ಕನ್ನಡಪ್ರಭ ವಾರ್ತೆ ಅರಸೀಕೆರೆ
ಹೊರಗೆ ಏನೇ ನಡೆಯಲಿ, ಒಳಗೆ ಹೀಗೆಯೇ ಆಗಲಿದೆ ಎಂದು ಎಲ್ಲರೂ ಲೆಕ್ಕಾಚಾರ ಮಾಡಿದಂತೆಯೇ ಜೆಡಿಎಸ್‌ನಿಂದ ಗೆದ್ದಿರುವ ಹಿರಿಯ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಎಂ, ಸಮೀವುಲ್ಲಾ ಅವರೇ ಮತ್ತೊಮ್ಮೆ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಮನೋಹರ್ ಮೇಸ್ತ್ರಿ ಆಯ್ಕೆಯಾದರು. ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಮೊದಲು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಯಿತು. ಹಾಸನ ಉಪ ವಿಭಾಗ ಅಧಿಕಾರಿಗಳು ಆದ ಚುನಾವಣಾ ಅಧಿಕಾರಿ ಮಾರುತಿ, ಸಹಾಯಕ ಚುನಾವಣಾಧಿಯಾಗಿ ನಗರಸಭೆ ಆಯುಕ್ತ ಕೃಷ್ಣಮೂರ್ತಿ ಕರ್ತವ್ಯ ನಿರ್ವಹಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಸಮೀವುಲ್ಲಾ ಮತ್ತು ಜೆಡಿಎಸ್‌ನ ಸುಜಾತ ರಮೇಶ್ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಮನೋಹರ್ ಮೇಸ್ತ್ರಿ ಮತ್ತು ಬಿಜೆಪಿಯ ಎಸ್.ಅಭಿರಾಮಿ ಉಮೇದುವಾರಿಕೆ ಸಲ್ಲಿಸಿದರು. ಒಟ್ಟು ೩೧ ಸದಸ್ಯ ಬಲದ ನಗರಸಭೆಯಲ್ಲಿ ೬ ಮಂದಿ ಜೆಡಿಎಸ್ ಮತ್ತು ಒಬ್ಬರು ಪಕ್ಷೇತರ ಸದಸ್ಯರು ಅನರ್ಹಗೊಂಡಿದ್ದರಿಂದ ಉಳಿಕೆ ೨೪ ಸದಸ್ಯರು ಮತದಾನದ ಅವಕಾಶ ಪಡೆದಿದ್ದರು. ಈ ನಡುವೆ ಕಾಂಗ್ರೆಸ್ ಸದಸ್ಯ ವೆಂಕಟಮುನಿ ತಟಸ್ಥವಾಗಿ ಉಳಿದರು. ಯಾರ ಪರ ಅಥವಾ ವಿರೋಧ ಮತ ಹಾಕಲಿಲ್ಲ. ಮತ್ತೊಂದೆಡೆ ಬಿಜೆಪಿಯ ಗೀತಾ ಹೇಮಂತ್ ಅವರು ಗೈರು ಹಾಜರಾಗಿದ್ದರು. ಈ ನಡುವೆ ದಿಢೀರ್ ಬೆಳವಣಿಗೆಯಲ್ಲಿ ಜೆಡಿಎಸ್ ಸದಸ್ಯ ಈಶ್ವರಪ್ಪ ಹಾಸನಕ್ಕೆ ತೆರಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅಲ್ಲಿಗೆ ೨೧ ಸದಸ್ಯರು ಮಾತ್ರ ಮತದಾನ ಮಾಡುವ ಅವಕಾಶ ಪಡೆದಿದ್ದರು.ನಾಮಪತ್ರ ವಾಪಸ್ ಪ್ರಕ್ರಿಯೆ ಆರಂಭವಾದ ನಂತರ ಚುನಾವಣೆ ಆರಂಭವಾಯಿತು. ಹಾಜರಿದ್ದ ಸದಸ್ಯರು ಕೈ ಎತ್ತುವ ಮೂಲಕ ತಮ್ಮ ಮತ ಯಾರಿಗೆ ಎಂಬುದನ್ನು ಖಾತ್ರಿ ಪಡಿಸಬೇಕು ಎಂದು ಚುನಾವಣಾಧಿಕಾರಿ ಹೇಳಿದರು. ಮತದಾನ ಪ್ರಕ್ರಿಯೆ ನಡೆದು ಸಮೀವುಲ್ಲಾ ಪರ ೧೪ ಮತ ಚಲಾವಣೆಯಾದರೆ, ಸುಜಾತ ರಮೇಶ್ ಪರ ೭ ಮತ ಬಿದ್ದವು. ಹಾಗೆಯೇ ಉಪಾಧ್ಯಕ್ಷರ ಚುನಾವಣೆಯಲ್ಲೂ ಇಷ್ಟೇ ಮತಗಳು ಹಂಚಿಕೆಯಾದವು. ಬಿಜೆಪಿ-ಜೆಡಿಎಸ್ ಕಡೆಯಿಂದ ವಿಪ್ ಜಾರಿ ಮಾಡಿದ್ದರೂ ಯಾವುದೇ ಲಾಭ ತಂದುಕೊಂಡಲಿಲ್ಲ. ಅಂತಿಮವಾಗಿ ಚುನಾವಣಾಧಿಕಾರಿ ಮಾರುತಿ ಅವರು ಸಮೀವುಲ್ಲಾ ಅಧ್ಯಕ್ಷರಾಗಿ, ಮನೋಹರ್ ಮೇಸ್ತ್ರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು. ಚುನಾವಣೆ ಪ್ರಕ್ರಿಯೆ ಮುಗಿದ ನಂತರ ವಿಜೇತರು ಮತ್ತವರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ತೆರೆದ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಸಂಭ್ರಮಾಚರಣೆ ಮಾಡಿದರು.
ಒಂದು ಕಾಂಗ್ರೆಸ್ ಸದಸ್ಯರಿದ್ದರೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನು ಶಿವಲಿಂಗೇಗೌಡರ ಆಪ್ತರೇ ಗೆದ್ದರು. ದೋಸ್ತಿಗಳಿಗೆ ಮಣ್ಣು ಮುಕ್ಕಿಸಿ ತಮ್ಮ ಬೆಂಬಲಿಗರನ್ನು ಶಿವಲಿಂಗೇಗೌಡ ಗೆಲ್ಲಿಸಿಕೊಂಡರು. ಜೆಡಿಎಸ್‌ನಿಂದ ಆಯ್ಕೆ ಆದರೂ ಶಿವಲಿಂಗೇಗೌಡ ಜೊತೆ ಗುರುತಿಸಿಕೊಂಡಿದ್ದ ೧೩ ಸದಸ್ಯರು, ಕೊನೆವರೆಗೂ ಜೊತೆಯಾಗಿದ್ದು ಗೆದ್ದರು. ಓರ್ವ ಪಕ್ಷೇತರ ಸದಸ್ಯೆ ಇವರ ಕೈ ಹಿಡಿದರು. ಜೆಡಿಎಸ್‌ನಿಂದ ವಿಪ್ ಜಾರಿಯಾಗಿದ್ದರೂ, ಜೆಡಿಎಸ್ ಸದಸ್ಯರನ್ನೇ ಕಣಕ್ಕಿಳಿಸಿ ಶಿವಲಿಂಗೇಗೌಡ ಗೆದ್ದರು.