ಕನ್ನಡಪ್ರಭ ವಾರ್ತೆ ಮೈಸೂರು
ಜಸ್ಟೀಸ್ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಹೊಸದಾಗಿ ಜಾತಿ ಸಮೀಕ್ಷೆ ನಡೆಸಿ ಆ ವರದಿಯ ಆಧಾರದ ಮೇಲೆ ಒಳ ಮೀಸಲಾತಿ ಜಾರಿಗೊಳಿಸಿ ಎಂದು ಕರ್ನಾಟಕ ರಾಜ್ಯ ಎಸ್ಸಿ ಮತ್ತು ಎಸ್ಟಿ ನೌಕರರ ಸಂಘದ ಅಧ್ಯಕ್ಷ ಡಿ. ಚಂದ್ರಶೇಖರಯ್ಯ ಆಗ್ರಹಿಸಿದರು.ಮಾನಸ ಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ, ಕರ್ನಾಟಕ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಭಾನುವಾರ ಆಯೋಜಿಸಿದ್ದ ವೈಜ್ಞಾನಿಕವಾಗಿ ಒಳ ಮೀಸಲಾತಿ ಜಾರಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಅವೈಜ್ಞಾನಿಕವಾಗಿರುವ ಒಳ ಮೀಸಲಾತಿ ಆಯೋಗದ ವರದಿಯನ್ನು ಕೈಬಿಡಬೇಕು. ಮೀಸಲಾತಿಗೆ ಹೊಲೆಯ ಸಮುದಾಯದ ವಿರೋಧವಿದೆ ಎಂದು ಸೋದರ ಮಾದಿಗ ಸಮುದಾಯವು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದೆ. ಆದರೆ, ಎರಡು ಸಮುದಾಯಗಳ ಹಿತದೃಷ್ಟಿಯಿಂದ ಒಳ ಮೀಸಲಾತಿ ಜಾರಿಗೆ ಬರಬೇಕು. ಸರ್ಕಾರಕ್ಕೂ ನಾವು ಇದನ್ನೆ ಮನವರಿಕೆ ಮಾಡಿದ್ದೇವೆ. ಆದರೆ, ಈಗಿನ ವರದಿ ಆಧಾರದ ಮೇಲೆ ಅಲ್ಲ ಎಂದರು.ಹೊಸದಾಗಿ ಜಾತಿ ಸಮೀಕ್ಷೆ ನಡೆಸಿರುವುದರಿಂದ ಸರ್ಕಾರಕ್ಕೆ ದೊಡ್ಡ ವೆಚ್ಚವೇನು ಆಗುವುದಿಲ್ಲ. ಎಸ್.ಸಿ.ಪಿ, ಟಿ.ಎಸ್.ಪಿ ಹಣವನ್ನು ಅನ್ಯ ಯೋಜನೆಗೆ ಬಳಸುವುದನ್ನು ನಿಲ್ಲಿಸಿ 250 ಕೋಟಿ ರೂ.ವೆಚ್ಚದಲ್ಲಿ ಮೂರು ತಿಂಗಳಲ್ಲಿ ಜಾತಿ ಸಮೀಕ್ಷೆ ನಡೆಸಿ ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.
ಒಳಮೀಸಲಾತಿ ಜಾರಿಗೊಳಿಸಲು ಪ.ಪಂಗಡ ಕಾನೂನಿನ ತೊಡಕನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕವಾಗಿ ಒಳ ಜಾತಿಗಳನ್ನು ವರ್ಗಿಕರಿಸಿ, ಆದ್ಯತೆ ಮೇರೆಗೆ ಮೀಸಲಾತಿ ನೀಡಬೇಕು. ಇದಕ್ಕಾಗಿ ಆಳವಾದ ಅಧ್ಯಯನ ಅಗತ್ಯವಿದೆ. ಇಂತಹ ಅಧ್ಯಯನದ ಮೇಲೆ ಒಳ ಮೀಸಲಾತಿ ಜಾರಿಗೆ ತರಬೇಕು. ಹೀಗಾಗಿ ಜಸ್ಟೀಸ್ ನಾಗಮೋಹನ್ ದಾಸ್ ನೇತೃತ್ವದಲ್ಲಿ ಎಸ್.ಸಿ.ಪಿ ಅನುದಾನ ಬಳಸಿ ಮೂರು ತಿಂಗಳ ಒಳಗೆ ಸಮಗ್ರ ವರದಿ ಸ್ವೀಕರಿಸಿ ಒಳ ಮೀಸಲಾತಿ ಜಾರಿ ಮಾಡಿ. ಇದಕ್ಕೆ ನಾವೆಲ್ಲರೂ ಬದ್ಧರಾಗಿ ಇರುತ್ತೇವೆ ಎಂದರು.ಸದಾಶಿವ ಆಯೋಗದ ವರದಿ ತಪ್ಪು ದತ್ತಾಂಶಗಳಿಂದ ರೂಪಿತವಾಗಿದೆ. ಅದು ತಿರಸ್ಕಾರ ಯೋಗ್ಯ. ಸದಾಶಿವ ಆಯೋಗದ ವರದಿಯನ್ನು ಹಿಂದಿನ ಬಿಜೆಪಿ ತಿರಸ್ಕಾರ ಮಾಡಿದ್ದು. ಈಗಿನ ಕಾಂಗ್ರೆಸ್ ಸರ್ಕಾರವೂ ಪರಿಗಣಿಸಿಲ್ಲ. ತಪ್ಪು ಮಾಹಿತಿ ಇರುವ ವರದಿ ಸ್ವೀಕರಿಸಲು ಸಾಧ್ಯವೇ? ಈ ವರದಿ ಅನ್ವಯ ಮೀಸಲಾತಿ ಹಂಚಿಕೆ ಮಾಡಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಆದಿ ಕರ್ನಾಟಕ, ಆದಿ ದ್ರಾವಿಡ ಜಾತಿಗಳ ಗೊಂದಲ ಇತ್ಯರ್ಥಪಡಿಸಿಲ್ಲ. ಆದರೂ ಕಡ್ಲೆಪುರಿಯಂತೆ ಹಂಚಿದ್ದಾರೆ. ಇದನ್ನು ಒಪ್ಪಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.ಸದಾಶಿವ ಆಯೋಗದ ವರದಿಯ ಮೂರು ಪುಟವನ್ನು ಕೈನಲ್ಲಿ ಬರೆಯಲಾಗಿದೆ. ಬರೆದವರು ಯಾರು ಎಂಬುದೂ ತಿಳಿದಿದೆ. ಶಿಫಾರಸ್ಸು ಸಂವಿಧಾನ ವಿರೋಧಿ. ಗೃಹಮಂತ್ರಿ ಪರಮೇಶ್ವರ್ ಆದಿ ದ್ರಾವಿಡ ಎಂದು ದಾಖಲಿಸಿದ್ದಾರೆ. ಹೊಲಯ ಸಮಾಜ ಒಳ ಮೀಸಲು ವಿರೋಧಿಸುತ್ತಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಹಂಚಿಕೊಳ್ಳಬೇಕು ಎಂಬುದಕ್ಕೆ ಬದ್ಧರಾಗಿದ್ದೇವೆ ಎಂದರು.
ಕರ್ನಾಟಕ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್. ಭಾಸ್ಕರ ಪ್ರಾಸ್ತಾವಿಕವಾಗಿ ಮಾತನಾಡಿ, ಒಳ ಮೀಸಲು ಜಾರಿಗೆ ಕುಲಶಾಸ್ತ್ರೀಯ ಅಧ್ಯಯನ ನಡೆಸಬೇಕು. ಸಾಮಾಜಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಸ್ಥಿತಿಗತಿಯನ್ನು ನಿಖರ ಮಾಹಿತಿ ಕಲೆಹಾಕಿ ಮೀಸಲಾತಿ ನಿಗದಿ ಪಡಿಸಬೇಕು. 101 ಪ. ಜಾತಿಗಳಲ್ಲಿ ಆದಿದ್ರಾವಿಡ, ಆದಿ ಕರ್ನಾಟಕ ಜಾತಿಯನ್ನು ಆದ್ಯತೆ ಮೇರೆಗೆ ಅಧ್ಯಯನ ಮಾಡಬೇಕು ಎಂದು ಆಗ್ರಹಿಸಿದರು.ಗಾಂಧಿನಗರ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಐಎಫ್ಎಸ್ ಅಧಿಕಾರಿ ಡಾ.ಆರ್. ರಾಜು, ಲೇಖಕ ಸಿ. ಹರಕುವಾರ್ ಮುಖ್ಯ ಭಾಷಣ ಮಾಡಿದರು. ಮಾಜಿ ಮೇಯರ್ ಪುರುಷೋತ್ತಮ್, ಪ.ಜಾತಿಗಳ ಒಳಮೀಸಲಾತಿ ಅನುಷ್ಠಾನ ಜಾಗೃತ ಸಮಿತಿ ಸಂಚಾಲಕ ಡಾ. ನವೀನ್ ಮನಿಯ, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್ ಇದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ಆರ್. ಕಾಂತರಾಜು ಸ್ವಾಗತಿಸಿದರು. ಅಮ್ಮ ರಾಮಚಂದ್ರ ಮತ್ತು ತಂಡದವರು ಅಂಬೇಡ್ಕರ್ ಮತ್ತು ಬುದ್ಧ ಗೀತೆಗಳನ್ನು ಹಾಡಿದರು.
ದೇಮ ನಿಂದನೆ ನಿಲ್ಲಿಸದಿದ್ದರೆ ಹೋರಾಟದ ಎಚ್ಟರಿಕೆಮೈಸೂರು: ಹಿರಿಯ ಸಾಹಿತಿ ದೇವನೂರ ಮಹಾದೇವ ಅವರನ್ನು ಒಳ ಮೀಸಲಾತಿ ವಿಚಾರಕ್ಕೆ ಎಳೆದು ತೆಗೆಳುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಸಮುದಾಯ ತಿರುಗಿ ಬೀಳಲಿದೆ ಎಂದು ರಾಜ್ಯ ಎಸ್ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷ ಡಿ.ಚಂದ್ರಶೇಖರಯ್ಯ ಎಚ್ಚರಿಕೆ ನೀಡಿದರು.
ರಾಜಕೀಯ ಹಿತದೃಷ್ಟಿಯಿಂದ ದಲಿತ ಸಂಘರ್ಷ ಸಮಿತಿಯನ್ನು ಒಡೆದರು ಎಂದು ಗೋವಿಂದಯ್ಯ ಹೇಳಿದ್ದಾರೆ. ದೇವನೂರ ಮಹಾದೇವ ಅವರು ಎಂದಾದರೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ? ಜನತಾ ಪಕ್ಷ, ಸಂಯುಕ್ತ ದಳ, ಜಾ.ದಳದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ನೀನು. ಆಮೇಲೆ ಕಾಂಗ್ರೆಸ್ ಸೇರಿ ಈಗ ದೊಗಳೆ ಚಡ್ಡಿ ಹಾಕಿಕೊಂಡಿರುವ ನೀನು (ಗೋವಿಂದಯ್ಯ) ದೇವನೂರ ಮಹಾದೇವ ಅವರನ್ನು ಯಾಕೇ ಎಳೆದು ತರುತ್ತೀಯಾ? ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.ದೇವನೂರು ಮಹಾದೇವ ದಲಿತ ಸಮುದಾಯದ ಜೀವಂತ ಸಾಕ್ಷಿ. ಇದ್ದದ್ದನ್ನು ನೇರವಾಗಿ ಹೇಳುತ್ತಾರೆ. ನಿನಗೆ ತಾಕತ್ತಿದ್ದರೆ ಪುಸ್ತಕ ಬರೆದು ತೋರಿಸು. ಅವರು ಆರ್ಎಸ್ಎಸ್ ಆಳ-ಅಗಲ ಬರೆದಂತೆ ನೀನು ಬರೆ. ರಾಜಕೀಯ ಸೌಲಭ್ಯಕ್ಕಾಗಿ ದೇವನೂರ ಮಹಾದೇವ ಅವರನ್ನು ತೆಗಳುವುದನ್ನು ಗೋವಿಂದಯ್ಯ ನಿಲ್ಲಿಸಬೇಕು. ಇನ್ನೂ ಮುಂದೆ ದೇವನೂರ ಮಹಾದೇವ ವಿರುದ್ಧ ಮಾತನಾಡಿದರೇ ತಿರುಗಿ ಬೀಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.