ವಿವಾದಗಳ ಮೀರಿ ಕಾಂಗ್ರೆಸ್‌ ವಿಜಯ ಕೇಕೆ

KannadaprabhaNewsNetwork | Published : Nov 24, 2024 1:46 AM

ಸಾರಾಂಶ

ಮುಡಾ, ವಾಲ್ಮೀಕಿ ಹಗರಣಗಳ ಸುಳಿ, ನಾಯಕತ್ವ ಬದಲಾವಣೆ ಎಂಬ ಒಳಸುಳಿ, ಚುನಾವಣೆ ಸಾಮೀಪ್ಯದ ವೇಳೆ ಭುಗಿಲೆದ್ದ ವಕ್ಫ್‌ ವಿವಾದ ಹಾಗೂ ಬಿಪಿಎಲ್‌ ಕಾರ್ಡು ರದ್ದತಿಯಂತಹ ಸೂಕ್ಷ್ಮ ವಿಚಾರಗಳು ಚುನಾವಣಾ ವಿಷಯವಾದರೂ ಪ್ರಬಲ ಪ್ರತಿತಂತ್ರದ ಮೂಲಕ ಉಪ ಚುನಾವಣೆ ನಡೆದ ಮೂರು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ ಕಾಂಗ್ರೆಸ್‌ ಪಕ್ಷ ಜೆಡಿಎಸ್‌-ಬಿಜೆಪಿ ಮೈತ್ರಿಕೂಟವನ್ನು ಮಕಾಡೆ ಮಲಗಿಸಿದೆ.

ಎಸ್‌.ಗಿರೀಶ್‌ ಬಾಬು

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಡಾ, ವಾಲ್ಮೀಕಿ ಹಗರಣಗಳ ಸುಳಿ, ನಾಯಕತ್ವ ಬದಲಾವಣೆ ಎಂಬ ಒಳಸುಳಿ, ಚುನಾವಣೆ ಸಾಮೀಪ್ಯದ ವೇಳೆ ಭುಗಿಲೆದ್ದ ವಕ್ಫ್‌ ವಿವಾದ ಹಾಗೂ ಬಿಪಿಎಲ್‌ ಕಾರ್ಡು ರದ್ದತಿಯಂತಹ ಸೂಕ್ಷ್ಮ ವಿಚಾರಗಳು ಚುನಾವಣಾ ವಿಷಯವಾದರೂ ಪ್ರಬಲ ಪ್ರತಿತಂತ್ರದ ಮೂಲಕ ಉಪ ಚುನಾವಣೆ ನಡೆದ ಮೂರು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ ಕಾಂಗ್ರೆಸ್‌ ಪಕ್ಷ ಜೆಡಿಎಸ್‌-ಬಿಜೆಪಿ ಮೈತ್ರಿಕೂಟವನ್ನು ಮಕಾಡೆ ಮಲಗಿಸಿದೆ.

ಉಪ ಚುನಾ‍ವಣೆ ಫಲಿತಾಂಶ ಆಡಳಿತದಲ್ಲಿರುವ ಪಕ್ಷದ ಪರ ಎಂಬುದು ಸಂಪ್ರದಾಯ. ಆದರೆ, ಈ ಬಾರಿ ಪರಿಸ್ಥಿತಿ ಆ ರೀತಿಯಿರಲಿಲ್ಲ. ಖುದ್ದು ಮುಖ್ಯಮಂತ್ರಿಯವರನ್ನೇ ಇಕ್ಕಟ್ಟಿಗೆ ಸಿಲುಕಿಸಿರುವ ಮುಡಾ ಪ್ರಕರಣ, ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ಬಿಂಬಿಸಲು ಅನುಕೂಲ ಮಾಡಿಕೊಟ್ಟ ವಾಲ್ಮೀಕಿ ಹಗರಣ, ಹಿಂದು-ಮುಸ್ಲಿಂ ವಿಚಾರ ಮುಂದಿಟ್ಟು ಹಿಂದೂ ಮತ ಕ್ರೋಢೀಕರಣ ಮಾಡಲು ಬಿಜೆಪಿಗೆ ಅವಕಾಶ ನೀಡುವ ವಕ್ಫ್‌ ಪ್ರಕರಣ ಮತ್ತು ಗ್ಯಾರಂಟಿ ಯೋಜನೆಗಳ ಮಹತ್ವ ಕಡಿಮೆ ಮಾಡುವ ಸಾಧ್ಯತೆಯಿದ್ದ ಬಿಪಿಎಲ್‌ ಕಾರ್ಡು ರದ್ದತಿಯಂತಹ ವಿಚಾರಗಳು ಚುನಾವಣೆಯಲ್ಲಿ ಪ್ರಾಮುಖ್ಯತೆ ಪಡೆದಿದ್ದವು.

ಇದು ಚುನಾವಣೆ ಫಲಿತಾಂಶ ಅಧಿಕಾರದಲ್ಲಿರುವ ಪಕ್ಷದ ಪರ ಎಂಬ ಸಂಪ್ರದಾಯ ಅಲುಗಾಡುವುದೇ ಎಂಬ ಸಂಶಯ ಹುಟ್ಟುಹಾಕಿತ್ತು. ಹೀಗಾಗಿಯೇ ಖುದ್ದು ಕಾಂಗ್ರೆಸ್ ನಾಯಕತ್ವಕ್ಕೇ ಮೂರಕ್ಕೆ ಮೂರೂ ಕ್ಷೇತ್ರ ಗೆಲ್ಲುವ ವಿಶ್ವಾಸವಿರಲಿಲ್ಲ. ಕನಿಷ್ಠ ಎರಡರಲ್ಲಾದರೂ ಗೆದ್ದರೆ ನಾಯಕತ್ವಕ್ಕೆ ಎದುರಾಗಿರುವ ಸವಾಲು ಸದ್ಯಕ್ಕೆ ನೀಗಬಹುದು ಎಂಬ ನಿರೀಕ್ಷೆ ಮಾತ್ರವಿತ್ತು. ಆದರೆ, ಮೂರಕ್ಕೆ ಮೂರೂ ಕ್ಷೇತ್ರಗಳಲ್ಲಿ ಉತ್ತಮ ಅಂತರದ ಗೆಲುವು ನೀಡಿರುವ ಫಲಿತಾಂಶ ಬೇರೆಯೇ ಸಂದೇಶ ನೀಡಿದೆ. ಮುಖ್ಯವಾಗಿ ನ್ಯಾಯಾಲಯದಲ್ಲಿ ಹಿನ್ನಡೆ ತಂದಿರುವ ಮುಡಾ ಪ್ರಕರಣವು ಜನತಾ ನ್ಯಾಯಾಲಯದಲ್ಲಿ ಅನುಕಂಪದ ಲಾಭ ತಂದುಕೊಟ್ಟಂತಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದಂತಹ ಗಂಭೀರ ಪ್ರಕರಣವಿದ್ದರೂ ಭ್ರಷ್ಟಾಚಾರದ ಆರೋಪಗಳಿಗೆ ಜನ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇನ್ನು ವಕ್ಫ್‌ನಂತಹ ಭಾವನೆ ಕೆರಳಿಸುವ ವಿಚಾರವೂ ಗಂಭೀರ ಪರಿಣಾಮ ಬೀರದಂತೆ ಮಾಡುವಲ್ಲಿ ಕಾಂಗ್ರೆಸ್‌ ಪಕ್ಷ ನಡೆಸಿದ ಸಂಘಟಿತ ಚುನಾವಣಾ ಕಾರ್ಯತಂತ್ರ ಯಶಸ್ವಿಯಾಗಿದೆ. ಇದೆಲ್ಲಕ್ಕೂ ಮಿಗಿಲಾಗಿ ಗ್ಯಾರಂಟಿ ಯೋಜನೆಗಳು ಅದರಲ್ಲೂ ವಿಶೇಷವಾಗಿ ಮಹಿಳಾ ಮತದಾರ ವರ್ಗ ಕಾಂಗ್ರೆಸ್‌ ಕೈಹಿಡಿದಿರುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್‌ ದಿಗ್ವಿಜಯಕ್ಕೆ ಬಹುಮಖ್ಯ ಕಾರಣ ಜಾತಿ ಸಮೀಕರಣ. ಮುಡಾ ಪ್ರಕರಣವು ಕಾಂಗ್ರೆಸ್‌ಗೆ ಹಿನ್ನಡೆಯ ಬದಲಾಗಿ ಅನುಕಂಪದ ಲಾಭ ತಂದುಕೊಟ್ಟಿರುವ ಸಾಧ್ಯತೆಯೇ ಹೆಚ್ಚಿದೆ. ವಿಶೇಷವಾಗಿ ಕುರುಬ ಸೇರಿದಂತೆ ಹಿಂದುಳಿದ ವರ್ಗದ ಮತಗಳು ಕಾಂಗ್ರೆಸ್‌ ಪರ ಕ್ರೋಢೀಕರಣಗೊಂಡಿವೆ ಎಂಬುದು ಶಿಗ್ಗಾಂವಿ, ಸಂಡೂರು ಕ್ಷೇತ್ರದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.

ಇದಕ್ಕಿಂತ ಮುಖ್ಯವಾಗಿ ಕಾಂಗ್ರೆಸ್‌ ಈ ಚುನಾವಣೆಯಲ್ಲಿ ತೋರಿದ ಅತಿ ದೊಡ್ಡ ತಂತ್ರಗಾರಿಕೆಯೆಂದರೆ ಮುಸ್ಲಿಂ ಮತಗಳ ಕ್ರೋಢೀಕರಣಕ್ಕೆ ಆ ಸಮುದಾಯದ ಪರ ಮೃದು ಧೋರಣೆ ತೋರಿದರೂ ಅದು ಹಿಂದುಗಳನ್ನು ರೊಚ್ಚಿಗೆಬ್ಬಿಸದಂತೆ ಸೂಕ್ಷ್ಮತೆಯಿಂದ ನಡೆದುಕೊಂಡಿದ್ದು. ವಕ್ಫ್‌ನಂತಹ ವಿಚಾರ ಚುನಾವಣೆಯನ್ನು ಹಿಂದು-ಮುಸ್ಲಿಂ ಎಂದು ಮಾಡಿಬಿಡಬಹುದಿತ್ತು. ಆದರೆ, ಆ ರೀತಿ ಆಗಲಿಲ್ಲ.

ಏಕೆಂದರೆ, ಒಂದು ಕಡೆ ಸಚಿವ ಜಮೀರ್‌ ಅಂತಹವರು ಮುಸ್ಲಿಂ ಪರ ತೀವ್ರ ವಾದ ಮಾಡುತ್ತಿದ್ದರೂ, ಈ ವಿಚಾರದಿಂದ ರೈತರ ಒಂದಿಂಚು ಜಮೀನು ಕಳೆದುಕೊಳ್ಳಲು ಬಿಡುವುದಿಲ್ಲ ಎಂದು ಖುದ್ದು ಮುಖ್ಯಮಂತ್ರಿ ಮತ್ತೊಂದು ಕಡೆ ಭರವಸೆ ನೀಡುವ ಮೂಲಕ ಪರಿಸ್ಥಿತಿ ಕೈಮೀರದಂತೆ ನಡೆದುಕೊಳ್ಳುವ ಜಾಣ್ಮೆ ಕಾಣುತ್ತಿತ್ತು.

ಇದರ ಜತೆಗೆ ಚುನಾವಣೆ ಸಾಮೀಪ್ಯದಲ್ಲೇ ಸರ್ಕಾರಿ ಗುತ್ತಿಗೆಯಲ್ಲಿ ಶೇ.4ರಷ್ಟು ಮೀಸಲು ಮುಸ್ಲಿಮರಿಗೆ ನೀಡಬೇಕು ಎಂದು ಮುಸ್ಲಿಮ್ ನಾಯಕರು ಬೇಡಿಕೆಯಿಡುವುದು, ಇದರ ಬಗ್ಗೆ ಮೈತ್ರಿಕೂಟ ಆರ್ಭಟ ಮಾಡಲು ಆರಂಭಿಸುತ್ತಿದ್ದಂತೆಯೇ ಇದು ಕೇವಲ ಮುಸ್ಲಿಂ ನಾಯಕರ ಬೇಡಿಕೆಯಷ್ಟೆ, ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸುತ್ತಿದ್ದರು.

ಇದರಿಂದ ಸರ್ಕಾರದಲ್ಲಿ ಮುಸ್ಲಿಂ ಪರ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂಬ ನಿರೀಕ್ಷೆ ಮೂಡಿ ಮುಸ್ಲಿಂ ಮತಗಳು ಕ್ರೋಢೀಕರಣಗೊಳ್ಳುತ್ತಿತ್ತು. ಇದೇ ವೇಳೆ ಸರ್ಕಾರ ಇನ್ನೂ ತೀರ್ಮಾನ ಕೈಗೊಳ್ಳದ ಕಾರಣ ಹಿಂದು -ಮುಸ್ಲಿಂ ಆಗಿ ಕಣವನ್ನು ಪರಿವರ್ತಿಸುವ ಅವಕಾಶ ಬಿಜೆಪಿಗೆ ದಕ್ಕಲಿಲ್ಲ.

ಕ್ರೋಢೀಕರಣಗೊಂಡ ಹಿಂದುಳಿದ ಮತಗಳು, ವಿಭಜನೆಯಾದ ಮೇಲ್ವರ್ಗದ ಮತಗಳು:

ಈ ಉಪ ಚುನಾವಣೆಯ ಮತ್ತೊಂದು ಮಹತ್ವದ ಬೆಳವಣಿಗೆಯೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್‌ ಮಾಡಲಾಗುತ್ತಿದೆ ಎಂಬ ಭಾವನೆ ಹಿಂದುಳಿದ ವರ್ಗಗಳಲ್ಲಿ ಮೂಡಿದ ಪರಿಣಾಮ ಆ ವರ್ಗದ ಮತಗಳು ಕ್ರೋಢೀಕರಣಗೊಂಡವು.

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಡಿ.ಕೆ.ಸುರೇಶ್‌, ಶಿವಾನಂದ ಕೌಜಲಗಿ, ಲಕ್ಷ್ಮೀ ಹೆಬ್ಬಾಳಕರ್‌, ವಿನಯ ಕುಲಕರ್ಣಿ, ಈಶ್ವರ್‌ ಖಂಡ್ರೆಯಂತಹ ನಾಯಕರು ಮೇಲ್ವರ್ಗದ ಮತಗಳು ವಿಭಜನೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.

ವಿಶೇಷವಾಗಿ ಚನ್ನಪಟ್ಟಣ ಕ್ಷೇತ್ರದಲ್ಲಿ ಡಿಕೆ ಸಹೋದರರು ತೋರಿದ ದೂರದೃಷ್ಟಿ, ಒಕ್ಕಲಿಗ ಮತಗಳ ಮೇಲೆ ಬೀರಿದ ಪ್ರಭಾವ ಆ ಕ್ಷೇತ್ರದಲ್ಲಿ ಪ್ರಬಲ ಒಕ್ಕಲಿಗ ಮತಗಳು ಜೆಡಿಎಸ್‌ಗೆ ಮಾತ್ರ ಸಂದಾಯವಾಗದೆ ಕಾಂಗ್ರೆಸ್‌ಗೂ ಒಲಿಯುವಂತಾಯಿತು. ಇದರ ಪರಿಣಾಮವಾಗಿಯೇ ಕಾಂಗ್ರೆಸ್‌ನ ಸಿ.ಪಿ.ಯೋಗೇಶ್ವರ್‌ಗೆ 25 ಸಾವಿರ ಮತಗಳ ಭಾರಿ ಅಂತರದ ಗೆಲುವು ಸಾಧ್ಯವಾಯಿತು.

ಇದೇ ರೀತಿ ಶಿಗ್ಗಾಂವಿಯಲ್ಲಿ ಲಿಂಗಾಯತ ಅದರಲ್ಲೂ ವಿಶೇಷವಾಗಿ ಪಂಚಮಸಾಲಿ ಮತಗಳು ಒಗ್ಗೂಡುವಂತೆ ಮಾಡುವಲ್ಲಿ ಶಿವಾನಂದ ಕೌಜಲಗಿ, ಲಕ್ಷ್ಮೀ ಹೆಬ್ಬಾಳ್ಕರ್‌, ವಿನಯ ಕುಲಕರ್ಣಿ ಅವರ ಪ್ರಯತ್ನ ಫಲಿತಾಂಶದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.

ಈ ರೀತಿಯ ಜಾತಿ ಸಮೀಕರಣದ ಜತೆಗೆ ಸಚಿವರು ಹಾಗೂ ಶಾಸಕರಿಗೆ ಕ್ಷೇತ್ರಗಳ ಹೊಣೆಗಾರಿಕೆ ನೀಡಿ ಅಲ್ಲೇ ನೆಲೆ ನಿಂತು ಕೆಲಸ ಮಾಡುವಂತೆ ಮಾಡಿದ ರೀತಿ ಹಾಗೂ ಪ್ರಭಾವಿ ನಾಯಕರು ಬಣ ರಾಜಕಾರಣವನ್ನು ಬದಿಗಿಟ್ಟು ಕ್ಷೇತ್ರ ಹಂಚಿಕೊಂಡು ಪ್ರತ್ಯೇಕವಾಗಿ ಕೆಲಸ ಮಾಡಿದ್ದು ಕೂಡ ವಿಶೇಷ.

ಒಂದು ಕಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಅವರ ತಂಡ ಚನ್ನಪಟ್ಟಣ ಕ್ಷೇತ್ರದ ಗೆಲುವಿಗೆ ಪಣ ತೊಟ್ಟು ನಿಂತರೆ ಮತ್ತೊಂದು ಕಡೆ ಮತ್ತೊಂದು ಕಡೆ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗ ಸಚಿವರ ಪಡೆ ಸಂಡೂರು ಹಾಗೂ ಶಿಗ್ಗಾಂವಿಯಲ್ಲಿ ಪ್ರತಿಷ್ಠೆ ಪಣಕ್ಕಿಟ್ಟು ಕೆಲಸ ಮಾಡಿತು. ಈ ಬಣಗಳು ಪರಸ್ಪರರನ್ನು ಸೋಲಿಸುವ ಒಳ ಸುಳಿ ನಡೆಸದೇ ಇದ್ದದ್ದು ಅತ್ಯಂತ ಗಮನೀಯ ಅಂಶ.

Share this article