ಸಾಹಿತ್ಯೇತರರಿಗೆ ಸಮ್ಮೇಳನಾಧ್ಯಕ್ಷ ಸ್ಥಾನ: ಸಾಹಿತಿಗಳಲ್ಲಿ ಆತಂಕ

KannadaprabhaNewsNetwork | Published : Sep 28, 2024 1:16 AM

ಸಾರಾಂಶ

‘ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಸಾಹಿತಿಗಳೇ ಆಯ್ಕೆಯಾಗಬೇಕು. ಅದರಲ್ಲಿ ಬದಲಾವಣೆ ಪ್ರಶ್ನೆಯೇ ಇಲ್ಲ. ಪರಿಷತ್‌ಗೆ ಘನತೆ, ಗೌರವ ಹೆಚ್ಚಿಸಿದವರು ಸಾಹಿತಿಗಳು. ಹಿಂದಿನಿಂದಲೂ ಅವರನ್ನೇ ಆಯ್ಕೆ ಮಾಡಿಕೊಂಡು ಬರಲಾಗುತ್ತಿದೆ. ಇದು ಯಾರೋ ಒಬ್ಬರ ನಿರ್ಧಾರವಲ್ಲ. ಕಾರ್ಯಕಾರಿ ಸಮಿತಿಯಲ್ಲಿರುವ ೩೫ ಸದಸ್ಯರು ತೀರ್ಮಾನಿಸಬೇಕು.’

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಸ್ಥಾನಕ್ಕೆ ಸಾಹಿತ್ಯೇತರರನ್ನು ಆಯ್ಕೆ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿರುವುದು ಸಾಹಿತಿಗಳಲ್ಲಿ ಆತಂಕ ಮೂಡಿಸಿದೆ. ಅಲ್ಲದೆ, ಪರಿಷತ್‌ನ ರಾಜ್ಯಾಧ್ಯಕ್ಷರ ಹೇಳಿಕೆ ವಿವಾದಕ್ಕೂ ಕಾರಣವಾಗಿದೆ.

ಕನ್ನಡ ಸಾಹಿತ್ಯ ಪರಿಷತ್‌ನಿಂದ ಇದುವರೆಗೆ ೮೬ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಿವೆ. ಈ ಎಲ್ಲಾ ಸಮ್ಮೇಳನಗಳಿಗೂ ಸಾಹಿತ್ಯ ಕ್ಷೇತ್ರದವರನ್ನೇ ಆಯ್ಕೆ ಮಾಡಿಕೊಂಡು ಬರಲಾಗುತ್ತಿದೆ. ಈ ಸಂಪ್ರದಾಯಕ್ಕೆ ಬ್ರೇಕ್ ಹಾಕಿ ಕನ್ನಡ ಸೇವೆಯಲ್ಲಿ ತೊಡಗಿರುವ ಬೇರೆ ಕ್ಷೇತ್ರದವರನ್ನೂ ಗುರುತಿಸಬೇಕೆಂಬ ಕೂಗೆದ್ದಿದೆ. ಇದಕ್ಕೆ ರಾಜ್ಯಾಧ್ಯಕ್ಷರು ದನಿಗೂಡಿಸಿರುವುದು ಸಾಹಿತ್ಯ ರಂಗದಲ್ಲಿರುವವರನ್ನು ಕೆರಳಿಸುವಂತೆ ಮಾಡಿದೆ. ಸಾರ್ವಜನಿಕವಾಗಿ ತೀವ್ರ ಚರ್ಚೆಗೂ ಗುರಿಯಾಗಿದೆ.

ಸಾಹಿತಿಗಳಿಗೆ ಸಾಹಿತ್ಯ ಸಮ್ಮೇಳನಗಳನ್ನು ಹೊರತುಪಡಿಸಿ ಬೇರೆಲ್ಲೂ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವುದಕ್ಕೆ ಅವಕಾಶಗಳೇ ಇಲ್ಲ. ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಚಿತ್ರರಂಗ, ಸಾಮಾಜಿಕ, ಸಂಘಟನೆ ಸೇರಿದಂತೆ ಇತರ ಯಾವುದೇ ಕ್ಷೇತ್ರಗಳಲ್ಲೂ ಸಾಹಿತಿಗಳನ್ನು ಪರಿಗಣಿಸುವುದೇ ಇಲ್ಲ. ಇದೀಗ ಸಾಹಿತ್ಯ ಸಮ್ಮೇಳನಗಳಿಗೂ ಬೇರೆ ಕ್ಷೇತ್ರದವರನ್ನು ಆಯ್ಕೆ ಮಾಡುವ ಸಂಪ್ರದಾಯ ಶುರುವಾದರೆ ಸಾಹಿತಿಗಳು ಅವಕಾಶ ವಂಚಿತರಾಗಿ ಮೂಲೆಗುಂಪಾಗುವರೆಂಬ ಭೀತಿ ಎದುರಾಗಿದೆ.

ಹಲವಾರು ಸಾಹಿತಿಗಳು ತಮ್ಮ ಅಮೂಲ್ಯ ಕತೆ, ಕವನ, ಕವನಸಂಕಲನ, ಕಥಾಸಂಕಲನ, ಲೇಖನ, ಸಾಹಿತ್ಯ, ಚರಿತ್ರೆ ಸೇರಿದಂತೆ ಹಲವು ಪ್ರಕಾರಗಳ ಮೂಲಕ ಸಾಹಿತ್ಯ ಕ್ಷೇತ್ರದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದಿಂದಲೇ ಸಾಹಿತ್ಯ ಪರಿಷತ್ತಿಗೆ ಘನತೆ ಬಂದಿದೆ. ಈಗ ಸಾಹಿತಿಗಳ ಬೆಳವಣಿಗೆ, ಸಮಾಜದಲ್ಲಿ ಗುರುತಿಸಿಕೊಳ್ಳುವುದಕ್ಕೆ ಅವಕಾಶವಿರುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಬೇರೆ ರಂಗದವರು ಬಂದು ಕೂರುವುದಾದರೆ ಸಾಹಿತ್ಯ ಕೃಷಿಯಲ್ಲಿ ತೊಡಗಿರುವವರಿಗೆ ಅನಾಥ ಭಾವ ಕಾಡಲಿದೆ ಎಂಬ ಮಾತುಗಳು ಹಿರಿಯ ಸಾಹಿತಿಗಳಿಂದಲೇ ಕೇಳಿಬರುತ್ತಿವೆ.

ರಾಜಕಾರಣಿಗಳು, ಮಠಾಧೀಶರು, ಚಿತ್ರಕಲಾವಿದರು, ಸಮಾಜಸೇವಕರು, ಸಾಂಸ್ಕೃತಿಕ, ಸಂಘಟನಾ ಕ್ಷೇತ್ರ ಮತ್ತಿತರೆ ರಂಗದಲ್ಲಿರುವವರು ಗುರುತಿಸಿಕೊಳ್ಳುವುದಕ್ಕೆ ಸಾಕಷ್ಟು ಅವಕಾಶಗಳಿವೆ. ರಾಜಕಾರಣಿಗಳಿಗೆ ರಾಜಕೀಯ ರಂಗದಲ್ಲೇ ಹಲವಾರು ಉನ್ನತ ಹುದ್ದೆಗಳಿವೆ. ಧಾರ್ಮಿಕ ಸಮ್ಮೇಳನಗಳಲ್ಲಿ ಗುರುತಿಸಿಕೊಳ್ಳಲು ಮಠಾಧೀಶರಿಗೆ, ದಸರಾ, ಹಂಪಿ ಉತ್ಸವದಂತಹ ಸಾಂಸ್ಕೃತಿಕ ಉತ್ಸವಗಳಲ್ಲಿ ಸಾಂಸ್ಕೃತಿಕ ಕ್ಷೇತ್ರದವರಿಗೆ, ಸಮಾಜಸೇವಕರಿಗೂ ಸರ್ಕಾರದಿಂದ ಹಲವಾರು ಗೌರವಗಳನ್ನು ನೀಡಲು ಅವಕಾಶವಿದೆ. ಇದರ ಜೊತೆ ಭಾರತರತ್ನ, ಕರ್ನಾಟಕ ರತ್ನ, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣದಂತಹ ಮೇರು ಪ್ರಶಸ್ತಿಗಳಿವೆ. ಈ ಮಹೋನ್ನತ ಪ್ರಶಸ್ತಿಗಳಿಗೆ ಭಾಜನರಾಗುವುದಕ್ಕೆ ಎಲ್ಲಾ ರಂಗದವರಿಗೂ ಅವಕಾಶಗಳಿವೆ. ಆದರೆ, ಸಾಹಿತಿಗಳು ಇಂತಹ ದೊಡ್ಡ ಪ್ರಶಸ್ತಿಗಳಿಗೆ ಭಾಜನರಾಗುವುದು ವಿರಳಾತೀವಿರಳವಾಗಿದೆ ಎಂಬ ಮಾತುಗಳು ವ್ಯಕ್ತವಾಗುತ್ತಿವೆ.

ಸಾಹಿತಿಗಳು ಎಷ್ಟೇ ಹೆಸರು ಗಳಿಸಿದ್ದರೂ ಅವರನ್ನು ವಿಧಾನಪರಿಷತ್‌ಗೆ ಆಯ್ಕೆ ಮಾಡುವ ಸಂಪ್ರದಾಯ ನಿಂತೇ ಹೋಗಿದೆ. ಧಾರ್ಮಿಕ ಸಮ್ಮೇಳನಗಳಲ್ಲಿ ಅವರಿಗೆ ಭಾಗವಹಿಸಲು ಅವಕಾಶವಿಲ್ಲ. ರಾಜಕೀಯ ಕ್ಷೇತ್ರಕ್ಕಂತೂ ಪರಿಗಣಿಸುವುದೇ ಇಲ್ಲ, ಚಿತ್ರರಂಗದಲ್ಲೂ ಅವರನ್ನು ಗುರುತಿಸುವುದಿಲ್ಲ. ಹೀಗಾಗಿ ಹಲವಾರು ಹಿರಿಯ ಸಾಹಿತಿಗಳು ಈಗಲೂ ಎಲೆಮರೆ ಕಾಯಿಯಂತೆಯೇ ಉಳಿದುಕೊಂಡಿದ್ದಾರೆ. ಅವರೆಲ್ಲರೂ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಾಗಲೆಲ್ಲಾ ಸರ್ವಾಧ್ಯಕ್ಷರಾಗುವ ಆಶಯವನ್ನು ಹೊಂದಿರುತ್ತಾರೆ. ಹಾಗಾಗಿ ಸಮ್ಮೇಳನಾಧ್ಯಕ್ಷ ಸ್ಥಾನವನ್ನು ಸಾಹಿತಿಗಳಿಂದ ಕಸಿದುಕೊಳ್ಳುವ ಕೆಲಸ ಮಾಡುವುದು ಬೇಡ ಎನ್ನುವುದು ಹಲವಾರು ಮಂದಿಯ ಅಭಿಪ್ರಾಯವಾಗಿದೆ.

ಸಾಹಿತ್ಯ ಕ್ಷೇತ್ರ ಹಾಗೂ ಸಾಹಿತ್ಯ ಪರಿಷತ್ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿರುವವರು ಇಳಿ ವಯಸ್ಸಿನಲ್ಲಿದ್ದಾರೆ. ಹಲವರು ತಮ್ಮನ್ನೂ ಗುರುತಿಸಬಹುದೆಂಬ ಆಶಾಭಾವನೆಯಲ್ಲಿದ್ದಾರೆ. ಅವರಿಗೆ ಮನ್ನಣೆ ಸಿಗಬೇಕು. ಆ ಮೂಲಕ ಉತ್ತಮ ಸಾಹಿತ್ಯ ರಚನೆಗೆ ಸ್ಫೂರ್ತಿ, ಪ್ರೇರಣೆ ದೊರೆತು ಕನ್ನಡ ಸಾಹಿತ್ಯ ಇನ್ನಷ್ಟು ಉತ್ತುಂಗಕ್ಕೇರಬೇಕೆಂಬುದು ಹಲವರ ವಾದವಾಗಿದೆ.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರರನ್ನು ಆಯ್ಕೆ ಮಾಡುವ ಕೂಗೆದ್ದಿರುವುದು ಸರಿಯಲ್ಲ. ಇದರಿಂದ ಜಾತಿ, ಹಣ, ರಾಜಕೀಯ ಪ್ರಭಾವವಿರುವವರಿಗೆ ಭವಿಷ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆಗಳಿರುತ್ತವೆ. ಉದ್ಯಮಿಗಳು, ಅಪರಾಧ ಹಿನ್ನೆಲೆಯುಳ್ಳವರು ಆ ಸ್ಥಾನಕ್ಕೆ ನೇಮಕಗೊಳ್ಳುವ ಅಪಾಯಗಳೂ ಇರುತ್ತವೆ. ಇದರಿಂದ ಭವಿಷ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥ ಕಳೆದುಕೊಳ್ಳುವ ಬಗ್ಗೆ ಆತಂಕವೂ ಎದುರಾಗಿದೆ.

‘ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ಸಾಹಿತಿಗಳು ಆಯ್ಕೆಯಾಗುವುದೇ ಸೂಕ್ತ. ಬೇರೆ ರಂಗದವರಿಗೆ ಮಣೆ ಹಾಕುವುದು ಬೇಡ. ಸಾಹಿತ್ಯ ಕ್ಷೇತ್ರ ಹಾಗೂ ಪರಿಷತ್ ಬೆಳವಣಿಗೆಗೆ ಶ್ರಮಿಸಿದ ಅನೇಕರು ನಮ್ಮೊಂದಿಗಿದ್ದಾರೆ. ಎಲೆಮರೆ ಕಾಯಿಯಂತೆ ಸಾಹಿತ್ಯ ಕೃಷಿಯಲ್ಲಿ ಹಲವರು ತೊಡಗಿದ್ದಾರೆ. ಅವರನ್ನು ಗುರುತಿಸುವ ಕೆಲಸವಾಗಲಿ.’

- ಎಂ.ವಿ.ಧರಣೇಂದ್ರಯ್ಯ, ಮಾಜಿ ಅಧ್ಯಕ್ಷರು, ಜಿಲ್ಲಾ ಕಸಾಪ

‘ಸಾಹಿತಿಗಳಲ್ಲದವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಲು ಚಿಂತಿಸುತ್ತಿರುವುದಾಗಿ ಹೇಳಿರುವುದಕ್ಕೆ ಈಗಾಗಲೇ ಟೀಕೆ-ಟಿಪ್ಪಣಿಗಳು ಕೇಳಿಬರುತ್ತಿವೆ. ಈ ಬಗ್ಗೆ ರಾಜ್ಯಾಧ್ಯಕ್ಷರು ಯೋಚಿಸಿ ತೀರ್ಮಾನ ಕೈಗೊಳ್ಳಲಿ. ಕನ್ನಡ ಸಾಹಿತ್ಯ ಪರಿಷತ್ ಆರಂಭವಾದಾಗಿನಿಂದ ಸಾಹಿತಿಗಳಿಂದಲೇ ನಡೆಯುತ್ತಿದೆ. ಅಂದಿನಿಂದಲೂ ಸಾಹಿತಿಗಳೇ ಪರಿಷತ್ತನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹಾಗಾಗಿ ಸಾಹಿತಿಗಳೇ ಸಮ್ಮೇಳನಾಧ್ಯಕ್ಷರಾಗುವುದು ಸೂಕ್ತ.’

- ಎಚ್.ಎಸ್.ಮುದ್ದೇಗೌಡ, ಪುಸ್ತಕ ಸಮಿತಿ ಅಧ್ಯಕ್ಷರು

‘ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಸಾಹಿತಿಗಳೇ ಆಯ್ಕೆಯಾಗಬೇಕು. ಅದರಲ್ಲಿ ಬದಲಾವಣೆ ಪ್ರಶ್ನೆಯೇ ಇಲ್ಲ. ಪರಿಷತ್‌ಗೆ ಘನತೆ, ಗೌರವ ಹೆಚ್ಚಿಸಿದವರು ಸಾಹಿತಿಗಳು. ಹಿಂದಿನಿಂದಲೂ ಅವರನ್ನೇ ಆಯ್ಕೆ ಮಾಡಿಕೊಂಡು ಬರಲಾಗುತ್ತಿದೆ. ಇದು ಯಾರೋ ಒಬ್ಬರ ನಿರ್ಧಾರವಲ್ಲ. ಕಾರ್ಯಕಾರಿ ಸಮಿತಿಯಲ್ಲಿರುವ ೩೫ ಸದಸ್ಯರು ತೀರ್ಮಾನಿಸಬೇಕು.’

ತೈಲೂರು ವೆಂಕಟಕೃಷ್ಣ, ಸಾಹಿತಿ

‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಗಳೇ ಅಧ್ಯಕ್ಷರಾಗಬೇಕು. ರಾಜ್ಯಾಧ್ಯಕ್ಷರೇ ಈ ಚರ್ಚೆ ಹುಟ್ಟುಹಾಕಿದ್ದಾರೆ. ಇದರ ಹಿಂದಿನ ಉದ್ದೇಶ ಗೊತ್ತಾಗುತ್ತಿಲ್ಲ. ಸಾಹಿತ್ಯಕ್ಕೋಸ್ಕರ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರೂ ಇದ್ದಾರೆ. ಅವರಿಗೆಲ್ಲಾ ಸಮ್ಮೇಳನಾಧ್ಯಕ್ಷ ಸ್ಥಾನ ನೀಡುವ ಮೂಲಕ ಗೌರವ ಸಿಗುವಂತಾಗಬೇಕು. ನವ ಸಾಹಿತಿಗಳಿಗೆ ಸಾಹಿತ್ಯದ ಬಗ್ಗೆ ಆಸಕ್ತಿ ಹೆಚ್ಚುತ್ತದೆ.’

- ಪ್ರೊ.ಜಿ.ಟಿ.ವೀರಪ್ಪ, ಸಾಹಿತಿ

‘ಕನ್ನಡ ಸಾಹಿತ್ಯ ಸಮ್ಮೇಳನ ಎನ್ನುವಾಗ ಸಾಹಿತ್ಯಕ್ಕೆ ಕೊಡುಗೆ ನೀಡಿದವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಅದಕ್ಕೆ ಗೌರವ. ಸಾಹಿತ್ಯೇತರರನ್ನು ಮಾಡುವುದಾದರೆ ಕನ್ನಡ ಅಥವಾ ಕರ್ನಾಟಕ ಸಮ್ಮೇಳನ ಮಾಡಲಿ. ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸ್ಥಾನದಿಂದ ಸಾಹಿತಿಗಳನ್ನು ದೂರವಿಡುವ ಚರ್ಚೆ ಆರಂಭವಾಗಿರುವುದೇ ದುರದೃಷ್ಟಕರ.’

- ಡಾ.ಶುಭಶ್ರೀ ಪ್ರಸಾದ್, ಸಾಹಿತಿ

‘ಕನ್ನಡ ಸಾಹಿತಿಗಳಿಗೆ ಗೌರವ ಸಿಗುವುದು ಸಾಹಿತ್ಯ ಸಮ್ಮೇಳನಗಳಿಂದಲೇ. ಸಾಹಿತಿಗಳಿಂದಲೇ ಪರಿಷತ್‌ಗೆ ಶಕ್ತಿ, ಗೌರವ ಬಂದಿದೆ. ಹಾಗಾಗಿ ಸಾಹಿತಿಗಳನ್ನು ಆಯ್ಕೆ ಮಾಡುವುದು ಒಳ್ಳೆಯದು. ಬೇರೆ ರಂಗದಲ್ಲಿರುವವರು ಗುರುತಿಸಿಕೊಳ್ಳುವುದಕ್ಕೆ ಹಲವಾರು ಕಡೆ ಅವಕಾಶಗಳಿವೆ. ಅಲ್ಲಿ ಅವರನ್ನು ಪುರಸ್ಕರಿಸಿ, ಗೌರವಿಸಲಿ. ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಸ್ಥಾನ ಸಾಹಿತಗಳಿಗೇ ಮೀಸಲಿರಲಿ.’

- ಎಲ್.ಸಂದೇಶ್, ಲೇಖಕ

Share this article