ಕಾಂಗ್ರೆಸ್ಸಿಗೆ ಸಮಾನತೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಕಾಗೇರಿ

KannadaprabhaNewsNetwork | Published : Mar 7, 2024 1:55 AM

ಸಾರಾಂಶ

ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತಂದು, ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಸಮಾನತೆಯ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.

ಸಿದ್ದಾಪುರ:

ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತಂದು, ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಸಮಾನತೆಯ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಪಟ್ಟಣದ ರಾಘವೇಂದ್ರ ಮಠದಲ್ಲಿ ಸಿದ್ದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.ಬಿಜೆಪಿಗೆ ಮೊದಲು ಹೊರಗಿನ ಸವಾಲುಗಳು ಬಹಳಷ್ಟಿದ್ದವು. ಆದರೆ ಇಂದು ಆಂತರಿಕ ಸವಾಲುಗಳಿವೆ. ಬಿಜೆಪಿ ಯಾವುದೇ ಒಬ್ಬ ವ್ಯಕ್ತಿಯಿಂದ ನಿರ್ಮಾಣವಾದುದಲ್ಲ. ಇದು ಸಹಸ್ರಾರು ಕಾರ್ಯಕರ್ತರ ಶ್ರಮದಿಂದ ಸಾಧ್ಯವಾಗಿದೆ. ಕೇವಲ ಲೋಕಸಭೆಯ ಚುನಾವಣೆಯಲ್ಲಿ ಮಾತ್ರವಲ್ಲದೆ ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿಯೂ ಸಹ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.ಪಂಪ ಪ್ರಶಸ್ತಿಯನ್ನು ಕದಂಬೋತ್ಸವ ನಡೆದ ಬನವಾಸಿಯಲ್ಲಿ ನೀಡದೆ ಬೆಂಗಳೂರಿನಲ್ಲಿ ನೀಡಿರುವುದು ಬೇಸರ ಮೂಡಿಸಿದೆ. ಮುಖ್ಯಮಂತ್ರಿಗಳು ಕದಂಬೋತ್ಸವಕ್ಕೆ ಚಾಲನೆ ನೀಡಿರುವುದು ಸಂತಸ ತಂದಿದ್ದರೂ ಕದಂಬರ ಮತ್ತು ಜಿಲ್ಲೆಯ ಇತಿಹಾಸವನ್ನು ಸ್ಮರಿಸದೆ ವೇದಿಕೆಯನ್ನು ಕೇವಲ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕಾಗಿ ಬಳಸಿರುವುದು ಜನತೆಗೆ ನೋವುಂಟು ಮಾಡಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್‌.ಎಸ್. ಹೆಗಡೆ ಮಾತನಾಡಿ, ಪ್ರತಿ ಮೂರು ವರ್ಷಕ್ಕೊಮ್ಮೆ ಜವಾಬ್ದಾರಿ ಬದಲಾವಣೆ ಪಕ್ಷದ ನಿಲುವಾಗಿದೆ. ಧರ್ಮ ಮತ್ತು ಅಧರ್ಮಗಳ ನಡುವೆ ನಡೆಯಲಿರುವ ಚುನಾವಣೆಯನ್ನು ಗಮನದಲ್ಲಿಟ್ಟು ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನರೇಂದ್ರ ಮೋದಿ ಅವರ ಜನಪರ ಯೋಜನೆಗಳನ್ನು ಜನರಿಗೆ ಮನದಟ್ಟು ಮಾಡಿದರೆ ಬಿಜೆಪಿ ದೇಶದಲ್ಲಿ ಪ್ರಚಂಡ ಬಹುಮತದೊಂದಿಗೆ ಜಯಗಳಿಸುವುದು ನಿಶ್ಚಿತ. ಕರ್ನಾಟಕದಲ್ಲಿ ೨೮ ಸ್ಥಾನ ಗೆಲ್ಲಿಸಿ ದೇಶಕ್ಕೆ ನಮ್ಮ ಕೊಡುಗೆ ನೀಡಬೇಕು ಎಂದರು.ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ನಂದನ ಬೋರ್ಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ನಾಯ್ಕ, ನಿಕಟಪೂರ್ವ ಮಂಡಲಾಧ್ಯಕ್ಷ ಮಾರುತಿ ನಾಯ್ಕ ಹೊಸೂರು ಮಾತನಾಡಿದರು. ನೂತನ ಮಂಡಲಾಧ್ಯಕ್ಷರಾಗಿ ಪದಗ್ರಹಣ ಮಾಡಿದ ತಿಮ್ಮಪ್ಪ ಮಡಿವಾಳ ಮಾತನಾಡಿ ಕಾರ್ಯಕರ್ತರ ಸಹಕಾರ ಕೋರಿದರು. ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ತಾಲೂಕು ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ ಇದ್ದರು.

Share this article