ಶಿವಾನಂದ ಗೊಂಬಿ ಹುಬ್ಬಳ್ಳಿ
ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭಿಸಿದ್ದ ಕೆಪಿಸಿಸಿ ಎರಡ್ಮೂರು ದಿನಗಳಲ್ಲೇ ಪ್ರಕ್ರಿಯೆ ಮುಂದೂಡಿದೆ. ಇದು ಹಾಲಿ ಇರುವ ಅಧ್ಯಕ್ಷರ ಮೊಗದಲ್ಲಿ ಮಂದಹಾಸ ಮೂಡಿದ್ದರೆ, ಅಧ್ಯಕ್ಷಗಿರಿಯ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳಲ್ಲಿ ನಿರಾಸೆಯನ್ನುಂಟು ಮಾಡಿದೆ.ಕೆಪಿಸಿಸಿಯು 5 ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿರುವ ವಿವಿಧ ಜಿಲ್ಲಾಧ್ಯಕ್ಷರನ್ನು ಬದಲಿಸಲು ನಿರ್ಧರಿಸಿತ್ತು. ಅದರಂತೆ ಪ್ರತಿ ಜಿಲ್ಲೆಗೆ ಇಬ್ಬರಂತೆ ವೀಕ್ಷಕರನ್ನು ನೇಮಿಸಿತ್ತು. ಕೆಲವೊಂದೆಡೆ ನೇಮಕಾತಿ ಪ್ರಕ್ರಿಯೆಯೂ ಶುರುವಾಗಿತ್ತು. ಜಿಲ್ಲಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟವರು ಲಾಬಿ ಕೂಡ ನಡೆಸುತ್ತಿದ್ದರು. ಅದರಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರು ಕಳೆದ ಏಳುವರೆ ವರ್ಷದಿಂದ ಅಧ್ಯಕ್ಷರಾಗಿದ್ದರೆ,ಅನಿಲಕುಮಾರ ಪಾಟೀಲ ಏಳು ವರ್ಷದಿಂದ ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷರಾಗಿದ್ದಾರೆ.
5 ವರ್ಷಕ್ಕಿಂತ ಹೆಚ್ಚು ಅವಧಿಯಿಂದ ಇವರಿಬ್ಬರು ಇರುವ ಕಾರಣದಿಂದ ಇಬ್ಬರು ಬದಲಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ಹೀಗಾಗಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟವರು ಸಾಕಷ್ಟು ಲಾಬಿ ನಡೆಸುತ್ತಿದ್ದರು. ಜತೆಗೆ ಇವರು ಕೂಡ ಈಗಲೇ ನಮ್ಮನ್ನು ಕೆಳಕ್ಕಿಳಿಸಬೇಡಿ ಎಂದು ಲಾಬಿ ನಡೆಸುತ್ತಿದ್ದರು.ಅದರಲ್ಲೂ ಈಗಾಗಲೇ ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ಕೊಡಬೇಕು. ಆದರೆ ಈಗಿರುವವರನ್ನು ಬದಲಿಸಬೇಕು ಎಂದು ಆಗ್ರಹ ಅಲ್ಪಸಂಖ್ಯಾತರು ಮಾಡುತ್ತಿದ್ದರೆ, ಈಗಾಗಲೇ ಹುಡಾ ಅಧ್ಯಕ್ಷ ಸ್ಥಾನ, ಪಾಲಿಕೆ ವಿರೋಧ ಪಕ್ಷದ ನಾಯಕನ ಸ್ಥಾನ ಅಲ್ಪಸಂಖ್ಯಾತರಿಗೆ ಕೊಡಲಾಗಿದೆ. ಹೀಗಾಗಿ ನಮಗೆ ಕೊಡಬೇಕು ಎಂದು ಬಹುಸಂಖ್ಯಾತರು ಬೇಡಿಕೆಯನ್ನಿಟ್ಟಿದ್ದರು. ಗ್ರಾಮೀಣ ಜಿಲ್ಲಾಧ್ಯಕ್ಷ ಸ್ಥಾನವನ್ನೂ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವವರಿಗೆ ನೀಡಬೇಕು. ನಗರ ಪ್ರದೇಶದಲ್ಲಿರುವವರೆಗೆ ನೀಡಬಾರದೆಂಬ ಬೇಡಿಕೆಯನ್ನಿಟ್ಟು ಲಾಬಿ ನಡೆಸುತ್ತಿದ್ದರು. ಈ ಸಂಬಂಧ ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದುಂಟು.
ಆದರೆ ಇವೆಲ್ಲ ಚರ್ಚೆಗಳ ಮಧ್ಯೆಯೇ ಇದೀಗ ಸದ್ಯಕ್ಕೆ ಯಾವುದೇ ಜಿಲ್ಲಾಧ್ಯಕ್ಷ ಸ್ಥಾನ ಬದಲಿಸುವುದಿಲ್ಲ. ಕಾರಣಾಂತರಗಳಿಂದ ಇದನ್ನು ಸದ್ಯಕ್ಕೆ ಮುಂದೂಡಲಾಗಿದೆ. ಈ ಸಂಬಂಧ ಯಾವುದೇ ಸಭೆಗಳನ್ನು ನಡೆಸಬಾರದು. ಈಗಾಗಲೇ ಸಭೆ ಕರೆದಿದ್ದರೆ ಅವುಗಳನ್ನು ರದ್ದುಪಡಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆಗೆ ಬ್ರೇಕ್ ಬಿದ್ದಂತಾಗಿದೆ.ಕಾರಣವೇನು?: ಜಿಲ್ಲಾಧ್ಯಕ್ಷರಾಗಿರುವವರಿಗೆ ಸರ್ಕಾರ ಅಥವಾ ಪಕ್ಷದಲ್ಲಿ ಬೇರೆ ಸ್ಥಾನ ಮಾನ ನೀಡಿದ ನಂತರ ಬದಲಾವಣೆಗೆ ಮುಂದಡಿ ಇಡಲು ಕೆಪಿಸಿಸಿ ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ. ಇದರ ಜತೆ ಜತೆಗೆ ರಾಜ್ಯದಲ್ಲೂ ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ರಾಜಕಾರಣವೂ ಜೋರಾಗಿ ನಡೆಯುತ್ತಿದೆ. ಮೊದಲು ಅಲ್ಲಿನ ಸಮಸ್ಯೆ ಬಗೆಹರಿಸಿಕೊಂಡು ಜಿಲ್ಲಾ ಮಟ್ಟಕ್ಕೆ ಕೈ ಹಾಕೋಣ ಎಂದು ಕೆಪಿಸಿಸಿ ಸದ್ಯಕ್ಕೆ ಬೇಡ ಎಂದು ಮುಂದೂಡಿದೆ ಎಂದು ಕೂಡ ಮೂಲಗಳು ತಿಳಿಸುತ್ತಿವೆ.
ಸಂತಸ; ನಿರಾಸೆ: ಇನ್ನು ನೇಮಕಾತಿ ಪ್ರಕ್ರಿಯೆಗೆ ಬ್ರೇಕ್ ಬಿದ್ದಿದ್ದಕ್ಕೆ ಜಿಲ್ಲಾಧ್ಯಕ್ಷರಾಗಿರುವವರಲ್ಲಿ ಮಂದಹಾಸ ಮೂಡಿದ್ದರೆ, ಅದರ ಮೇಲೆ ಕಣ್ಣಿಟ್ಟವರಲ್ಲಿ ನಿರಾಸೆ ಮೂಡಿದೆ. ಹೀಗಾಗಿ ತಮ್ಮ ತಮ್ಮ ಮುಖಂಡರ ಮೂಲಕ ಮುಂದೂಡುವುದು ಬೇಡ ಈಗಲೇ ಮಾಡಿ. ಇವರೆಲ್ಲ ಜಿಲ್ಲಾಧ್ಯಕ್ಷರಾಗಿ ಏಳೆಂಟು ವರ್ಷವಾಯಿತು ಎಂದು ಕೂಡ ಕೆಲ ಮುಖಂಡರು ಒತ್ತಡ ಹೇರುವ ಪ್ರಯತ್ನವನ್ನೂ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಒಟ್ಟಿನಲ್ಲಿ ಜಿಲ್ಲಾಧ್ಯಕ್ಷ ಬದಲಾವಣೆ ಕುರಿತಂತೆ ತೀವ್ರ ಚರ್ಚೆಗೆ ಗ್ರಾಸವನ್ನುಂಟು ಮಾಡಿರುವುದಂತೂ ಸತ್ಯ.