ಸಿಎಂ ರಾಜೀನಾಮೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

KannadaprabhaNewsNetwork | Published : Aug 23, 2024 1:18 AM

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ಅವಮಾನಿಸಿದ ಕಾಂಗ್ರೆಸ್ ಕ್ರಮವನ್ನು ಖಂಡಿಸಿ ನಗರದ ಸ್ವಾತಂತ್ರ್ಯಉದ್ಯಾನವನದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿ, ಸರ್ಕಾರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಡಾ ಹಗರಣ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ಅವಮಾನಿಸಿದ ಕಾಂಗ್ರೆಸ್ ಕ್ರಮವನ್ನು ಖಂಡಿಸಿ ನಗರದ ಸ್ವಾತಂತ್ರ್ಯಉದ್ಯಾನವನದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿ, ಸರ್ಕಾರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು.

ಗುರುವಾರ ನಗರದ ಫ್ರೀಡಂಪಾರ್ಕ್‌ನಲ್ಲಿ ಮೇಲ್ಮನೆ ಪ್ರತಿಪಕ್ಷನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಲಾಯಿತು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ದಲಿತರಿಗೆ ಅನ್ಯಾಯ ಮಾಡಿದ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಮತ್ತು ಕಾಂಗ್ರೆಸ್ಸಿನಲ್ಲಿರುವ ದಲಿತ ಮುಖಂಡರು, ಜನಪ್ರತಿನಿಧಿಗಳು ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೆ ನಾವು ವಿರಮಿಸುವುದಿಲ್ಲ. ಭ್ರಷ್ಟಾಚಾರದ ಕಪ್ಪನ್ನು ಅಳಿಸುವವರೆಗೆ ಹೋರಾಟದಿಂದ ಹಿಂಜರಿಸುವುದಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿಗಳು ತಾವು ಹಿಂದುಳಿದ ವರ್ಗದ ನಾಯಕನಾಗಿರುವುದರಿಂದಲೇ ಬಿಜೆಪಿಯವರು ತೊಂದರೆ ಕೊಡುತ್ತಿದ್ದಾರೆ ಎಂದಿದ್ದಾರೆ. ಪ್ರಧಾನಿ ಸಹ ಹಿಂದುಳಿದವರು. ಅವರು ಮುಖ್ಯಮಂತ್ರಿಗಳ ರೀತಿ ಕಾಗೆಯಲ್ಲ. ಅವರು ಕಳಂಕವೇ ಇಲ್ಲದವರು. ಇಡೀ ರಾಜ್ಯ ಸಿದ್ದರಾಮಯ್ಯನವರ ವಿರುದ್ಧ ಇದ್ದು, ದಲಿತರಿಗೆ ಮೀಸಲಿಟ್ಟ ಹಣ ವರ್ಗಾವಣೆ ಪ್ರಕರಣ, ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ ಎಲ್ಲವೂ ದಲಿತ ಸಮುದಾಯಕ್ಕೆ ಸೇರಿದವುಗಳಾಗಿವೆ. ಕಾಂಗ್ರೆಸ್ ಪಕ್ಷ ದಲಿತರ ಸಮಾಧಿ ಮಾಡುತ್ತಿದ್ದರೆ, ಸ್ವಾಮೀಜಿಗಳು ಆ ಸಮಾಧಿ ಮೇಲೆ ಕುಳಿತು ಅವರಿಗೆ ಬೆಂಬಲ ಕೊಡುವುದು ಸರಿಯಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ಮಾಜಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತೇವೆ ಎಂದು ಜನತೆ ಮುಂದೆ ವಾಗ್ದಾನ ಮಾಡಿದ್ದ ಕಾಂಗ್ರೆಸ್‌‍ ಸರ್ಕಾರ ಭ್ರಷ್ಟಾಚಾರವನ್ನೇ ಒಂದಂಶದ ಕಾರ್ಯಕ್ರಮ ಮಾಡಿಕೊಂಡಿದೆ. ಲೂಟಿ ಹೊಡೆಯುವುದೇ ಕಾಂಗ್ರೆಸ್ ಸರ್ಕಾರದ ನೀತಿಯಾಗಿದೆ. ಸಾಕ್ಷಿ ಸಮೇತ ಹಿಡಿದರೂ ಮುಖ್ಯಮಂತ್ರಿಗಳು ರಾಜೀನಾಮೆ ಕೊಡುವುದಿಲ್ಲ ಮತ್ತು ಜನರ ಭಾವನೆಯನ್ನು ಗೌರವಿಸುವುದಿಲ್ಲ. ಕುರ್ಚಿಗೆ ಅಂಟಿಕೊಂಡೇ ಇರುವ ಭಂಡತನ ಇವರದು ಎಂದು ಕಿಡಿಕಾರಿದರು.

ಕಾಂಗ್ರೆಸ್ಸಿಗರು ಸಂವಿಧಾನ ಕೈಯಲ್ಲಿ ಹಿಡಿದು ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ತಮ್ಮ ಕರ್ತವ್ಯ, ಜವಾಬ್ದಾರಿಗಳ ಕುರಿತು ಮಾತನಾಡುವುದಿಲ್ಲ. ಸಂವಿಧಾನದ ಆಶಯಗಳನ್ನು ಗೌರವಿಸುವುದಿಲ್ಲ. ಕಾಂಗ್ರೆಸ್ಸಿಗರಿಗೆ ಮದ ಬಂದಿದ್ದು, ದುರಹಂಕಾರ ಹೆಚ್ಚಾಗಿದೆ. ಬಾಂಗ್ಲಾ ದೇಶದ ಪರಿಸ್ಥಿತಿ ನಿರ್ಮಿಸುವುದಾಗಿ ಮತ್ತು ರಾಜ್ಯಪಾಲರನ್ನು ನಾಲಾಯಕ್ ರಾಜ್ಯಪಾಲರು ಎನ್ನುತ್ತಾರೆ. ರಾಜಭವನಕ್ಕೆ ನುಗ್ಗಿ ಹಲ್ಲೆ ಮಾಡುವುದಾಗಿ ಎಂದಿದ್ದಾರೆ. ಕಾಂಗ್ರೆಸ್ಸಿಗರ ಈ ನಡೆಯು ಖಂಡನಾರ್ಹ ಎಂದು ವಾಗ್ದಾಳಿ ನಡೆಸಿದರು.

ಫೋಟೋ ಕ್ಯಾಪ್ಷನ್....

ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯಉದ್ಯಾನವನದಲ್ಲಿ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸಮ್ಮುಖದಲ್ಲಿ ಹಲವು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Share this article