ಹಿರಿಯೂರು / ಸಿರಿಗೆರೆ : ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬರಲು ಸಹಕರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮನವಿ ಮಾಡಿದರು.
ತಾಲೂಕಿನ ಸೂರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಚುನಾವಣೆ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಆಡಳಿತವನ್ನು ದೇಶದ ಜನತೆ ನೋಡಿದ್ದಾರೆ. ಬರಗಾಲ ಬಂದಂತಹ ಸಂದರ್ಭ ದಲ್ಲೂ ಬಡವರನ್ನು ಕೈ ಬಿಡದೇ ಕಾಪಾಡಿದ್ದು ನಮ್ಮ ಕಾಂಗ್ರೆಸ್ ಪಕ್ಷ. ಇದುವರೆಗೂ ಯಾರ ಖಾತೆಗೂ 15 ಲಕ್ಷ ದುಡ್ದು ಬಿದ್ದಿಲ್ಲ ಮತ್ತು ಯುವಕರಿಗೆ ಉದ್ಯೋಗ ಸಿಕ್ಕಿಲ್ಲ. ಸುಳ್ಳು ಹೇಳಿ ಅಧಿಕಾರ ಪಡೆಯುವುದನ್ನೇ ರಾಜಕಾರಣ ಮಾಡಿಕೊಂಡಿರುವ ವಿರೋಧಿಗಳಿಗೆ ಈ ಬಾರಿ ಮತದಾರರು ತಕ್ಕ ಪಾಠ ಕಲಿಸಬೇಕಿದೆ.
ಕಾಂಗ್ರೆಸ್ ಪಕ್ಷದ ನೇತೃತ್ವದ ರಾಜ್ಯ ಸರ್ಕಾರ ಈಗಾಗಲೇ ನುಡಿದಂತೆ ನಡೆದು ಐದು ಗ್ಯಾರಂಟಿಗಳನ್ನು ಜಾರಿ ಮಾಡಿ ಜನಮನ ಗೆದ್ದಿದೆ. ಸರ್ಕಾರಕ್ಕೆ ಹೊರೆಯಾಗುತ್ತದೆ ಎಂಬ ಸತ್ಯ ಗೊತ್ತಿದ್ದರೂ ಸಹ ಮಾತು ತಪ್ಪಬಾರದು, ಬಡವರಿಗೆ ಅನ್ಯಾಯವಾಗಬಾರದು ಎಂದು ನಮ್ಮ ಸರ್ಕಾರ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡಿತು. ಶೇ.76 ರಷ್ಟು ಜನರು ಗ್ಯಾರಂಟಿ ಯೋಜನೆಗಳನ್ನು ಒಪ್ಪಿದ್ದಾರೆ.
ಮತದಾರರು ನೆನಪಿಡ ಬೇಕು. ಕಾಂಗ್ರೆಸ್ ಪಕ್ಷ ಮಾತ್ರ ನಿಮ್ಮ ಸಂಕಷ್ಟಗಳನ್ನು ಬಗೆಹರಿಸುವ ಪಕ್ಷವಾಗಿದೆ. ಗ್ಯಾರಂಟಿಯ ಜಾರಿಯ ನಡುವೆಯೂ ಈಗ ಮತ್ತೆ ಅಭಿವೃದ್ಧಿ ಪರ್ವ ಶುರುವಾಗಿದೆ. ಹಾಗಾಗಿ ಕೇಂದ್ರದಲ್ಲೂ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುವ ಸಮಯ ಬಂದಿದೆ. ಇಡೀ ಲೋಕಸಭಾ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಅಲೆ ಇದ್ದು, ಕಾಂಗ್ರೆಸ್ ಅಭ್ಯರ್ಥಿಯನ್ನು ಬಹುಮತದ ಅಂತರದಲ್ಲಿ ಗೆಲ್ಲಿಸಿ ಕಳುಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಕಾರ್ಯಕರ್ತರು ಯುದ್ಧದೋಪಾದಿಯಲ್ಲಿ ಕೆಲಸ ಮಾಡಬೇಕು. ಗ್ಯಾರಂಟಿ ಯೋಜನೆಗಳ ಸಾರ್ಥಕತೆ ಮತ್ತು ಅದರ ಅನುಕೂಲಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ, ಮುಖಂಡರುಗಳಾದ ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಚಂದ್ರಪ್ಪ, ರಂಗಯ್ಯ, ಭೂತಾ ಭೋವಿ ಹಾಗೂ ಪಂಚಾಯ್ತಿ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರುಗಳು ಕಾರ್ಯಕರ್ತರು ಹಾಜರಿದ್ದರು.
ಜಾತಿ-ಧರ್ಮದ ಮಧ್ಯೆ ಬಿಜೆಪಿಯಿಂದ ವಿಷ ಬೀಜ: ಬಿ.ಎನ್.ಚಂದ್ರಪ್ಪ
ಸಿರಿಗೆರೆ: ಜಾತಿ, ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿರುವ ಬಿಜೆಪಿ ನಾಯಕರಿಗೆ ಈಗಾಗಲೇ ರಾಜ್ಯದ ಮತದಾರರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆ. ಅದೇ ಮಾದರಿಯಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.ಸಿರಿಗೆರೆ ಸುತ್ತಲಿನ ಹಲವು ಗ್ರಾಮಗಳಲ್ಲಿ ಇಂದು ಮತ ಯಾಚಿಸಿ ಮಾತನಾಡಿದ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಮಾನ್ಯರು ತತ್ತರಿಸಿ ಹೋಗಿದ್ದಾರೆ. ಅಡಿಗೆ ಅನಿಲ ಬಳಸುವುದನ್ನು ಬಿಟ್ಟು ಕಟ್ಟಿಗೆ ಒಲೆಗಳ ಕಡೆಗೆ ಜನಸಾಮಾನ್ಯರು ಮುಖ ಮಾಡಿದ್ದಾರೆ. ಅದರಂತೆಯೇ ಗ್ಯಾಸ್, ಪೆಟ್ರೋಲ್, ಡಿಸೆಲ್ ಬೆಲೆಯೂ ಹೆಚ್ಚಾಗಿ ಜನರು ಬಿಜೆಪಿ ಸರ್ಕಾರವನ್ನು ಶಪಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಭಗವದ್ಗೀತೆ, ಬೈಬಲ್, ಕುರಾನ್ ಸೇರಿದಂತೆ ಎಲ್ಲ ಧರ್ಮಗ್ರಂಥಗಳ ಕುರಿತು ಗೌರವ ಇದೆ. ಆದರೆ, ಬಿಜೆಪಿ ನಾಯಕರಿಗೆ ಯಾವ ಧರ್ಮಗಳ ಗ್ರಂಥದ ಬಗ್ಗೆ ಗೌರವ ಇಲ್ಲ. ಭಗವದ್ಗೀತೆಗೆ ಕುರಿತು ಕೂಡ ಗೌರವ ಇಲ್ಲ ಎಂಬುದಕ್ಕೆ ಅವರು ನಡೆಸಿರುವ ಭ್ರಷ್ಟಾಚಾರ, ಗಲಭೆ, ಕೋಮು ದ್ವೇಷದ ಭಾಷಣವೇ ಸಾಕ್ಷಿ ಎಂದರು.ಈಗಾಗಲೇ ಕ್ಷೇತ್ರದಲ್ಲಿ ಬಿ.ಎನ್.ಚಂದ್ರಪ್ಪ ಅವರನ್ನು ಗೆಲ್ಲಿಸಬೇಕೆಂದು ಎಲ್ಲ ಸಮುದಾಯದವರು ಸ್ವಯಂ ಆಗಿ ಸಂಘಟನೆಯಲ್ಲಿ ತೊಡಗಿದ್ದಾರೆ. ಬಸವಣ್ಣನ ಆಶಯದಡಿ ರಚನೆಗೊಂಡಿರುವ ಸಂವಿಧಾನವನ್ನೇ ಬದಲು ಮಾಡಲು ಮುಂದಾಗಿರುವ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ನೋಟ್ ಬ್ಯಾನ್, ಜಿ.ಎಸ್.ಟಿ., ಬೆಲೆ ಏರಿಕೆ ಕಾರಣಕ್ಕೆ ಈಗಾಗಲೇ ಜನರು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಬರುವ ದಿನಗಳಲ್ಲಿ ನೆಮ್ಮದಿ ಜೀವನಕ್ಕೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಜನರೇ ಸ್ವಯಂ ನಿರ್ಧಾರ ಕೈಗೊಂಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಮಾಜಿ ಸಚಿವ ಹೆಚ್. ಅಂಜನೇಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಲಿಂಗವ್ವನಾಗತಿಹಳ್ಳಿ ತೀಪ್ಪೇಸ್ವಾಮಿ ಬಸವರಾಜಯ್ಯ ವಿಜಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.