ಬಳ್ಳಾರಿ: ಇಲ್ಲಿನ ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಉತ್ಪಾದಕರ ಸಹಕಾರ ಸಂಘಗಳ (ರಾಬಕೊವಿ) ಒಕ್ಕೂಟದ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆದಿದ್ದು, ಕೆಎಂಎಫ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಭೀಮಾನಾಯ್ಕ ಸೇರಿದಂತೆ ನಾಲ್ಕು ಜಿಲ್ಲೆಗಳಿಂದ ಸ್ಪರ್ಧಿಯಲ್ಲಿದ್ದವರು ಸಂಘದ ನಿರ್ದೇಶಕರಾಗಿ ಚುನಾಯಿತಗೊಂಡಿದ್ದಾರೆ.
ತೀರ ಪೈಪೋಟಿಯಿದ್ದ 12 ಸ್ಥಾನಗಳಿಗೆ ಮೂವರು ಮಹಿಳೆಯರು ಸೇರಿದಂತೆ 27 ಜನರು ಚುನಾವಣಾ ಕಣದಲ್ಲಿದ್ದರು. ಬೆಳಗ್ಗೆಯಿಂದಲೇ ಬಿರುಸಿನ ಮತದಾನ ನಡೆಯಿತು. 466 ಸಂಘದ ಪ್ರತಿನಿಧಿಗಳು ಸರದಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು. ಚುನಾಯಿತ ಸದಸ್ಯರಲ್ಲಿ 10 ಜನರು ಕಾಂಗ್ರೆಸ್ ಬೆಂಬಲಿಗರು.ಅಖಂಡ ಬಳ್ಳಾರಿ ಜಿಲ್ಲೆಯಿಂದ 12, ರಾಯಚೂರು 7, ಕೊಪ್ಪಳ 8 ಜನರು ಚುನಾವಣೆ ಸ್ಪರ್ಧಿಸಿದ್ದರಿಂದ ಚುನಾವಣೆ ತೀವ್ರ ಹಣಾಹಣಿ ಇತ್ತು. ಮಹಿಳಾ ಮೀಸಲಿನ ಮೂವರು ಸೇರಿದಂತೆ ಒಟ್ಟು 12 ಜನರು ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾಗಿ ಚುನಾಯಿತಗೊಂಡರು. ಬಳ್ಳಾರಿ ಜಿಲ್ಲೆಯ 28, ವಿಜಯನಗರ ಜಿಲ್ಲೆಯ 229, ಕೊಪ್ಪಳ ಜಿಲ್ಲೆಯ 154 ಹಾಗೂ ರಾಯಚೂರು ಜಿಲ್ಲೆಯ 55 ಜನರು ಸೇರಿದಂತೆ ಒಟ್ಟು 466 ಸಂಘದ ಪ್ರತಿನಿಧಿಗಳು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರಿಂದ ಶೇ. 100ರಷ್ಟು ಮತದಾನವಾಯಿತು.
ಚುನಾವಣೆ ಹಿನ್ನೆಲೆಯಲ್ಲಿ ರಾಬಕೊವಿ ಒಕ್ಕೂಟದ ಆಡಳಿತ ಕಚೇರಿ ಮುಂದೆ ಬೆಳಗ್ಗೆಯಿಂದಲೇ ಜನರು ಜಮಾಯಿಸಿದ್ದರು. ಸಾರ್ವಜನಿಕರನ್ನು ನಿಯಂತ್ರಿಸಲು ಚುನಾವಣೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ, ಸಹಾಯಕ ಆಯುಕ್ತ ಹಾಗೂ ಚುನಾವಣೆ ಅಧಿಕಾರಿ ಪ್ರಮೋದ ಹಾಗೂ ಎಸ್ಪಿ ಡಾ. ಶೋಭಾರಾಣಿ ಅವರು ಚುನಾವಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು: ರಾಬಕೊವಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯಿಂದ ಮಾಜಿ ಶಾಸಕ ಎಲ್.ಬಿ.ಪಿ. ಭೀಮಾನಾಯ್ಕ, ಹೂವಿನಹಡಗಲಿಯಿಂದ ಐಗೋಳ ಚಿದಾನಂದ, ಕೂಡ್ಲಿಗಿಯ ಎಚ್. ಮರಳುಸಿದ್ದಪ್ಪ, ಹರಪನಹಳ್ಳಿಯ ಎಚ್. ರತ್ನಮ್ಮ ಹಾಗೂ ಕೊಪ್ಪಳ ಜಿಲ್ಲೆಯಿಂದ ಕೃಷ್ಣರೆಡ್ಡಿ, ಗಂಗಾವತಿ ತಾಲೂಕಿನ ಎನ್. ಸತ್ಯನಾರಾಯಣ, ಕುಷ್ಟಗಿ ತಾಲೂಕಿನ ಮಂಜುನಾಥ, ಕುಕನೂರು ತಾಲೂಕಿನ ಕಮಲಮ್ಮ ಮತ್ತು ರಾಯಚೂರು ಜಿಲ್ಲೆಯಿಂದ ಲಿಂಗಸೂರು ತಾಲೂಕಿನ ಭೀಮನಗೌಡ, ಸಿಂಧನೂರು ತಾಲೂಕಿನ ಎನ್. ಸೀತಾರಾಮಲಕ್ಷ್ಮಿ, ಪ್ರವೀಣಕುಮಾರ, ಮಸ್ಕಿಯ ಅಮರಗುಂಡಪ್ಪ ಅವರು ಗೆಲುವು ಸಾಧಿಸಿದರು. ವಿಜಯನಗರ ಜಿಲ್ಲೆಯಿಂದ ಎರಡು ಖಾಸಗಿ ಬಸ್‌ಗಳ ಮೂಲಕ ಮತದಾರರನ್ನು ಕರೆತಂದು ಮತ ಚಲಾಯಿಸಿದ್ದು ಗಮನ ಸೆಳೆಯಿತು.
ರಾಬಕೊವಿ ಚುನಾವಣೆ ಕಾಂಗ್ರೆಸ್, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಡುವಿನ ತೀವ್ರ ಪೈಪೋಟಿಗೆ ಸಾಕ್ಷಿಯಾಗಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದರು. ಫಲಿತಾಂಶ ಬಳಿಕ ಮಾಜಿ ಶಾಸಕ ಭೀಮಾನಾಯ್ಕ ಅವರನ್ನು ಪಕ್ಷದ ಮುಖಂಡರು ಅಭಿನಂದಿಸಿದರು.