ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಮಾದರಿಯಲ್ಲಿ ಎ ಮತ್ತು ಬಿ ದರ್ಜೆಯ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ ಕಡ್ಡಾಯವಾಗಿ ವ್ಯಕ್ತಿತ್ವ/ಸಂದರ್ಶನ ಪರೀಕ್ಷೆ ನಡೆಸಬೇಕು ಹಾಗೂ ಪರೀಕ್ಷೆಯ ಒಟ್ಟಾರೆ ಅಂಕದ ಶೇ.12.5ರಷ್ಟು ಅಂಕಗಳನ್ನು ಇದಕ್ಕೆ ನಿಗದಿಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕೆಪಿಎಸ್‌ಸಿ ಶಿಫಾರಸು ಮಾಡಿದೆ.ಕಾರ್ಯವೈಖರಿಯಲ್ಲಿ ಸುಧಾರಣೆ ತರಲು ಇತ್ತೀಚೆಗೆ ಯುಪಿಎಸ್‌ಸಿ ಕಚೇರಿಗೆ ಭೇಟಿ ನೀಡಿದ್ದ ಕೆಪಿಎಸ್‌ಸಿಯ ಅಧ್ಯಕ್ಷ, ಕಾರ್ಯದರ್ಶಿಯವರನ್ನು ಒಳಗೊಂಡ 10 ಸದಸ್ಯರ ಸಮಿತಿಯು ಅಧ್ಯಯನ ನಡೆಸಿ ಅನುಷ್ಠಾನಗೊಳಿಸಬೇಕಾದ 7 ಶಿಫಾರಸುಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಎ ದರ್ಜೆ ವೃಂದದ ಹುದ್ದೆಗಳಿಗೆ ಸಂದರ್ಶನ ನಿಗದಿಪಡಿಸುವ ವಿವೇಚನಾಧಿಕಾರವನ್ನು ಇಲಾಖಾ ಮುಖ್ಯಸ್ಥರಿಗೆ ನೀಡಿರುವುದನ್ನು ರದ್ದುಪಡಿಸಿ, ಎ ಮತ್ತು ಬಿ ಹುದ್ದೆಗಳಿಗೆ ಕಡ್ಡಾಯವಾಗಿ 12.5ರಷ್ಟು ಅಂಕಗಳ ಸಂದರ್ಶನ ಕಡ್ಡಾಯಗೊಳಿಸಬೇಕು.ಇನ್ನು ಯುಪಿಎಸ್‌ಸಿ ಮತ್ತು ಬಹುತೇಕ ರಾಜ್ಯಗಳ ಆಯೋಗಗಳು ಎ ಮತ್ತು ಬಿ ಹುದ್ದೆಗಳನ್ನು ಮಾತ್ರ ನೇಮಿಸುತ್ತಿವೆ. ಸಿ ಮತ್ತು ಡಿ ವೃಂದ ಹಾಗೂ ಸಮವಸ್ತ್ರ ವೃಂದದ ಹುದ್ದೆಗಳನ್ನು ಪ್ರತ್ಯೇಕ ಪ್ರಾಧಿಕಾರಗಳು ನಡೆಸುತ್ತವೆ. ಹೀಗಾಗಿ, ಕೆಪಿಎಸ್‌ಸಿಗೂ ಎ ಮತ್ತು ಬಿ ದರ್ಜೆಯ ಹುದ್ದೆಗಳನ್ನು ಮಾತ್ರ ನೇಮಿಸುವ ಜವಾಬ್ದಾರಿ ವಹಿಸಬೇಕು. ಸಿ ದರ್ಜೆಯ ಹುದ್ದೆಗಳ ನೇಮಕಕ್ಕೆ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು ಎಂದು ಕೋರಲಾಗಿದೆ.
ಯುಪಿಎಸ್ಸಿ ಮಾದರಿ ಶಿಫಾರಸುಗಳು: ಎಲ್ಲಾ ವೃಂದದ ಹುದ್ದೆಗಳ ಶಿಸ್ತು ಪ್ರಕರಣ, ಮೇಲ್ಮನವಿ, ದಂಡನೆ, ಪಿಂಚಣಿ ಕಡಿತ ಮತ್ತು ತಡೆ ವಿಷಯಗಳ ಬಗ್ಗೆ ಕೆಪಿಎಸ್‌ಸಿಯೊಂದಿಗೆ ಕಡ್ಡಾಯವಾಗಿ ಸಮಾಲೋಚಿಸಬೇಕು.ಎ ಮತ್ತು ಬಿ ದರ್ಜೆಯ ಹುದ್ದೆಗಳ ಪದೋನ್ನತಿ, ವೃಂದ ಮತ್ತು ನೇಮಕಾತಿ ನಿಯಮಗಳು, ಸೇವಾ ನಿಯಮಗಳ ರಚನೆ, ತಿದ್ದುಪಡಿ ಮೊದಲು ಕೆಪಿಎಸ್‌ಸಿಯೊಂದಿಗೆ ಚರ್ಚಿಸಿ, ನೀಡುವ ಅಭಿಪ್ರಾಯದಂತೆ ಮುಂದುವರೆಯಬೇಕು. ಇನ್ನು ಗ್ರೂಪ್ ಎ, ಬಿ ಮತ್ತು ಸಿ ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ ನಿಗದಿಪಡಿಸುವ ವಿದ್ಯಾರ್ಹತೆಗಳಲ್ಲಿ ‘ತತ್ಸಮಾನ ವಿದ್ಯಾರ್ಹತೆ’ ಎಂಬುದನ್ನು ತೆಗೆದು ಹಾಕಬೇಕು. ಒಂದು ವೇಳೆ ಈ ವ್ಯವಸ್ಥೆ ಮುಂದುವರೆಸಬೇಕಾದರೆ ಆಯೋಗದ ಸದಸ್ಯರು, ಅಧಿಕಾರಿಗಳನ್ನು ಒಳಗೊಂಡಂತೆ ಶಿಕ್ಷಣ ಇಲಾಖೆ, ವಿಶ್ವವಿದ್ಯಾಲಯದ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸಬೇಕು.
ಪಿ.ಸಿ.ಹೋಟಾ ಸಮಿತಿ ಶಿಫಾರಸು ಪ್ರಕಾರ ಕೆಪಿಎಸ್‌ಸಿಯ ಶೇ.50ರಷ್ಟು ಅಧಿಕಾರಿ ಮತ್ತು ಸಿಬ್ಬಂದಿಯನ್ನು ಇತರ ಇಲಾಖೆಗಳಿಗೆ ನಿಯೋಜಿಸಬೇಕು. ಅಲ್ಲದೆ, ಇತರ ಇಲಾಖೆಗಳಿಂದ ಶೇ.50ರಷ್ಟು ಸಿಬ್ಬಂದಿಯನ್ನು ಕಡ್ಡಾಯವಾಗಿ ಕೆಪಿಎಸ್‌ಸಿಗೆ ನಿಯೋಜಿಸಬೇಕು. ಅಲ್ಲದೆ, ಕೆಪಿಎಸ್‌ಸಿಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ನೇಮಕಾತಿ ಮತ್ತು ನಿಯೋಜನೆ ಮೂಲಕ ಭರ್ತಿ ಮಾಡಿಕೊಳ್ಳಬೇಕು.ಯುಪಿಎಸ್ಸಿಯಂತೆ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಕಠಿಣ ಮಾನದಂಡಗಳನ್ನು ಕೆಪಿಎಸ್‌ಸಿ ಅನುಸರಿಸಿದರೆ ಉತ್ತಮವಾದ ಸರ್ಕಾರಿ ಅಧಿಕಾರಿ, ಸಿಬ್ಬಂದಿಯ ಸಮುದಾಯ ರಚನೆ ಸಾಧ್ಯವಾಗಲಿದೆ ಎಂದು ಸಮಿತಿಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.