ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್‌

KannadaprabhaNewsNetwork | Published : Mar 17, 2024 1:46 AM

ಸಾರಾಂಶ

ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ಮನ್ನಾ, ಗುಳೆ ತಡೆಯುತ್ತಾರೆ ಎಂದು ರೈತರು ನಿರೀಕ್ಷಿಸಿದ್ದರು. ₹2000 ಘೋಷಣೆ ಮಾಡಿದ್ದರೂ ರೈತರಿಗೆ ತಲುಪಿಲ್ಲ.

ಗದಗ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲವಾಗಿದೆ. ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಆರೋಪಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ 9 ತಿಂಗಳ ಅವಧಿಯಲ್ಲಿ ಭಯಾನಕ ಘಟನೆಗಳು ನಡೆದಿವೆ. ಪ್ರಥಮವಾಗಿ ರಾಜ್ಯದಲ್ಲಿ ಬಂದಿರುವ ಭೀಕರ ಬರಗಾಲ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.

ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ಮನ್ನಾ, ಗುಳೆ ತಡೆಯುತ್ತಾರೆ ಎಂದು ರೈತರು ನಿರೀಕ್ಷಿಸಿದ್ದರು. ₹2000 ಘೋಷಣೆ ಮಾಡಿದ್ದರೂ ರೈತರಿಗೆ ತಲುಪಿಲ್ಲ. ಬೆಳಗಾವಿ ಜಿಲ್ಲೆಯ ಒಂಟಮುರಿ ಗ್ರಾಮದಲ್ಲಿ ನಡೆದ ಮಹಿಳೆ ವಿವಸ್ತ್ರಗೊಳಿಸುವ ಪ್ರಕರಣ, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರ ಗ್ರಾಮದಲ್ಲಿ ನೈತಿಕ ಪೊಲೀಸಗಿರಿ ಹಾಗೂ ಮಹಿಳೆ ಅತ್ಯಾಚಾರ ಪ್ರಕರಣ ಸೇರಿದಂತೆ ಅನೇಕ ಪ್ರಕರಣಗಳು ನಡೆದಿವೆ. ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ವಿಧಾನಸೌಧದಲ್ಲಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದ ನಾಸೀರಹುಸೇನ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದು ನಾಚಿಕೆಗೇಡಿನದ ಸಂಗತಿಯಾಗಿದೆ. ಕರಸೇವಕರನ್ನು ಬಂಧಿಸುವುದು, ದೇಶದ್ರೋಹಿಗಳನ್ನು ಬೆಂಬಲಿಸುವುದು ನಡೆದಿದೆ ಎಂದು ಆರೋಪಿಸಿದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಇಂತಹ ಘಟನೆ ಮರೆಮಾಚಲು‌ ಪ್ರಧಾನಿ ನರೇಂದ್ರ ಮೋದಿ ಮೇಲೆ ಸತ್ಯಕ್ಕೆ ದೂರವಾದ ಆರೋಪ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ತೆರಿಗೆ ಹಣ ಸಮನಾಗಿ ಹಂಚುತ್ತಿಲ್ಲ ಎಂದು ಆರೋಪಿಸುತ್ತಾರೆ. 2004ರಿಂದ 2014ರ ವರೆಗೆ ಮನಮೋಹನಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ₹81 ಸಾವಿರ ಕೋಟಿ ನೀಡಿದ್ದರು. ನರೇಂದ್ರ ಮೋದಿ ಅಧಿಕಾರವಧಿಯಲ್ಲಿ 2014ರಿಂದ 2024ರ ವರೆಗೆ ₹ 2.85 ಲಕ್ಷ ಕೋಟಿ ನೀಡಿದ್ದಾರೆ. ಇವೆಲ್ಲ ಗೊತ್ತಿದ್ದರೂ ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮೇಲೆ ಸುಳ್ಳು ಆಪಾದನೆ ಮಾಡುತ್ತಿರುವುದನ್ನು ನಿಲ್ಲಸಬೇಕು ಎಂದು ಆಗ್ರಹಿಸಿದರು.

ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಧಾನ ಪರಿಷತ್ ಸದಸ್ಯರಿಗೆ ಪ್ರಥಮ ಬಾರಿಗೆ ಜವಾಬ್ದಾರಿ ನೀಡಿದ್ದು, 10 ತಂಡಗಳನ್ನಾಗಿ ಮಾಡಿ ತಲಾ ಒಂದೊಂದು ತಂಡಗಳು 4 ಜಿಲ್ಲೆಯಲ್ಲಿ ಪ್ರವಾಸ ಮಾಡಿ ಪ್ರವಾಸದ ಸಂದರ್ಭದಲ್ಲಿ ಬೇರೆ ಬೇರೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೈತ, ಶಿಕ್ಷಕರು ಹಾಗೂ ಎಲ್ಲ ವರ್ಗದವರನ್ನು ಭೇಟಿಯಾಗಿ ಕಳೆದ 10 ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿ ನೀಡಿದ ಜನಪರ ಕಾರ್ಯಕ್ರಮಗಳ ಬಗ್ಗೆ ತಿಳಿಸುವುದರ ಜತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಬಗ್ಗೆ ತಿಳಿವಳಿಕೆ ನೀಡುವುದು ನಮ್ಮ ಉದ್ದೇಶ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ ಮಾತನಾಡಿ, ರಾಜ್ಯ ತೀವ್ರ ಬರಗಾಲ ಎದುರಿಸುತ್ತಿದ್ದು, ಕುಡಿಯುವ ನೀರಿನ ಅಭಾವ ತಲೆದೂರಿದೆ. ಎಲ್ಲ ಕಡೆಗಳಲ್ಲಿ ನೀರಿನ ಟ್ಯಾಂಕರ್ ಮಾಫಿಯಾ ಆರಂಭವಾಗಿದೆ. ಇದು ಬಡವರ ಮೇಲೆ ಹೊರೆಯಾಗುತ್ತಿದೆ. ಈ ಸಂದರ್ಭದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ಜನರ ಸಂಕಷ್ಟಕ್ಕೆ ಕೈ ಹಿಡಿಯುವ ಕೆಲಸ‌ಮಾಡಿ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಎಂ.ಎಸ್. ಕರಿಗೌಡ್ರ, ಸಿದ್ದಣ್ಣ ಪಲ್ಲೇದ, ರವಿ ಶಿದ್ಲಿಂಗ್, ರಮೇಶ ಸಜ್ಜಗಾರ, ಅಶೋಕ ಕುಡತಿನಿ, ಸಂತೋಷ ಅಕ್ಕಿ ಇದ್ದರು.

Share this article