಪಡೆದಿರುವ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ರಾಜ್ಯಪಾಲರು ನೋಟಿಸ್ ನೀಡಿದರೂ ಕೂಡ ತಕ್ಕ ಉತ್ತರವನ್ನು ನೀಡುವ ಬದಲೂ ಸಚಿವ ಸಂಪುಟ ಸಭೆ ಕರೆದು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ಮುಡಾದಲ್ಲಿ ತಮ್ಮ ಪತ್ನಿಗೆ ನಿವೇಶನ ಮಂಜೂರು ಮಾಡಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ದ 20 ಪ್ರಕರಣಗಳನ್ನು ತನಿಖೆಗೆ ಒಳಪಡಿಸುತ್ತೇವೆಂದು ಹೇಳುತ್ತಾರೆ. ಅಧಿಕಾರ ಪಡೆದ ಕೂಡಲೇ ತನಿಖೆ ಮಾಡದೇ ಇಷ್ಟು ದಿನ ಏಕೆ ಮೌನವಾಗಿದ್ದರು. ಬೇರೆ ಪಕ್ಷದವರು ಅಕ್ರಮ ಮಾಡಿಲ್ವ ಎನ್ನುವುದರ ಮೂಲಕ ತಾವು ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ತಾವೇ ಒಪ್ಪಿಕೊಳ್ಳುತ್ತಿದ್ದಾರೆ ಎಂದರು.

ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಖಂಡಿಸಿ ಹಮ್ಮಿಕೊಂಡಿರುವ ಪಾದಯಾತ್ರೆಯೂ ಮಂಡ್ಯ ಜಿಲ್ಲೆಗೆ ಆ.5 ರಂದು ಆಗಮಿಸಲಿದೆ. 4 ದಿನಗಳವರಗೆ ನಡೆಯುವ ಪಾದಯಾತ್ರೆಗೆ ಪ್ರತಿ ತಾಲೂಕಿನ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈಗಾಗಲೇ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿ ಪಾದಯಾತ್ರೆಯಲ್ಲಿ ಪ್ರತಿಯೊಬ್ಬರು ಭಾಗವಹಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸು ಸಚಿವರು ಆಗಿರುವುದರಿಂದ ಎಲ್ಲಾ ಹಗರಣಗಳಿಗೆ ನೇರ ಹೊಣೆಯನ್ನು ಹೊತ್ತು ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ರೈತ ಮೋರ್ಚಾದ ಶಶಿಕುಮಾರ್, ರಾಮಣ್ಣ, ಮಂಜುನಾಥ್, ರಾಜೇಶ್, ಮಹೇಶ್, ಜವರೇಗೌಡ ಇದ್ದರು.

Share this article