ದ್ವೇಷದ ರಾಜಕಾರಣಕ್ಕೆ ಕಾಂಗ್ರೆಸ್ ಬುನಾದಿ: ನಿಖಿಲ್ ಕುಮಾರಸ್ವಾಮಿ

KannadaprabhaNewsNetwork | Published : Mar 21, 2025 12:31 AM

ಸಾರಾಂಶ

ಬಿಡದಿಯ ಕೇತಗಾನಹಳ್ಳಿ ಜಮೀನನ್ನು ೧೯೮೪-೮೫ರಲ್ಲಿ ಚೆನ್ನಾಂಬಿಕಾ ಫಿಲಂಸ್‌ನಿಂದ ಬಂದ ಹಣದಲ್ಲಿ ಕುಮಾರಸ್ವಾಮಿ ಅವರು ಖರೀದಿಸಿದ್ದರು. ಅಲ್ಲಿಂದ ಹಲವಾರು ಸರ್ಕಾರಗಳು ಬಂದುಹೋಗಿವೆ. ಆಗಿನಿಂದ ಕಾಣದ ಒತ್ತುವರಿ ಈಗ ಆಗಿದೆಯೇ. ನಾವೂ ಈ ವಿಚಾರವಾಗಿ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ದ್ವೇಷದ ರಾಜಕಾರಣಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಭದ್ರ ಬುನಾದಿ ಹಾಕಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ನಗರದ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಕಲುಷಿತ ಆಹಾರ ಸೇವಿಸಿ ಅಸ್ವಸ್ಥರಾದ ಮಳವಳ್ಳಿ ಗೋಕುಲ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಸ್ವಾತಂತ್ರ್ಯ ಬಂದಾಗಿನಿಂದಲೂ ದ್ವೇಷದ ರಾಜಕಾರಣಕ್ಕೆ ರಾಜ್ಯದಲ್ಲಿ ಸೊಪ್ಪು ಹಾಕಿರಲಿಲ್ಲ. ಕಳೆದೆರಡು ಅವಧಿಯ ಕಾಂಗ್ರೆಸ್ ಸರ್ಕಾರದಲ್ಲಿ ಎಸ್‌ಐಟಿ, ಲೋಕಾಯುಕ್ತ ಸಂಸ್ಥೆಗಳನ್ನು ಪ್ರಭಾವಿಗಳು ದುರುಪಯೋಗಪಡಿಸಿಕೊಂಡು ಕಪ್ಪುಚುಕ್ಕೆ ಮೂಡಿಸಿದ್ದಾರೆ. ಇದರಿಂದ ರಾಜ್ಯ್ಕ ಕಳಂಕ ತಂದುಕೊಂಡಿದ್ದಾಗಿದೆ ಎಂದರು.

ಬಿಡದಿಯ ಕೇತಗಾನಹಳ್ಳಿ ಜಮೀನನ್ನು ೧೯೮೪-೮೫ರಲ್ಲಿ ಚೆನ್ನಾಂಬಿಕಾ ಫಿಲಂಸ್‌ನಿಂದ ಬಂದ ಹಣದಲ್ಲಿ ಕುಮಾರಸ್ವಾಮಿ ಅವರು ಖರೀದಿಸಿದ್ದರು. ಅಲ್ಲಿಂದ ಹಲವಾರು ಸರ್ಕಾರಗಳು ಬಂದುಹೋಗಿವೆ. ಆಗಿನಿಂದ ಕಾಣದ ಒತ್ತುವರಿ ಈಗ ಆಗಿದೆಯೇ. ನಾವೂ ಈ ವಿಚಾರವಾಗಿ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ ಎಂದರು.

ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡಿದರೂ ಒಮ್ಮೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ದ್ವೇಷದ ರಾಜಕಾರಣಕ್ಕೆ ಎಂದಿಗೂ ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ನಿಖಿಲ್, ಮಂಡ್ಯ ಜನರನ್ನು ಛತ್ರಿಗಳು ಎಂದಿರುವ ಡಿ.ಕೆ.ಶಿವಕುಮಾರ್ ಹೇಳಿಕೆ ಕುರಿತು, ಆರು ಮಂದಿ ಕಾಂಗ್ರೆಸ್ ಶಾಸಕರನ್ನು ಕೊಟ್ಟಿರುವ ಜನರ ಬಗ್ಗೆ ಇಂತಹ ಹೇಳಿಕೆಗಳನ್ನು ನೀಡುವುದು ನಾಯಕರಾದವರಿಗೆ ಶೋಭೆ ತರುವುದಿಲ್ಲ. ನಾಯಕರ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುವ ಜಿಲ್ಲೆಯ ಪ್ರಭಾವಿ ಶಾಸಕರೊಬ್ಬರು ಛತ್ರಿಗಳು ಎಂದರೆ ಪ್ರಬುದ್ಧರು, ಬುದ್ಧಿವಂತರು, ಸಮಯ ಬಂದಾಗ ಸರಿಯಾದ ತೀರ್ಮಾನ ತೆಗೆದುಕೊಳ್ಳುವವರು ಎಂದು ವ್ಯಾಖ್ಯಾನ ಬೇರೆ ನೀಡುತ್ತಾರೆ ಎಂದು ಜರಿದರು.

ರಾಮನಗರ ಹೆಸರು ಬದಲಿಸಿದಾಕ್ಷಣ ಅಭಿವೃದ್ಧಿಯಾಗುವುದಿಲ್ಲ. ಮಾತೆತ್ತಿದರೆ ಗ್ಯಾರಂಟಿ ಎನ್ನುತ್ತಾರೆ. ಈಗಾಗಲೇ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಸ್ಥಗಿತಗೊಂಡು, ರಾಜ್ಯದ ಜನರ ಮೇಲೆ ಬೆಲೆ ಏರಿಕೆ ಬರೆ ಎಳೆಯುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ಕೋಟಿ ಸಾಲದ ಹೊರೆ ಕರ್ನಾಟಕದ ಮೇಲಿದೆ. ಹಿಮಾಚಲ ಪ್ರದೇಶ, ತೆಲಂಗಾಣ ಸರ್ಕಾರಗಳು ದಿವಾಳಿಯ ಅಂಚಿಗೆ ಬಂದಿವೆ. ರಾಜ್ಯದಲ್ಲೂ ಹಣವಿಲ್ಲದೆ ಒದ್ದಾಡುತ್ತಿದೆ. ಮುಂದೆ ರಾಜ್ಯಕ್ಕೆ ಯಾವ ಸ್ಥಿತಿ ಎದುರಾಗುವುದೋ ನೋಡೋಣ ಎಂದರು.

ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿಪಂ ಮಾಜಿ ಸದಸ್ಯ ಕಂಸಾಗರ ರವಿ, ಬಿ.ಆರ್.ಸುರೇಶ್, ನಗರಸಭೆ ಸದಸ್ಯ ಟಿ.ಕೆ.ರಾಮಲಿಂಗು ಇತರರಿದ್ದರು.

Share this article