ಪತ್ರಕರ್ತರ ಸಮ್ಮೇಳನ ನಿರೀಕ್ಷೆ ಮೀರಿ ಯಶಸ್ವಿ: ಶಿವಾನಂದ ತಗಡೂರು

KannadaprabhaNewsNetwork |  
Published : Mar 04, 2024, 01:18 AM IST
3ಕೆಡಿವಿಜಿ61-ದಾವಣಗೆರೆಯಲ್ಲಿ ಭಾನುವಾರ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಸಮ್ಮೇಳನದ ಬಗ್ಗೆ ರಾಜ್ಯಾದ್ಯಂತ ಪತ್ರಕರ್ತರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಮ್ಮೇಳನದ ಉದ್ಘಾಟನೆ, ಸಮಾರೋಪವಷ್ಟೇ ಅಲ್ಲದೇ, ಪತ್ರಿಕೋದ್ಯಮ, ಪತ್ರಕರ್ತರು ಎದುರಿಸುತ್ತಿರುವ ವಿವಿಧ ಸವಾಲು, ಸಮಸ್ಯೆಗಳು, ಪರಿಹಾರೋಪಾಯಗಳ ಬಗ್ಗೆ ನಾಲ್ಕು ಅರ್ಥಪೂರ್ಣ ಗೋಷ್ಠಿ ನಡೆದವು. ಎಲ್ಲೆಡೆ ಸಮ್ಮೇಳನದ ಬಗ್ಗೆ ಪ್ರಶಂಸೆ ಕೇಳಿ ಬರುತ್ತಿದೆ. ಇದಕ್ಕೆ ಇಲ್ಲಿನ ಜಿಲ್ಲಾ ಘಟಕ, ವರದಿಗಾರರ ಕೂಟ, ಉಪ ಸಮಿತಿಗಳು, ಎಲ್ಲಾ ಪದಾಧಿಕಾರಿಗಳು, ಸದಸ್ಯರ ಸಾಂಘಿಕ ಪ್ರಯತ್ನ, ಅತ್ಯುತ್ತಮ ಸಹಕಾರ ಕಾರಣ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕನ್ನಡ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ದಾವಣಗೆರೆಯಲ್ಲಿ ಫೆ.3 ಮತ್ತು 4ರಂದು 38ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಸಡಗರ, ಸಂಭ್ರಮದಿಂದ, ಅತ್ಯಂತ ಅರ್ಥಪೂರ್ಣ ಯಶಸ್ವಿಯಾಗಿದ್ದು, ಈ ಯಶಸ್ಸಿಗೆ ಇಲ್ಲಿನ ಮಾಧ್ಯಮದವರು, ಜನ ಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ಇಲಾಖೆಗಳು ಸೇರಿ ಜಿಲ್ಲೆಯ ಜನರ ಸಹಕಾರಕ್ಕೆ ಸಂಘ ಆಭಾರಿ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳನದ ಆರಂಭದಲ್ಲಿ ನಮ್ಮಲ್ಲೂ ಗೊಂದಲ, ಅಳುಕು ಇತ್ತು. ಒಂದು ಕ್ಷಣ ಸಮ್ಮೇಳನವನ್ನೇ ಮುಂದೂಡುವ ಆಲೋಚನೆ ಇತ್ತು. ಆದರೆ, ಸಂಘದ ಕಟ್ಟಕಡೆಯ ಸದಸ್ಯರಿಂದ ಪ್ರತಿಯೊಬ್ಬರ ಸಹಕಾರದಿಂದ ಅಭೂತಪೂರ್ವವಾಗಿ ಸಮ್ಮೇಳನ ನಮ್ಮೆಲ್ಲರ ನಿರೀಕ್ಷೆ ಮೀರಿ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಸಮ್ಮೇಳನದ ಬಗ್ಗೆ ರಾಜ್ಯಾದ್ಯಂತ ಪತ್ರಕರ್ತರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಮ್ಮೇಳನದ ಉದ್ಘಾಟನೆ, ಸಮಾರೋಪವಷ್ಟೇ ಅಲ್ಲದೇ, ಪತ್ರಿಕೋದ್ಯಮ, ಪತ್ರಕರ್ತರು ಎದುರಿಸುತ್ತಿರುವ ವಿವಿಧ ಸವಾಲು, ಸಮಸ್ಯೆಗಳು, ಪರಿಹಾರೋಪಾಯಗಳ ಬಗ್ಗೆ ನಾಲ್ಕು ಅರ್ಥಪೂರ್ಣ ಗೋಷ್ಠಿ ನಡೆದವು. ಎಲ್ಲೆಡೆ ಸಮ್ಮೇಳನದ ಬಗ್ಗೆ ಪ್ರಶಂಸೆ ಕೇಳಿ ಬರುತ್ತಿದೆ. ಇದಕ್ಕೆ ಇಲ್ಲಿನ ಜಿಲ್ಲಾ ಘಟಕ, ವರದಿಗಾರರ ಕೂಟ, ಉಪ ಸಮಿತಿಗಳು, ಎಲ್ಲಾ ಪದಾಧಿಕಾರಿಗಳು, ಸದಸ್ಯರ ಸಾಂಘಿಕ ಪ್ರಯತ್ನ, ಅತ್ಯುತ್ತಮ ಸಹಕಾರ ಕಾರಣ ಎಂದು ಶ್ಲಾಘಿಸಿದರು.

ಮೂರು ದಶಕದ ನಂತರ ದಾವಣಗೆರೆಯಲ್ಲಿ ನಡೆದ ಸಮ್ಮೇಳನ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗ್ರಾಮೀಣ ಪತ್ರಕರ್ತರಿಗೆ ಬಸ್‌ ಪಾಸ್ ವ್ಯವಸ್ಥೆ ಒಳಗೊಂಡಂತೆ 8 ಬೇಡಿಕೆ ಮುಂದಿಟ್ಟಿದ್ದೆವು. ಈ ಪೈಕಿ ಬಜೆಟ್‌ನಲ್ಲಿ ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್‌ ಪಾಸ್ ಸೌಲಭ್ಯ ಘೋಷಿಸಿ, 30 ವರ್ಷದ ಬೇಡಿಕೆ ಈಡೇರಿಸಿದ್ದಾರೆ. ಸಿಎಂ ಮಾಧ್ಯಮ ಸಲಹೆಗಾರರಾದ ಸಹೋದ್ಯೋಗಿ ಕೆ.ವಿ.ಪ್ರಭಾಕರ ಪಾತ್ರ ಇದರಲ್ಲಿ ಸ್ಮರಣೀಯವಾಗಿದೆ. ಪತ್ರಕರ್ತರಿಗೆ ಯಶಸ್ವಿನಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಂಘವು ಮುಂದೆಯೂ ಸರ್ಕಾರದ ಮೇಲೆ ಒತ್ತಡ ಹೇರಲಿದೆ ಎಂದು ಶಿವಾನಂದ ತಗಡೂರು ತಿಳಿಸಿದರು.

ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ ಏಕಬೋಟೆ ಮಾತನಾಡಿ, ದಾವಣಗೆರೆಯಲ್ಲಿ ನಡೆದ ಸಮ್ಮೇಳನವು ಎಲ್ಲರ ನಿರೀಕ್ಷೆ, ಊಹೆಯನ್ನೂ ಮೀರಿ ಯಶಸ್ವಿಯಾಗಿದೆ. ಶೀಘ್ರವೇ ನಮ್ಮ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಜನ ಪ್ರತಿನಿಧಿಗಳು, ಉದ್ಯಮಿಗಳು, ಅಧಿಕಾರಿಗಳು, ಮಾಧ್ಯಮದವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ, ಕೆ.ಚಂದ್ರಣ್ಣ ಪೇಪರ್, ವರದಿಗಾರರ ಕೂಟ ಅಧ್ಯಕ್ಷ ಕೆ.ಏಕಾಂತಪ್ಪ, ಪ್ರಧಾನ ಕಾರ್ಯದರ್ಶಿ ಡಾ.ಸಿ.ವರದರಾಜ, ಸಂಘದ ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್‌, ಖಜಾಂಚಿ ಎನ್.ವಿ.ಬದರೀನಾಥ ಇತರರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...