ಅಧಿಕಾರಕ್ಕಾಗಿ ಕಾಂಗ್ರೆಸ್‌ ದಲಿತರ ಬಳಕೆ: ಬಿಜೆಪಿ ಆರೋಪ

KannadaprabhaNewsNetwork | Published : Feb 29, 2024 2:04 AM

ಸಾರಾಂಶ

ಶೋಷಿತ ಸಮುದಾಯದ ಪ್ರಗತಿಗೆ ಎಳ್ಳಷ್ಟು ಕೊಡುಗೆ ನೀಡಿಲ್ಲ ಎಂದು ಬಿಜೆಪಿ ಮುಖಮಡರು ಆರೋಪಿಸಿದರು. ಕಲಬುರಗಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾದ ಬಲವರ್ಧನೆಗಾಗಿ ಭೀಮ ಸಮಾವೇಶ ನಡೆಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಅಧಿಕಾರ ಗದ್ದುಗೆ ಹತ್ತಲು ಈ ದೇಶದ ದಲಿತರು, ಶೋಷಿತರನ್ನು ಏಣಿ ರೂಪದಲ್ಲಿ ಕಾಂಗ್ರೆಸ್‌ ಬಳಸಿಕೊಂಡಿದೆಯೇ ವಿನಾ ಈ ಸಮುದಾಯಗಳವರ ಪ್ರಗತಿಗೆ ಎಳ್ಳಷ್ಟು ಕೊಡುಗೆ ನೀಡಿಲ್ಲವೆಂದು ಕಲಬುರಗಿಯಲ್ಲಿಂದು ನಡೆದ ಬಿಜೆಪಿ ಎಸ್ಸಿ ಮೋರ್ಚಾದ ಬಲವರ್ಧನೆಗಾಗಿ ಭೀಮ ಸಮಾವೇಶದಲ್ಲಿ ಪಾಲ್ಗೊಂಡು ಪಕ್ಷದ ಮುಖಂಡರು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಇಲ್ಲಿನ ಪಂಡಿತ ರಂಗ ಮಂದಿರದಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವರು, ಸಂಸದರು, ಹಾಲಿ ಶಾಸಕರು, ಶೋಷಿತ ಸಮುದಾಯದ ಮುಖಂಡರು, ಅಂಬೇಡ್ಕರ್‌ ಹೆಸರು ಹೇಳಿಕೊಂಡು ಕಾಂಗ್ರೆಸ್‌ ದಲಿತರಿಗೆ ಮೋಸ ಮಾಡುತ್ತಿದೆ. ಕಾಂಗ್ರೆಸ್ ಶೋಷಿತರನ್ನ ಮತಬ್ಯಾಂಕ್‌ ರೂಪದಲ್ಲಿ ಬಳಸಿಕೊಂಡರೂ ಕೂಡಾ, ಆ ಸಮುದಾಯಗಳ ಏಳಿಗೆಯ ಕೈಂಕರ್ಯ ತೊಟ್ಟಂತಹ ಅಂಬೇಡ್ಕರ್‌ಗೆ ರಾಜಕೀಯವಾಗಿ ಅವಕಾಶ ನೀಡದೆ ವಂಚಿಸಿದೆ ಎಂದು ಹೇಳಿದರು.

ಬಾಬಾಸಾಹೇಬ್‌ ಅಂಬೇಡ್ಕರ್‌ ಅವರಿಗೆ ಗೌರವ ಕೊಟ್ಟವರ ಜೊತೆಗಿರಬೇಕಾ? ಅವಮಾಸಿದವರ ಜೊತೆಗಿರಬೇಕಾ? ನೀವೇ ನಿರ್ಧಾರ ಮಾಡಿರೆಂದು ಸಮಾವೇಶದಲ್ಲಿ ಸೇರಿದ್ದ ಶೋಷಿತರು, ದಲಿತ ಮುಖಂಡರಿಗೆ ಕರೆ ನೀಡಲಾಯ್ತು.

ಸಮಾವೇಶದಲ್ಲಿ ಮಾತನಾಡಿದ ಸಂಸದ ಎನ್‌. ಮುನಿಸ್ವಾಮಿ ಅಧಿಕಾರ ಗದ್ದುಗೆ ಹತ್ತಲು ಶೋಷಿತರ ಮತಗಳನ್ನು ಕಾಂಗ್ರೆಸ್‌ ಬಳಸಿಕೊಳ್ಳುತ್ತದೆ. ಆದರೆ ಈ ಮುದಾಯದ ಬಲವರ್ಧನೆಗೆ ನಿರಾಸಕ್ತಿ ತೋರುತ್ತಿದೆ. ಇದೆ ಅಲ್ಲವೆ ಮೋಸ? ಎಂದು ಪ್ರಶ್ನಿಸಿದರು.

ಬಿಜೆಪಿ ಮುಖಂಡ ಎನ್‌. ರುದ್ರಯ್ಯ ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ ಸಾವಿರಾರು ಕಟಿ ರುಪಾಯಿ ದಲಿತರ ಏಳಿಗೆಯ ಹಣವನ್ನೇ ವೆಚ್ಚ ಮಾಡಲಾಗುತ್ತಿದೆ. ಕಳೆದ ಬಾರಿ 11, 148 ಕೋಟಿ ರು ಎಸ್‌ಸಿಪಿ ಹಣ ವೆಚ್ಚ ಮಾಡಲಾಗಿತ್ತು. ಈ ಬಜೆಟ್‌ನಲ್ಲಿ 15 ಸಾವಿರ ಕೋಟಿ ರು ಮೀಸಲಿಡಲಾಗಿದೆ. ಇದೆಲ್ಲವೂ ದಲಿತರು ಅರಿಯಬೇಕು ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳಿಗೆ ದಲಿತರ ಏಳಿಗೆಯ ಹಣ ವೆಚ್ಚ ಮಾಡುವವರ ಜೊತೆಗೆ ನಾವಿರಬೇಕಾ? ಎಂಬುದನ್ನು ಚಿಂತಿಸಿರೆಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ್‌, ಶಾಸಕ ಬಸವರಾಜ ಮತ್ತಿಮಡು, ಮಾಜಿ ಶಾಸಕ ಸುಭಾಸ ಗುತ್ತೇದಾರ್‌, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್‌, ಮಹಾಪೌರ ವಿಶಾಲ ಧರ್ಗಿ, ಉಪ ಮಹಾಪೌರ ಶಿವಾನಂದ ಪಿಸ್ತಿ, ಸಿಮೆಂಟ್ ಮಂಜು, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮರೆಪ್ಪ ಬಡಿಗೇರ್‌, ಅಂಬಾರಾಯ ಅಷ್ಟಗಿ ಮತ್ತು ಇನ್ನಿತರ ದಲಿತ ಮುಖಂಡರು ಭಾಗವಹಿಸಿದ್ದರು.

ತೆರೆದ ಮನದಿಂದ ಎಲ್ಲವನ್ನು ವಿಶ್ಲೇಷಿಸಿ: ಸಾರಾ ಮಹೇಶ

ತೆರೆದೆ ಮನದಿಂದ ಎಲ್ಲವನ್ನು ನೋಡಿ ರಾಜಕೀಯವಾಗಿ ಯಾರೊಂದಿಗಿರಬೇಕೆಂಬುದನ್ನು ನಿರ್ಣಯಿಸಿರರೆಂದು ದಲಿತರಿಗೆ ಮಾಜಿ ಸಚಿವ ಸಾರಾ ಮಹೇಶ ಕರೆ ನೀಡಿದರು.

ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಕಾಂಗ್ರೆಸ್‌ ಅದು ಹೇಗೆ ಅಂಬೇಡ್ಕರ್‌ಗೆ ಮೋಸ ಮಾಡಿತೆಂದು ಎಳೆಎಳೆಯಾಗಿ ಬಿಚ್ಚಿಟ್ಟರು. ಕಾನೂನು ಮಂತ್ರಿ ಸ್ಥಾನಕ್ಕೆ ಅಂಬೇಡ್ಕರ್‌ ಯಾಕೆ ರಾಜೀನಾಮೆ ಕೊಟ್ಟರೆಂಬುದನ್ನು ನೀವೆಲ್ಲರು ಅರಿಯಬೇಕು. ಶೋಷಿತರಿಗ ಆರ್ಥಿಕವಾಗಿ ಬಲ ಪಡಿಸಲು ಯೋಜನೆ ರೂಪಿಸುವ ಸಲುವಾಗಿ ಈ ರೀತಿ ಆಶೆ ಪಟ್ಟಿದ್ದರೆಂದರು.

ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ, ಅವರ ಪುತ್ರ ಪ್ರಿಯಾಂಕ್‌ ಖರ್ಗೆ ಅವರು ಇತ್ತೀಚೆಗೆ ನೀಡುತ್ತಿರುವ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಅಪಾಯವಾಗಿದ್ದರೆ ಅದು ಕಾಂಗ್ರೆಸ್‌ನಿಂದ ಆಗಿದೆ ಎಂದು ಹೇಳಿದರು.

Share this article