ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಸಾವಿನ ಸಮಯ ಖಚಿತಪಡಿಸುವಂತೆ ನಗರದ ವಿಕ್ಟೋರಿಯಾ ಆಸ್ಪತ್ರೆಯ ವಿಧಿ ವಿಜ್ಞಾನ ವಿಭಾಗದ ತಜ್ಞರಿಗೆ ಪೊಲೀಸರು ಮನವಿ ಮಾಡಿದ್ದಾರೆ.
ಈ ಪ್ರಕರಣ ಸಂಬಂಧ ಎಫ್‌ಎಸ್‌ಎಲ್ ತಜ್ಞರು ಸಲ್ಲಿಸಿದ ವರದಿಯಲ್ಲಿ ರೇಣುಕಾಸ್ವಾಮಿ ಕೊನೆಯುಸಿರೆಳೆದ ವೇಳೆ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸದೆ ಗೊಂದಲ ಮೂಡಿಸಿದ್ದರು. ಹೀಗಾಗಿ ಹತ್ಯೆಯಾದ ದಿನ ರೇಣುಕಾಸ್ವಾಮಿ ಸೇವಿಸಿದ್ದ ಆಹಾರ ಆಧಾರಿಸಿ ನಿಖರವಾದ ಸಾವಿನ ಸಮಯ ಖಚಿತಪಡಿಸುವಂತೆ ಕೋರಿ ಪೊಲೀಸರು ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ರೇಣುಕಾಸ್ವಾಮಿ ಮರಣಕ್ಕೆ ಸಂಬಂಧಿಸಿದಂತೆ, ಮರಣ ಹೊಂದಿದ ವ್ಯಕ್ತಿಯು ಆಹಾರ ಸೇವಿಸಿದ ನಂತರ ಆತನ ಜಠರದಲ್ಲಿ ಎಷ್ಟು ಗಂಟೆಗಳವರೆಗೆ ಆಹಾರ ಇರುತ್ತದೆ? ಪ್ರಕರಣದಲ್ಲಿನ ಮೃತ ವ್ಯಕ್ತಿಯು ಸಾಯುವ ಮುಂಚೆ ಅಂದರೆ ಆ ದಿನ ಸಂಜೆ ಸುಮಾರು 4.30ರಿಂದ 5 ಗಂಟೆಗಳ ನಡುವಿನ ಸಮಯದಲ್ಲಿ ಆಹಾರ ಸೇವನೆ ಮಾಡಿರುವುದು ತನಿಖಾ ಕಾಲದಲ್ಲಿ ಸಂಗ್ರಹಿಸಿದ ಸಾಕ್ಷ್ಯಾಧಾರಗಳಿಂದ ಕಂಡು ಬಂದಿದೆ.
ಹೀಗಾಗಿ ಸಾವು ಎಷ್ಟು ಗಂಟೆಗೆ ಸಂಭವಿಸಿರಬಹುದು ಎಂಬ ಬಗ್ಗೆ ಮತ್ತು ರೇಣುಕಾಸ್ವಾಮಿಯ ಮರಣ ನಂತರ ಆತನ ದೇಹದಲ್ಲಿ ಉಂಟಾಗುವ ರಾಸಾಯನಿಕ, ಜೈವಿಕ ಮತ್ತು ಇತರೆ ಬದಲಾವಣೆ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡಿ ದೇಹವನ್ನು ಫ್ರೀಜರ್‌ನಲ್ಲಿಟ್ಟಿರುವ ಸಮಯವನ್ನು ಸಹ ಪರಿಗಣನೆಗೆ ತೆಗೆದುಕೊಂಡು ವ್ಯಕ್ತಿಯು ಯಾವ ದಿನ ಮತ್ತು ಸಮಯಕ್ಕೆ ಮರಣ ಹೊಂದಿರುತ್ತಾನೆ ಎಂಬ ಬಗ್ಗೆ ಪರಿಶೀಲಿಸಿ ಸ್ಪಷ್ಟವಾದ ಅಭಿಪ್ರಾಯದ ವರದಿಯನ್ನು ನೀಡುವಂತೆ ವಿಕ್ಟೋರಿಯಾ ಆಸ್ಪತ್ರೆಯ ವಿಧಿವೈದ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರಿಗೆ ಪೊಲೀಸರು ಮನವಿ ಮಾಡಿದ್ದಾರೆ. ಈ ಬಗ್ಗೆ ರಿಮ್ಯಾಂಡ್ ಆಪ್ಲಿಕೇಷನ್‌ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.
ಬೆಂಗಳೂರಿನ ಆರ್.ಆರ್.ನಗರದ ಪಟ್ಟಣಗೆರೆ ಶೆಡ್‌ನಲ್ಲಿ ಶನಿವಾರ ರೇಣುಕಾಸ್ವಾಮಿ ಹತ್ಯೆಯಾದ ಮರುದಿನ ಮಾಗಡಿ ರಸ್ತೆಯ ಸುಮನಹಳ್ಳಿ ಜಂಕ್ಷನ್ ಸಮೀಪದ ಮೋರಿಯಲ್ಲಿ ಆತನ ಮೃತದೇಹ ಪತ್ತೆಯಾಗಿತ್ತು. ಹೀಗಾಗಿ ಮೃತನ ಕೊನೆಯುಸಿರೆಳೆದ ಸಮಯದ ಬಗ್ಗೆ ನಿಖರವಾಗಿ ತಿಳಿಯಲು ಪೊಲೀಸರು ಮುಂದಾಗಿದ್ದಾರೆ.
ಸಾವಿನ ಸಮಯ ಮುಖ್ಯವೇಕೆ?
ಹತ್ಯೆ ಪ್ರಕರಣದಲ್ಲಿ ಮೃತನ ಸಾವಿನ ಸಮಯ ಬಹುಮುಖ್ಯವಾಗಿದೆ. ಏಕೆಂದರೆ ಮೃತದೇಹ ಪತ್ತೆ ಮತ್ತು ಸಾವಿನ ಸಮಯದ ಅಂತರ ಗೊತ್ತಾದರೆ ಆ ಸಮಯದಲ್ಲಿ ಆರೋಪಿಗಳ ಉಪಸ್ಥಿತಿ ಬಗ್ಗೆ ಮಾಹಿತಿ ಗೊತ್ತಾಗಲಿದೆ. ಹೀಗಾಗಿ ರೇಣುಕಾಸ್ವಾಮಿ ಮೃತಪಟ್ಟಾಗ ಶೆಡ್‌ನಲ್ಲಿ ದರ್ಶನ್ ಉಪಸ್ಥಿತರಿದ್ದರೇ ಎಂಬುದು ಈಗ ಸಾವಿನ ಸಮಯವನ್ನು ಆಧರಿಸಿದೆ ಎನ್ನಲಾಗಿದೆ.‘
ಅಶ್ಲೀಲ ಮೆಸೇಜ್ ಬಗ್ಗೆ ಮೊದ್ಲೇ ಹೇಳಿದ್ರೆ ಶಿಕ್ಷಿಸಬಹುದಿತ್ತು’:
ನನ್ನ ಪುತ್ರ ರೇಣುಕಾಸ್ವಾಮಿ ಯಾರಿಗಾದರೂ ಅಶ್ಲೀಲ ಮೆಸೇಜ್ ಕಳುಹಿಸಿದ್ದರೆ ಅದಕ್ಕೆ ಸಂಬಂಧಿಸಿ ಮೊದಲೇ ಹೇಳಿದ್ದರೆ ಶಿಕ್ಷೆ ಕೊಡಿಸಬಹುದಿತ್ತು ಎಂದು ತಾಯಿ ರತ್ನ ಪ್ರಭ ಹೇಳಿದರು.
ಚಿತ್ರದುರ್ಗದಲ್ಲಿ ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ತಮಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂದು ಕೆಲ ಸೆಲೆಬ್ರಿಟಿಗಳ ಆರೋಪಕ್ಕೆ ಪ್ರತಿಕ್ರಿಯಿಸಿದರು. ‘ಆತ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂದು ಈಗ ಯಾಕೆ ಹೇಳುತ್ತಿದ್ದಾರೆ ಎಂಬುದು ಅರ್ಥ ಆಗುತ್ತಿಲ್ಲ. ಮೊದಲೇ ಹೇಳಿದ್ದರೆ ಶಿಕ್ಷೆ ಕೊಡಿಸಬಹುದಿತ್ತು’ ಎಂದರು.
ಜೈಲಿನಲ್ಲಿರುವ ನಟ ದರ್ಶನ್ ಭೇಟಿಗೆ ಅವರ ತಾಯಿ, ಕುಟುಂಬಸ್ಥರು ಹೋಗುತ್ತಿದ್ದಾರೆ. ನಾವು ನಮ್ಮ ಮಗನ ಭೇಟಿ ಮಾಡಲು ಸಾಧ್ಯವೇ? ಎಂದು ನೋವು ತೋಡಿಕೊಂಡ ಅವರು, ವೃದ್ಧರಾದ ನಮಗೆ ಪುತ್ರ ಮಣ್ಣು ಹಾಕಬೇಕಿತ್ತು. ಆದರೆ ನಮ್ಮ ಕಣ್ಣ ಮುಂದೆಯೇ ಪುತ್ರ ಕಣ್ಮರೆಯಾದರೆ ಶೋಕ ಯಾರ ಬಳಿ ಹಂಚಿಕೊಳ್ಳಲಿ. ನಾವು ಸಾಯೋತನಕ ಮಗನನ್ನು ನೋಡಲಾರೆವು ಎಂದರು.
ಇದೇ ವೇಳೆ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಮಾತನಾಡಿ, ನಟ ದರ್ಶನ್ ನೋಡಲು ಕುಟುಂಬಸ್ಥರು ಜೈಲಿಗೆ ಹೋಗುತ್ತಿದ್ದಾರೆ. ನಾವು ಮಗನನ್ನು ನೋಡಲು ಎಲ್ಲಿಗೆ ಹೋಗಬೇಕು? ನಮ್ಮ ಸಂಕಟ ಏನೆಂಬುದು ನಮಗಷ್ಟೇ ಗೊತ್ತು. ಅಶ್ಲೀಲ ಮೆಸೇಜ್ ಬಗ್ಗೆ ಪೊಲೀಸರಿಗೆ ದೂರು ನೀಡಿ ಮಗನಿಗೆ ಶಿಕ್ಷೆ ಆಗಿದ್ದರೆ ಸ್ವೀಕರಿಸುತ್ತಿದ್ದೆವು. ಆದರೆ ಇಂತಹ ಅಮಾನುಷ ಕೊಲೆ ಮುಂದೆಂದೂ ಘಟಿಸಬಾರದು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಪ್ರಕರಣದಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.
ನಮ್ಮ ಮನೆಗೆ ಆಧಾರ ಸ್ತಂಭವಾಗಿದ್ದ ಮಗನೇ ಇಲ್ಲವಾಗಿದ್ದಾನೆ. ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಲಿ. ನನ್ನ ಸೊಸೆಗೆ ಸರ್ಕಾರ ನೌಕರಿ ಕೊಡಲಿ ಎಂದು ಮನವಿ ಮಾಡಿದರು.