ಕಾಂಗ್ರೆಸ್‌, ಬಿಜೆಪಿ ರೈತ ವಿರೋಧಿ ಸರ್ಕಾರಗಳು

KannadaprabhaNewsNetwork | Published : Jan 6, 2024 2:00 AM

ಸಾರಾಂಶ

ಬರಗಾಲ ಘೋಷಿಸಿ 3 ತಿಂಗಳು ಗತಿಸಿವೆ, ಆದರೆ ಕೇಂದ್ರ ಕಡೆಗೆ ಕೈ ತೋರಿಸುತ್ತಿರುವ ರಾಜ್ಯ ಸರ್ಕಾರ ತನ್ನ ಹೇಡಿತನ ಪ್ರದರ್ಶಿಸುತ್ತಿದೆ, ರೈತರ ಹಿತಾಸಕ್ತಿ ದೃಷ್ಟಿಯಿಂದಲಾದರೂ ತಮ್ಮ ಪಾಲಿನ ಪರಿಹಾರ ಮೊತ್ತ ಘೋಷಿಸಬೇಕು

ಕಾಂಗ್ರೆಸ್‌, ಬಿಜೆಪಿ ರೈತ ವಿರೋಧಿ ಸರ್ಕಾರಗಳು

ಬ್ಯಾಡಗಿ: ಲೋಕಸಭೆ ಚುನಾವಣೆ ಚರ್ಚೆಯಲ್ಲಿರುವ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ರಾಜ್ಯದ ರೈತರ ಸಮಸ್ಯೆ ಮರೆಯುತ್ತಿದ್ದು, ಬರಗಾಲ ಪೀಡಿತ ಜಿಲ್ಲೆಯೆಂದು ಘೋಪಿಸಿ 3 ತಿಂಗಳು ಗತಿಸಿದರೂ ಪರಿಹಾರದ ಮೊತ್ತ ಘೋಷಿಸದೇ ಹಣ ನೀಡದೇ ಕೇವಲ ಘೋಷಣೆಗಷ್ಟೇ ಸೀಮಿತಗೊಳಿಸಿದ್ದು ಇದೊಂದು ರೈತ ವಿರೋಧಿ ಸರ್ಕಾರವಾಗಿದೆ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಆರೋಪಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬರಗಾಲ ಘೋಷಿಸಿ 3 ತಿಂಗಳು ಗತಿಸಿವೆ, ಆದರೆ ಕೇಂದ್ರ ಕಡೆಗೆ ಕೈ ತೋರಿಸುತ್ತಿರುವ ರಾಜ್ಯ ಸರ್ಕಾರ ತನ್ನ ಹೇಡಿತನ ಪ್ರದರ್ಶಿಸುತ್ತಿದೆ, ರೈತರ ಹಿತಾಸಕ್ತಿ ದೃಷ್ಟಿಯಿಂದಲಾದರೂ ತಮ್ಮ ಪಾಲಿನ ಪರಿಹಾರ ಮೊತ್ತ ಘೋಷಿಸಬೇಕು ಮತ್ತು ಹಿಂದೆಯೇ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

₹8500 ನೇರವಾಗಿ ಕೇಂದ್ರ ಹಾಕಲಿ: ಬರಪೀಡಿತ ಪ್ರದೇಶದ ವ್ಯಾಪ್ತಿಯ ಪ್ರತಿ ಎಕರೆಗೆ ₹ 25 ಪರಿಹಾರ ನೀಡುವಂತೆ ಬೇಡಿಕೆಯಿಟ್ಟಿದೆ, ರಾಷ್ಟ್ರೀಯ ಪ್ರಕೃತಿ ವಿಪತ್ತು ನಿಧಿಯಿಂದ (ಎನ್‌ಡಿಆರ್‌ಎಫ್) ಹೆಕ್ಟೇರ್‌ಗೆ ₹ 8500 ಕೇಂದ್ರ ಸರ್ಕಾರದಿಂದ ಸಿಗುವ ಸಾಧ್ಯತೆಯಿದೆ, ಅದಕ್ಕೆ ಇನ್ನಷ್ಟು ಸೇರಿಸಿ ರಾಜ್ಯ ಸರ್ಕಾರ ಪರಿಹಾರ ನೀಡುವಂತೆ ಆಗ್ರಹಿಸಿದರು.

ಕ್ರೆಡಿಟ್ ತೆಗೆದುಕೊಳ್ಳೋದು ಬೇಡ: ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಯಾವುದೇ ಕ್ಷಣದಲ್ಲಿಯೂ ಲೋಕಸಭೆ ಚುನಾವಣೆ ಘೋಷಣೆಯಾಗಬಹುದು, ಇದನ್ನೇ ಕಾಯ್ದು ಕುಳಿತಿರುವ ಎರಡೂ ರಾಷ್ಟ್ರೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಪರಿಹಾರ ನೀಡಿ ರೈತರಿಂದ ಕ್ರೆಡಿಟ್ ಪಡೆದುಕೊಳ್ಳಲು ಹವಣಿಸುತ್ತಿವೆ. ಹೀಗಾಗಿ ಬರಗಾಲ ಪರಿಹಾರ ಘೋಷಣೆಗೆ ಹಿನ್ನೆಡೆಯಾಗಿದೆ ಎಂದರು.

ಹೆಸ್ಕಾಂ ಸಮಸ್ಯೆ ಪರಿಹರಿಸಿ: ಹೊಸದಾಗಿ ಕೊರೆಸಿದ ಕೃಷಿ ಪಂಪಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡುವುದಿಲ್ಲ ಎಂಬುದಾಗಿ 3 ತಿಂಗಳ ಹಿಂದೆಯೇ ಹೆಸ್ಕಾಂ ಘೋಷಿಸಿತ್ತು , ಆದರೆ ತೋಟಗಾರಿಕೆ ಮತ್ತು ಅಲ್ಪಸ್ವಲ್ಪ ಹಿಂಗಾರು ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಬೋರವೆಲ್ ಹಾಕಿಸುತ್ತಿದ್ದಾರೆ, ವಿದ್ಯುತ್ ಸಂಪರ್ಕ ಸಿಗದಿದ್ದರೇ ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ಸಾಧ್ಯವಿಲ್ಲ ಇದೊಂದು ಅವೈಜ್ಞಾನಿಕ ಆದೇಶವಾಗಿದ್ದು, ಕೂಡಲೇ ಹೆಸ್ಕಾಂ ಅಧಿಕಾರಿಗಳು ಆದೇಶ ಹಿಂಪಡೆದು ಅರ್ಜಿ ಸಲ್ಲಿಸಿದ ಜಿಲ್ಲೆಯ ಪ್ರತಿಯೊಬ್ಬ ರೈತರಿಗೂ ವಿದ್ಯುತ್‌ ಸಂಪರ್ಕ ನೀಡುವಂತೆ ಆಗ್ರಹಿಸಿದರು. ಈ ವೇಳೆ ರೈತ ಮುಖಂಡರಾದ ಚಿಕ್ಕಪ್ಪ ಛತ್ರದ, ಮೌನೇಶ ಕಮ್ಮಾರ, ಕಿರಣ ಗಡಿಗೋಳ, ಕಿರಣ ಬಡ್ಡಿಯವರ ಸೇರಿದಂತೆ ಇನ್ನೂ ಹಲವರು ಹಾಜರಿದ್ದರು.

ಬರಗಾಲ ಪರಿಹಾರ ಪಡೆಯುವ ನಿಟ್ಟಿನಲ್ಲಿ ಮುಂದಿನ ಹೋರಾಟದ ರೂಪುರೇಷೆ ರಚಿಸುವ ಕುರಿತು ಜ. 8 ರಂದು ಸೋಮವಾರ ಹಾವೇರಿಯ ಪ್ರವಾಸಿ ಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ಪೂರ್ವಭಾವಿ ಸಭೆ ಕರೆಯಲಾಗಿದ್ದು, ಈ ಹಿಂದೆ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಅರ್ಜಿ ಸಲ್ಲಿಸಿದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಗತ್ಯ ಸಲಹೆ ಸೂಚನೆ ನೀಡಬಹುದು ಎಂದು ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.

Share this article