ಹರಿಹರ ಕ್ರೀಡಾಂಗಣ ವಾಣಿಜ್ಯ ಮಳಿಗೆಗಳ ಮರುಹರಾಜು ನಡೆಸಿ

KannadaprabhaNewsNetwork | Published : Nov 9, 2024 1:20 AM

ಸಾರಾಂಶ

ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಹರಿಹರ ತಾಲೂಕು ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ನೆಲ ಮತ್ತು ಮಹಡಿ ವಾಣಿಜ್ಯ ಮಳಿಗೆಗಳನ್ನು ಮರುಹರಾಜು ಪ್ರಕ್ರಿಯೆ ಕೈಗೊಳ್ಳುವವರೆಗೂ ನ.11ರಿಂದ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಜಯಕರ್ನಾಟಕ ಸಂಘಟನೆಯ ಹರಿಹರ ತಾಲೂಕು ಅಧ್ಯಕ್ಷ ಎಸ್.ಗೋವಿಂದ ಹೇಳಿದ್ದಾರೆ.

- ಜಿಲ್ಲಾಡಳಿತ ಸ್ಪಂದಿಸದಿದ್ದರೆ ನ.11ರಿಂದ ಅಹೋರಾತ್ರಿ ಉಪವಾಸ ಸತ್ಯಾಗ್ರಹ: ಅಧ್ಯಕ್ಷ ಗೋವಿಂದ ಎಚ್ಚರಿಕೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಹರಿಹರ ತಾಲೂಕು ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ನೆಲ ಮತ್ತು ಮಹಡಿ ವಾಣಿಜ್ಯ ಮಳಿಗೆಗಳನ್ನು ಮರುಹರಾಜು ಪ್ರಕ್ರಿಯೆ ಕೈಗೊಳ್ಳುವವರೆಗೂ ನ.11ರಿಂದ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಜಯಕರ್ನಾಟಕ ಸಂಘಟನೆಯ ಹರಿಹರ ತಾಲೂಕು ಅಧ್ಯಕ್ಷ ಎಸ್.ಗೋವಿಂದ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಜಿಲ್ಲಾಧಿಕಾರಿ ಅವರು ಹರಿಹರ ತಹಸೀಲ್ದಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ವಾಣಿಜ್ಯ ಮಳಿಗೆಗಳ ಮರುಹರಾಜಿಗೆ ಒತ್ತಾಯಿಸಿ, 35 ದಿನಗಳಿಂದ ಧರಣಿ ನಡೆಸುತ್ತಿದ್ದೇವೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮಗಳ ಕೈಗೊಳ್ಳಲು ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವಾಣಿಜ್ಯ ಸಂಕೀರ್ಣದ ಮಳಿಗೆಗಳ ಬಾಡಿಗೆದಾರರ ಕಾಲಾವಧಿ 2019ರಲ್ಲಿ ಪೂರ್ಣಗೊಂಡಿದೆ. ಆದರೂ, ಮಳಿಗೆಗಳನ್ನು ಖಾಲಿ ಮಾಡಿಸದೇ, ಹೊಸದಾಗಿ ನಿಯಮಾನುಸಾರ ಹರಾಜು ಪ್ರಕ್ರಿಯೆ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಲಾಗಿದೆ. ಮಳಿಗೆಗಳ ಮರುಹರಾಜು ನಡೆಸಲು ಜಿಲ್ಲಾಡಳಿತಕ್ಕೆ ನಮ್ಮ ಸಂಘಟನೆ ವತಿಯಿಂದ ಈ ಹಿಂದೆಯೇ, ಭೇಟಿಯಾಗಿ, ಮನವಿಗಳನ್ನು ಸಲ್ಲಿಸಲಾಗಿತ್ತು. ಡಿಸಿ ಅವರು 10ರಿಂದ 15 ದಿನದೊಳಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂದು ಟೀಕಿಸಿದರು.

ಕೂಡಲೇ ಹೊಸದಾಗಿ ನಿಯಮನುಸಾರ ವಾಣಿಜ್ಯ ಮಳಿಗೆಗಳನ್ನು ಮರುಹರಾಜು ಪ್ರಕ್ರಿಯೆ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಸೇರಿದಂತೆ ಇನ್ನಿತರ ಜನಪರ ಹೋರಾಟ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನ.11ರಂದು ಬೆಳಗ್ಗೆ 11 ಗಂಟೆಗೆ ಫಕ್ಕೀರಸ್ವಾಮಿ ಮಠದಿಂದ ಗಾಂಧಿ ವೃತ್ತದವರೆಗೆ ಮೆರವಣಿಗೆ ನಡೆಸಿ, ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸುಭಾಷ್, ಸರೋಜ ಕೊಟ್ರಪ್ಪನವರ, ಎಂ.ಆರ್. ಆನಂದ, ಕುಮಾರ್ ಮಲ್ಲಾಪುರ, ಎಂ.ಎನ್.ದರ್ಶನ, ರಮೇಶ್, ಸಚಿನ್ ಉಪ್ಪಾರ್ ಇತರರು ಇದ್ದರು.

- - - -8ಕೆಡಿವಿಜಿ36:

ಹರಿಹರ ನಗರದ ಕ್ರೀಡಾಂಗಣದಲ್ಲಿ ನಿರ್ಮಿಸಿದ ವಾಣಿಜ್ಯ ಮಳಿಗೆಗಳ ಮರುಹರಾಜು ಮಾಡುವಂತೆ ಅಗ್ರಹಿಸಿ ದಾವಣಗೆರೆಯಲ್ಲಿ ಜಯ ಕರ್ನಾಟಕ ಸಂಘಟನೆ ಹರಿಹರ ತಾಲೂಕು ಅಧ್ಯಕ್ಷ ಎಸ್.ಗೋವಿಂದ ತಿಳಿಸಿದರು.

Share this article