ಕಾಂಗ್ರೆಸ್ಸಿನವರದು ಬರಿ ಬೆಂಕಿ ಹಚ್ಚುವ ಕೆಲಸ: ಟೆಂಗಿನಕಾಯಿ

KannadaprabhaNewsNetwork | Updated : Mar 04 2024, 02:52 PM IST

ಸಾರಾಂಶ

ಎರಡೂ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರು ಯಾರೇ ಆಗಿರಲಿ ಅವರನ್ನು ಒದ್ದು ಒಳಗೆ ಹಾಕಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಗಂಭೀರ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಯಾವಾಗ- ಯಾವಾಗ ಅಧಿಕಾರಕ್ಕೆ ಬರುತ್ತದೆಯೋ ಆವಾಗೆಲ್ಲ ಬೆಂಕಿ ಹಚ್ಚುವ ಕೆಲಸ ಮಾಡಿಕೊಂಡೇ ಬರುತ್ತಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ರೋಹಿಗಳು ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆ. ಅದು ನಡೆದ ಕೆಲವೇ ದಿನದಲ್ಲಿ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಮಾಡಲಾಗಿದೆ. ಆದರೆ, ಸರ್ಕಾರ ಇಂದಿಗೂ ಆರೋಪಿಗಳನ್ನು ಬಂಧಿಸುವ ಕೆಲಸ ಮಾಡಿಲ್ಲ. ಬದಲಾಗಿ ಎಸ್‌ಎಫ್‌ಐಎಲ್ ವರದಿ ಬಂದಿಲ್ಲ ಎಂದು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ಘಟನೆಗೆ ಸತ್ಯ ಗೊತ್ತಿದ್ದರೂ ಸರ್ಕಾರ ದೇಶದ್ರೋಹಿಗಳ ರಕ್ಷಣೆಗೆ ಮುಂದಾಗಿದೆ. ಎರಡೂ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರು ಯಾರೇ ಆಗಿರಲಿ ಅವರನ್ನು ಒದ್ದು ಒಳಗೆ ಹಾಕಬೇಕು. ಈ ಮೂಲಕ ಗೃಹ ಸಚಿವರು ತಮ್ಮ ತಾಕತ್ತು ಏನೆಂಬುದನ್ನು ತೋರಿಸಲಿ ಎಂದು ಆಗ್ರಹಿಸಿದರು.

ದೇಶ ವಿರೋಧಿ ಹೇಳಿಕೆ ಮತ್ತು ಬಾಂಬ್ ಸ್ಫೋಟದಂತಹ ಕೃತ್ಯಗಳಿಗೆ ಕರ್ನಾಟಕ ಪ್ರಯೋಗ ಶಾಲೆಯಾಗಲಿದೆ. ಮುಂದೆ ಕಾಂಗ್ರೆಸಿನವರ ಬುಡಕ್ಕೆ ಬೆಂಕಿ ಇಟ್ಟಾಗಲೆ ಅವರಿಗೆ ಅರ್ಥವಾಗುತ್ತದೆ. ಪಾಕಿಸ್ತಾನ ಪರ ಘೋಷಣೆ ಕೂಗಿ ತನಿಖೆ ಎದುರಿಸುತ್ತಿರುವ ಆರೋಪಿಗಳಿಗೆ ತನಿಖೆ ಹೆಸರಿನಲ್ಲಿ ಪೊಲೀಸರು ಚಹಾ ಕುಡಿಸಿ ಕಳುಹಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಕೆಲವು ಕಾರಣಗಳಿಂದ ರಾಜ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ವಿಳಂಬವಾಗಿದ್ದು, ಆದಷ್ಟು ಬೇಗ ಪಟ್ಟಿ ಬಿಡುಗಡೆಯಾಗಲಿದೆ. ದೇಶದ ಹಲವು ರಾಜ್ಯಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಘೊಷಣೆಯಾಗಿಲ್ಲ. ಮೊದಲ ಹಂತದಲ್ಲಿ 195 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದರು.

Share this article