ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಸರ್ಕಾರಿ ಶಾಲೆಗಳ ಅಭ್ಯುದಯಕ್ಕೆ ಶ್ರಮಿಸುತ್ತಿರುವ ಸಮಾಜ ಸೇವಕರು, ಬನಶಂಕರಿ ಮಹಿಳಾ ಸಮಾಜ ಹಾಗೂ ಲಕ್ಷ್ಮೀದೇವಿ ಮಹಿಳಾ ಟ್ರಸ್ಟ್ ಅಧ್ಯಕ್ಷರಾದ ಶಾಂತಾ ರಾಮಸ್ವಾಮಿ ಅವರಿಗೆ ಶ್ರೀಲಂಕಾದ ಅತ್ಯುನ್ನತ ಗೌರವವಾದ ಏಷ್ಯನ್ ಐಕಾನ್ ಪುರಸ್ಕಾರ ಲಭಿಸಿರುವುದು ಸಮಯೋಚಿತವಾಗಿದೆ ಎಂದು ಎಸ್‌ಡಿಎಂಸಿ ರಾಜ್ಯ ಸಮನ್ವಯ ಸಮಿತಿ ಉಪಾಧ್ಯಕ್ಷ ನಾಗವಾರ ಶಂಭೂಗೌಡ ಪ್ರಶಂಸಿಸಿದರು.ನಗರದ ಸಾರ್ವಜನಿಕ ವಿದ್ಯಾಸಂಸ್ಥೆಯ ದೇವಮ್ಮ- ಚಿಕ್ಕಣ್ಣ ಸಭಾಂಗಣದಲ್ಲಿ ತಾಲೂಕಿನ ನಾನಾ ಸಂಘಟನೆಗಳು ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಶಾಂತಾ ರಾಮಸ್ವಾಮಿ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.
ಶಾಂತಾ ರಾಮಸ್ವಾಮಿ ಅವರು ನಮ್ಮ ತಾಲೂಕನ್ನು ವಿಶೇಷವಾಗಿ ಆಯ್ಕೆ ಮಾಡಿಕೊಂಡು ತಾಲೂಕಿನ ಗಡಿಗ್ರಾಮಗಳಾದ ಇಗ್ಗಲೂರಿನಿಂದ ಮಾಕಳಿವರೆಗಿನ ಸರ್ಕಾರಿ ಶಾಲೆಗಳ ಮಕ್ಕಳಿಗೆ ಬೇಕಾದ ಲೇಖನ ಸಾಮಗ್ರಿ, ಪಠ್ಯ ಪರಿಕರಗಳನ್ನು ಕೊಡಮಾಡುವ ಮೂಲಕ ಶೈಕ್ಷಣಿಕ ಬದ್ಧತೆ ಮೆರೆದಿದ್ದಾರೆ. ಶಾಂತಾ ರಾಮಸ್ವಾಮಿ ಅವರಂತಹವರು ಇನ್ನಷ್ಟು ಮಂದಿ ನಮ್ಮ ತಾಲೂಕಿನ ಸರ್ಕಾರಿ ಶಾಲೆಗಳಿಗೆ ಮತ್ತಷ್ಟು, ಇನ್ನಷ್ಟು ಸವಲತ್ತು- ನೆರವು ನೀಡಲಿ ಎಂದು ಆಶಿಸಿದರು.ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ಟ್ರಸ್ಟ್ ಸಂಚಾಲಕ ಎಸ್.ಎನ್.ಆದರ್ಶ ಕುಮಾರ್ ಮಾತನಾಡಿ, ತಾಲೂಕಿನ ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿ ಹೊಂದಿರುವ ಶಾಂತಾ ರಾಮಸ್ವಾಮಿ ಅವರು ಹಲವಾರು ವರ್ಷಗಳಿಂದ ತಮ್ಮದೇ ಆದ ಸಂಪನ್ಮೂಲದ ಮೂಲಕ ಸವಲತ್ತುಗಳನ್ನು ಒದಗಿಸುತ್ತಾ ಬಂದಿದ್ದಾರೆ. ಅವರಿಗೆ ಏಷ್ಯನ್ ಐಕಾನ್ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ವಿಚಾರವಾಗಿದೆ. ಅವರ ಸಮಾಜಮುಖಿ ಕೆಲಸಗಳು ಮತ್ತಷ್ಟು ವಿಸ್ತರಣೆಯಾಗಲಿ ಎಂದು ಶುಭ ಹಾರೈಸಿದರು.
ಎಚ್.ಬ್ಯಾಡರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಪ್ರೇಮಾ ಕೃಷ್ಣ ಮಾತನಾಡಿ, ಶಾಂತಾ ರಾಮಸ್ವಾಮಿ ಅವರ ಒಡನಾಟ ಹಾಗೂ ತಾಲೂಕಿನಲ್ಲಿ ಅವರು ಕೈಗೊಂಡಿರುವ ಶೈಕ್ಷಣಿಕ ಸೇವೆ, ಹೆಣ್ಣು ಮಕ್ಕಳು, ರೈತರು, ಯೋಧರ ಬಗ್ಗೆ ಅವರು ಹೊಂದಿರುವ ಕಾಳಜಿ ಕುರಿತು ವಿಸ್ತೃತವಾಗಿ ತಿಳಿಸಿದರು.ತಾಲೂಕು ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್.ರಾಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚನ್ನಪಟ್ಟಣ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಸುಧೀಂದ್ರ, ಬನಶಂಕರಿ ಮಹಿಳಾ ಸಮಾಜದ ಪದಾಧಿಕಾರಿಗಳು, ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ಟ್ರಸ್ಟ್ ನಿರ್ದೇಶಕರಾದ ಹೇಮಂತ್ ಗೌಡ, ಸುರೇಶ್, ಸತೀಶ್, ಶಿಕ್ಷಕರಾದ ರಾಮಲಿಂಗೇಗೌಡ, ಕೃಷ್ಣೇಗೌಡ, ಶಿವರಾಜು, ಶುಭಮಂಗಳ ಸೇರಿದಂತೆ ಹಲವಾರು ಶಿಕ್ಷಕರು ಉಪಸ್ಥಿತರಿದ್ದರು.