ಕನ್ನಡಪ್ರಭ ವಾರ್ತೆ ಶಹಾಪುರ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದುಡಿಯುವ ಹಾಗೂ ರೈತರ ಪರವಾಗಿ ಕಾರ್ಯನಿರ್ವಹಿಸದೆ, ಓಟಿಗಾಗಿ ಆಡಳಿತ ನಡೆಸುತ್ತಿವೆ. ರೈತರ ಸಮಸ್ಯೆಗೆ ಸ್ಪಂದಿಸದ ರೈತ ವಿರೋಧಿ ಸರ್ಕಾರವನ್ನು ಮುಂದುವರಿಯಲು ಅವಕಾಶ ನೀಡಬೇಡಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಕರೆ ನೀಡಿದರು.ನಗರದ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಈವರೆಗೆ ಐದು ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರದ ಫಸಲ್ ಬಿಮಾ ಯೋಜನೆಯಿಂದ ಖಾಸಗಿ ವಿಮಾ ಕಂಪನಿಗಳಿಗೆ ಲಾಭವಾಗಿದೆಯೇ ಹೊರತು ರೈತರಿಗೆ ಅಲ್ಲ. ಸ್ವಾಮಿನಾಥನ್ ವರದಿ ಪ್ರಕಾರ, ರೈತರು ಕೃಷಿಗೆ ವೆಚ್ಚ ಮಾಡುವ ಹಣದ ಅರ್ಧದಷ್ಟು ಹೆಚ್ಚು ದರವನ್ನು ಉತ್ಪನ್ನಗಳಿಗೆ ನಿಗದಿ ಮಾಡಬೇಕು ಎಂದರು.
ಚುನಾವಣೆಗೆ ಮುನ್ನ, ನಾವು ಅಧಿಕಾರ ಚುಕ್ಕಾಣಿ ಹಿಡಿದರೆ ಡಾ. ಸ್ವಾಮಿನಾಥನ್ ವರದಿ ಜಾರಿ ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡಿ ರೈತರಿಂದ ಓಟು ಪಡೆದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಡಾ. ಸ್ವಾಮಿನಾಥನ್ ವರದಿ ಜಾರಿ ಮಾಡಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟಿಗೆ ಅಫಿಡೆವಿಟ್ ಸಲ್ಲಿಸಿದೆ. ಇದು ಸರ್ಕಾರಕ್ಕೆ ರೈತರ ಬಗ್ಗೆ ಎಷ್ಟೊಂದು ಕಾಳಜಿ ಇದೆ ಎನ್ನುವುದನ್ನು ತೋರಿಸುತ್ತದೆ ಎಂದು ಹೇಳಿದರು.ಸರ್ಕಾರಗಳ ಆರ್ಥಿಕ ನೀತಿಗಳು ರೈತರ ಮತ್ತು ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಪೂರಕವಾಗಿರದೆ ಬಂಡವಾಳಶಾಹಿಗಳಿಗೆ ಅನುಕೂಲಕರವಾಗಿವೆ. ರೈತರ ಆದಾಯ ದ್ವಿಗುಣ ಮಾಡುತ್ತೇನೆ ಎಂದಿದ್ದರು. 2 ಲಕ್ಷ ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂದವರು ಇತ್ತ ಗಮನ ಕೊಡುತ್ತಿಲ್ಲ. ಸರ್ಕಾರಗಳು ಖಾಸಗೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿವೆ. ಕೈಗಾರಿಕಾ ವಲಯಗಳಿಗೆ ಮತ್ತು ಉದ್ದಿಮೆದಾರರಿಗೆ ಅನುಕೂಲ ಮಾಡಿಕೊಡುತ್ತಿವೆ ಎಂದು ಆಪಾದಿಸಿದರು.
ಕೇಂದ್ರ ಸರ್ಕಾರ ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಂಡು ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯುವ ತವಕದಲ್ಲಿದೆ. ಅಭಿವೃದ್ಧಿಯತ್ತ ಚಿಂತನೆ ಕೆಲಸ ಕಾರ್ಯಗಳು ಆಗುತ್ತಿಲ್ಲ. ರೈತರು ಬಡತನ ರೇಖೆಗಿಂತ ಕೆಳಗೆ ಸಂಕಷ್ಟದ ಬದುಕನ್ನು ಸಾಗಿಸುತ್ತಿದ್ದಾರೆ. ಬರಗಾಲಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದರು.ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿದರು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನಮ್ಮ ಪಾಟೀಲ್, ಮುಖಂಡರಾದ ಚಂದ್ರಕಲಾ, ಮಲಕಣ್ಣ ಚಿಂತಿ, ಆರ್.ಎಸ್. ಮಠ, ಪ್ರಭಾಕರಗೌಡ ಇತರರಿದ್ದರು. ನಂತರ ಸಂಘದ ಕಲಬುರಗಿ ವಿಭಾಗದ ಸಭೆ ಜರುಗಿತು.