ಕನ್ನಡಪ್ರಭ ವಾರ್ತೆ ಜಮಖಂಡಿ
ರಾಜ್ಯದ ಕಾಂಗ್ರೆಸ್ ಸರ್ಕಾರ ಮೂಲ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿದೆ. ರಾಜ್ಯದಾದ್ಯಂತ ರಸ್ತೆಗಳು ಹದಗೆಟಗೆಟ್ಟು ಹೋಗಿದೆ. ತಾಲೂಕಿನ 12ನೂರು ಕಿಮೀ ರಸ್ತೆಯ ಪೈಕಿ 850 ಕಿ.ಮೀ ರಸ್ತೆ ಹಾಳಾಗಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ಔಷಧಿಯ ಕೊರತೆ ಇದೆ, ಹಲವು ಬಾರಿ ಸರ್ಕಾರಕ್ಕೆ ಹಾಗೂ ಸಚಿವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಉಚಿತ ಯೋಜನೆಗಳನ್ನು ಜಾರಿಗೊಳಿಸಿದ ರಾಜ್ಯಸರ್ಕಾರದ ಆರ್ಥಿಕ ಪರಿಸ್ಥಿತಿ ಮುಗ್ಗರಿಸಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಆರೋಪಿಸಿದರು. ಬುಧವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ರಸ್ತಾ ರೋಕೋ ಹೋರಾಟ ಉದ್ದೇಶಿಸಿ ಮಾತನಾಡಿದರು. ಮುಧೋಳ ರಸ್ತೆ ಕಟ್ಟೆ ಕೆರೆ ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಕೆಲಕಾಲ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯ ಸರ್ಕಾರ ಮೂಲ ಸೌಕರ್ಯ ಒದಗಿಸುವ ಜವಾಬ್ದಾರಿ ಮರೆತಂತಿದೆ. ರಸ್ತೆಗಳು ಹಾಳಾಗಿರುವುದರಿಂದ ರಾಜ್ಯದ ಮರ್ಯಾದೆ ಹರಾಜಾಗುತ್ತಿದೆ. ಪರರಾಜ್ಯ ಹಾಗೂ ವಿದೇಶಗಳ ಜನರು ರಸ್ತೆಯ ದುಃಸ್ತಿತಿ ಟೀಕಿಸುತ್ತಿದ್ದಾರೆ. ಕೆಲ ಕಂಪನಿಗಳು ಪಲಾಯನಕ್ಕೆ ಮುಂದಾಗಿವೆ. ರಾಜ್ಯಧಾನಿ ಬೆಂಗಳೂರಿನಲ್ಲಿಯೂ ಪರಿಸ್ಥಿತಿ ಹೊರತಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನ ಹರಿಸುವ ಮೂಲಕ ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ಮುಂದಾಗಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಮಾತನಾಡಿ ಕಾಂಗ್ರೆಸ್ ಸರ್ಕಾರದ ನೀತಿಯಿಂದಾಗಿ ರಾಜ್ಯದ ರಸ್ತೆಗಳ ಸ್ಥಿತಿ ಹದಗೆಟ್ಟು ಹೋಗಿದೆ. ಗುಂಡಿಗಳ ಊರು ಎಂಬ ಕುಗ್ಗಳಿಕೆಗೆ ಪಾತ್ರವಾಗಿದೆ, ಸರ್ಕಾರ ಎಚ್ಚೆತ್ತು ಗುಂಡಿಗಳನ್ನು ಮುಚ್ಚುವ ಕೆಲಸ ಮಾಡದಿದ್ದರೆ ರಾಜ್ಯದ ಜನರು ಅದೇ ಗುಂಡಿಗಳಲ್ಲಿ ಕಾಂಗ್ರೆಸ್‌ನ್ನು ಮುಚ್ಚುತ್ತಾರೆ ಎಂದು ಎಚ್ಚರಿಸಿದರು.
ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ವಿಜಯಲಕ್ಷ್ಮೀ ತುಂಗಳ ಮಲ್ಲು ದಾನಗೌಡ, ಧರೆಪ್ಪ ಗುಗ್ಗರಿ, ಅಜಯ ಕಡಪಟ್ಟಿ, ಮಲ್ಲೇಶ ಹುಟಗಿ, ರಾಜಾಸಾಬ ಕಡಕೋಳ, ಶಾಲಿನಿ ಹಿರೇಮಠ, ಗೀತಾ ಸೂರ್ಯವಂಶಿ, ಶ್ರೀಧರ ಕಂಬಿ, ಸುರೇಶಗೌಡ, ಪಾಟೀಲ, ಎಂ.ಬಿ.ಪಾಟೀಲ, ಗಣೇಶ ಸಿರಗಣ್ಣವರ, ಯಮನೂರು ಮುಲ್ಲಂಗಿ, ನ್ಯಾಯವಾದಿ ಝುಲ್ಪಿ, ಗುರುಪಾದಪ್ಪ ಮೆಂಡಿಗೇರಿ, ಪ್ರಕಾಶ ಅರಕೇರಿ ಸೇರಿದಂತೆ ಹಲವಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.