ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು ಎಂದು ಜಿಪಂ ಸಿಇಒ ಗರೀಮಾ ಪನ್ವಾರ್ ಸೂಚಿಸಿದರು.ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮದಡಿ ಗರ್ಭಿಣಿಯರ ದಾಖಲಾತಿ ಮತ್ತು 12 ವಾರದೊಳಗೆ ಗರ್ಭಿಣಿಯರನ್ನು ಆರ್.ಸಿ.ಎಚ್. ಪೋರ್ಟಲ್‌ನಲ್ಲಿ ನೋಂದಾಯಿಸಿರುವ ವರದಿ ಪರಿಶೀಲಿಸಿ ಅವರು ಮಾತನಾಡಿದರು.
ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರ, ಯಲ್ಹೇರಿ, ಶ್ರೀನಿವಾಸಪೂರ, ತಡಿಬಿಡಿ, ಮಲ್ಹಾರ, ಯರಗೋಳ, ನಗರ ಆರೋಗ್ಯ ಕೇಂದ್ರಗಳಾದ ಯಾದಗಿರಿ, ಶಹಾಪುರದ ಪ್ರಗತಿ ತುಂಬಾ ಕಡಿಮೆಯಾಗದಂತೆ ಡಿಸೆಂಬರ್-2023ರೊಳಗಾಗಿ ನಿಗದಿತ ಗುರಿಯನ್ನು ತಲುಪಲು ಅಗತ್ಯ ಕ್ರಮ ತೆಗೆದುಕೊಳ್ಳಲು ಅವರು ಸೂಚಿಸಿದರು.ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಡಿಯಲ್ಲಿ ಪೂರ್ಣ ಲಸಿಕೆ ಪಡೆದ ಮಕ್ಕಳ ಪ್ರಗತಿಯು ಶೇ.83ರಷ್ಟು ಇದ್ದು, ಇದನ್ನು ಶೇ.100ರಷ್ಟು ಸಾಧಿಸಬೇಕು ಹಾಗೂ ಸಂಪೂರ್ಣ ಲಸಿಕೆ ಪಡೆದ ಪ್ರಗತಿಯು ಶೇ.90ರಷ್ಟು ಇದ್ದು, ಇದನ್ನು ಶೇ.100ರಷ್ಟು ಪ್ರಗತಿ ಸಾಧಿಸಲು ತಿಳಿಸಿದರು.
ಜಿಲ್ಲೆಯಲ್ಲಿ 2023ರ ಏಪ್ರಿಲ್‌ನಿಂದ ನವೆಂಬರ್ ಅಂತ್ಯದವರೆಗೆ 0-2 ವರ್ಷದ ವಯೋಮಿತಿಯಲ್ಲಿ ಒಟ್ಟು 168 ಶಿಶು ಮರಣ ಸಂಭವಿಸಿದ್ದು, ಇದರಲ್ಲಿ ಸುರಪೂರ ತಾಲೂಕಿನಲ್ಲಿ 85, 61 ಯಾದಗಿರಿಯಲ್ಲಿ ಹಾಗೂ 22 ಶಹಾಪುರ ತಾಲೂಕಿನಲ್ಲಿ ಶಿಶು ಮರಣ ಸಂಭವಿಸಿದ್ದು, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಡಳಿತ ವೈದ್ಯಾಧಿಕಾರಿಗಳು ಗಂಡಾಂತರ ಗರ್ಭಿಣಿಯರನ್ನು ನಿಗದಿತ ಸಮಯದಲ್ಲಿ ಪರಿಕ್ಷೇಗೆ ಒಳಪಡಿಸಿ ವೈದ್ಯಕೀಯ ಸೇವೆ ನೀಡಲು ಹಾಗೂ ನವಜಾತ ಶಿಶುಗಳ ಆರೋಗ್ಯ ಸೇವೆಯನ್ನು ಆಶಾ ಕಾರ್ಯಕರ್ತೆಯರ ಮುಖಾಂತರ ನೀಡಲು ಹೇಳಿದರು.ಅನೇಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮದಡಿಯಲ್ಲಿ ಮೊದಲನೆ ಹಂತದಲ್ಲಿ ಆರ್.ಬಿ.ಎಸ್.ಕೆ. ತಂಡದ ಮುಖಾಂತರ 17-18 ವರ್ಷದ ಸರಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಒಟ್ಟು 10787 ಮಕ್ಕಳ ಗುರಿ ಹೊಂದಿದ್ದು, ಇದರಲ್ಲಿ 10669 ಮಕ್ಕಳ ತಪಾಸಣೆ ಮಾಡಿ ಶೇ.98.91ರಷ್ಟು ಪ್ರಗತಿ ಸಾಧಿಸಿದ್ದು ಇದರಲ್ಲಿ 3374 ಮಕ್ಕಳಲ್ಲಿ ಸಾಧಾರಣ, 3333 ಮಕ್ಕಳಲ್ಲಿ ಮಧ್ಯಮ ಹಾಗೂ 296 ಮಕ್ಕಳಲ್ಲಿ ತೀವ್ರ ಅನೇಮಿಯಾ ಮಕ್ಕಳು ಕಂಡು ಬಂದಿದ್ದು, ತೀವ್ರ ಅನೇಮೀಯಾ ಮಕ್ಕಳಿಗೆ ವೈದ್ಯಕೀಯ ಸೇವೆ ನೀಡಲಾಗಿದೆ ಎಂದರು.
ಅನೇಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮದಡಿಯಲ್ಲಿ ಮೊದಲನೆ ಹಂತದಲ್ಲಿ ಆರ್.ಬಿ.ಎಸ್.ಕೆ ತಂಡದ ಮುಖಾಂತರ 17-18 ವರ್ಷದ ಖಾಸಗಿ ಕಾಲೇಜುಗಳಲ್ಲಿ ಒಟ್ಟು 9987 ಮಕ್ಕಳ ಗುರಿ ಹೊಂದಿದ್ದು, ಇದರಲ್ಲಿ 8849 ಮಕ್ಕಳ ತಪಾಸಣೆ ಮಾಡಿ ಶೇ.29.81ರಷ್ಟು ಪ್ರಗತಿ ಸಾಧಿಸಿದ್ದು ಇದರಲ್ಲಿ 3422 ಮಕ್ಕಳಲ್ಲಿ ಸಾಧಾರಣ, 3418 ಮಕ್ಕಳಲ್ಲಿ ಮಧ್ಯಮ ಹಾಗೂ 276 ಮಕ್ಕಳಲ್ಲಿ ತೀವ್ರ ಅನೇಮಿಯಾ ಮಕ್ಕಳು ಕಂಡು ಬಂದಿದ್ದು, ತೀವ್ರ ಅನೇಮೀಯಾ ಮಕ್ಕಳಿಗೆ ವೈದ್ಯಕೀಯ ಸೇವೆ ನೀಡಲಾಗಿದೆ ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದರು.ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲೆಯ ಹಳೆ ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಮಹಾವಿದ್ಯಾಲಯ, ಶಹಾಪರ ಮತ್ತು ಸುರಪುರ ತಾಲೂಕು ಆಸ್ಪತ್ರೆಗಳಲ್ಲಿ ಸರಕಾರದ ನಿಯಮಾನುಸಾರ ಅಗತ್ಯ ಮುಂಜಾಗ್ರತ ಕ್ರಮ ತೆಗೆದುಕೊಳ್ಳಲು ಸೂಚಿಸಿದರು.
ರಾಷ್ಟ್ರೀಯ ಆಶ್ರಿತ ರೋಗಗಳ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಹುಣಸಗಿ ತಾಲೂಕಿನಲ್ಲಿ 3 ಮೆದುಳು ಜ್ವರ ಪ್ರಕರಣಗಳು ದಾಖಲಾಗಿದ್ದು, ಸಂಬಂಧಪಟ್ಟ ಆಡಳಿತ ವೈದ್ಯಾಧಿಕಾರಿಗಳು ಈ ಕುರಿತು ಮುಂಜಾಗೃತೆ ಕ್ರಮ ತೆಗೆದುಕೊಳ್ಳಲು ಸೂಚಿಸಿದರು.ರಾಷ್ಟ್ರೀಯ ಫೈಲೇರಿಯಾ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 36 ಪ್ರಕರಣಗಳಿದ್ದು, ಈ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಹಾಗೂ ಈ ರೋಗ ಹರಡದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲು ಹಾಗೂ ಹುಣಸಗಿ, ವಡಗೇರಾ ತಾಲೂಕಿನಲ್ಲಿ ಯಶಸ್ಸಿಯಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಿದರು.