ಸಿಎಂ ವಿರುದ್ಧ ರಾಜ್ಯಪಾಲರ ನೋಟಿಸ್‌ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

KannadaprabhaNewsNetwork | Published : Aug 4, 2024 1:19 AM

ಸಾರಾಂಶ

ಕುಶಾಲನಗರ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಕುಶಾಲನಗರದಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಯಿತು. ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ ಮೂಡ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಪ್ರಸ್ತಾಪಿಸಿ ರಾಜ್ಯಪಾಲರು ನೋಟಿಸ್ ನೀಡಿರುವುದು ಕೇಂದ್ರ ಸರ್ಕಾರದ ರಾಜಕೀಯ ಪಿತೂರಿಯಾಗಿದೆ ಎಂದು ಆರೋಪಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಶಾಲನಗರದಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಯಿತು.

ಕಾಂಗ್ರೆಸ್ ಕಚೇರಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದವರೆಗೆ ಪ್ರತಿಭಟನಾಕಾರರು ಮೆರವಣಿಗೆ ತೆರಳಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೆಲಕಾಲ‌ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಕೇಂದ್ರದ ಬಿಜೆಪಿ‌ ನಾಯಕರಾದ ನರೇಂದ್ರ ಮೋದಿ, ಅಮಿತ್ ಶಾ, ಸಂವಿಧಾನ ವಿರೋಧಿ ಕಾರ್ಯ ನಡೆಸುತ್ತಿದ್ದಾರೆ. ಕರ್ನಾಟಕದ ರಾಜ್ಯಪಾಲರು ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಧಿಕ್ಕಾರ ಕೂಗಿದರು.

ನಂತರ ತಹಸೀಲ್ದಾರ್ ಕಚೇರಿಗೆ ಮೆರವಣಿಗೆ ‌ಮೂಲಕ ತೆರಳಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಪ್ರತಿಭಟನಾಕಾರರನ್ನು ಉದ್ದೇಶಿಸಿ‌ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಅಧಿಕಾರ ಕೈತಪ್ಪಿ ಹೋದ ಕಡೆಗಳಲ್ಲಿ ಬಿಜೆಪಿ‌ ವಾಮ ಮಾರ್ಗದ ಮೂಲಕ ಅಧಿಕಾರ ಪಡೆಯುವ ಯತ್ನ ನಡೆಸುವುದು ಸಾಮಾನ್ಯ. ಬಿಜೆಪಿ ವಿರುದ್ಧ ಧ್ವನಿ ಎತ್ತಿದರೆ ಅವರ ವಿರುದ್ಧ ಪಿತೂರಿ ನಡೆಸಿ ಪ್ರಕರಣ ದಾಖಲಿಸುವ ಪ್ರವೃತ್ತಿ ಹೊಂದಿರುವ ಕೇಂದ್ರ ಸರ್ಕಾರ ಕರ್ನಾಟಕದ ಮುಖ್ಯಮಂತ್ರಿ ವಿರುದ್ಧ ಇ.ಡಿ., ಸಿಬಿಐ ದುರ್ಬಳಕೆ ಮಾಡಿಕೊಂಡು‌ ಹತ್ತಿಕ್ಕುವ ಪ್ರಯತ್ನ ನಡಸುತ್ತಿರುವುದು ಖಂಡನೀಯ ಎಂದರು.

ಪ್ರತಿಭಟನೆಯಲ್ಲಿ ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಗುಂಡುರಾವ್, ನಗರ ಉಪಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ,ನಟೇಶ್ ಗೌಡ, ಪ್ರಮುಖರಾದ ಶಿವಶಂಕರ್, ಕಿರಣ್, ಪದ್ಮಾ, ಜಗದೀಶ್, ಶಾಜಿ, ಖಲೀಮುಲ್ಲಾ, ಟಿ.ಪಿ.ಹಮೀದ್, ನವೀನ್ ಗೌಡ, ಬಿ ಡಿ ಅಣ್ಣಯ್ಯ, ರಫೀಕ್, ಶಿವಮ್ಮ, ಕೃಷ್ಣೇಗೌಡ, ಶೇಖರ್, ಆದಂ ‌ಮತ್ತಿತರರು ಇದ್ದರು.

Share this article