ಆತ್ಮಸಾಕ್ಷಿಯೇ ಸರ್ವ ಶ್ರೇಷ್ಠ ನ್ಯಾಯಾಲಯ

KannadaprabhaNewsNetwork |  
Published : Aug 04, 2024, 01:20 AM IST
ಪೊಟೋ 3ಬಿಕೆಟಿ7,ಬಾಗಲಕೋಠೆ ನಗರದ ನವನಗರದ ವಕೀಲರ ಭವನದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು, ನ್ಯಾಯಾವಾದಿಗಳ ಸಂಘ ಬಾಗಲಕೋಟೆ ಆಶ್ರಯದಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಕಾನೂನು ಕಾರ್ಯಗಾರ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಚ್.ಪಿ.ಸಂದೇಶ ಉದ್ಘಾಟಿಸಿದರು. ) | Kannada Prabha

ಸಾರಾಂಶ

ಸಾರ್ವಜನಿಕರು ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ನ್ಯಾಯಕ್ಕಾಗಿ ನ್ಯಾಯಾಲಯಗಳಿಗೆ ಮೊರೆ ಹೋಗುತ್ತಾರೆ. ಅವರಿಗೆ ನ್ಯಾಯ ಒದಗಿಸಿ ಧ್ವನಿಯಾಗಬೇಕು. ತೀರ್ಪು ಯಾವುದೇ ಬಂದರೂ ಅವರಿಗೆ ಸತ್ಯ ತಿಳಿಸಬೇಕು. ನ್ಯಾಯಾಂಗ ವ್ಯವಸ್ಥೆಯ ಘನತೆ ಹೆಚ್ಚಿಸಬೇಕು. ಆತ್ಮ ಸಾಕ್ಷಿಯೇ ಸರ್ವ ಶ್ರೇಷ್ಠ ನ್ಯಾಯಾಲಯ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾ.ಎಚ್.ಪಿ.ಸಂದೇಶ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಾರ್ವಜನಿಕರು ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ನ್ಯಾಯಕ್ಕಾಗಿ ನ್ಯಾಯಾಲಯಗಳಿಗೆ ಮೊರೆ ಹೋಗುತ್ತಾರೆ. ಅವರಿಗೆ ನ್ಯಾಯ ಒದಗಿಸಿ ಧ್ವನಿಯಾಗಬೇಕು. ತೀರ್ಪು ಯಾವುದೇ ಬಂದರೂ ಅವರಿಗೆ ಸತ್ಯ ತಿಳಿಸಬೇಕು. ನ್ಯಾಯಾಂಗ ವ್ಯವಸ್ಥೆಯ ಘನತೆ ಹೆಚ್ಚಿಸಬೇಕು. ಆತ್ಮ ಸಾಕ್ಷಿಯೇ ಸರ್ವ ಶ್ರೇಷ್ಠ ನ್ಯಾಯಾಲಯ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾ.ಎಚ್.ಪಿ.ಸಂದೇಶ ಹೇಳಿದರು.

ನವನಗರದ ವಕೀಲರ ಭವನದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು, ನ್ಯಾಯವಾದಿಗಳ ಸಂಘ ಬಾಗಲಕೋಟೆ ಆಶ್ರಯದಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಕಾನೂನು ಕಾರ್ಯಾಗಾರಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು. ನ್ಯಾಯ ಒದಗಿಸುವ ಪವಿತ್ರವಾದ ವೃತ್ತಿ ಇದು. ನಮ್ಮನ್ನು ನಂಬಿ ಬಂದವರು ಮೋಸ ಹೋಗಬಾರದು. ನ್ಯಾಯಾಂಗದ ಗೌರವ ಹೆಚ್ಚಿಸುವಂತಹ ನಡೆ-ನುಡಿ ಇರಬೇಕು. ಪರ, ವಿರೋಧ ತೀರ್ಪು ಬಂದಾಗ ಕಕ್ಷಿದಾರರಿಗೆ ನಿಜವಾದ ಸತ್ಯ ತಿಳಿಸಬೇಕು. ಸದ್ಯ ನಡೆಯುತ್ತಿರುವ ಬೆಳವಣಿಗೆ ಆಘಾತಕಾರಿಯಾಗಿವೆ. ಹೀಗೆ ಮುಂದುವರೆದಲ್ಲಿ ಭವಿಷ್ಯದಲ್ಲಿ ನ್ಯಾಯಾಂಗದ ಮೇಲೆ ಜನ ಭರವಸೆ ಕಳೆದುಕೊಳ್ಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಜ್ಞಾನಕ್ಕೆ ವಿಶೇಷ ಒತ್ತು ನೀಡಬೇಕು:

ಇಂದು ವಕೀಲರಾದವರು ಜ್ಞಾನಕ್ಕೆ ವಿಶೇಷ ಒತ್ತು ನೀಡಬೇಕು. ಉತ್ಕೃಷ್ಟತೆ ಹೆಚ್ಚಿಸುವಂತಿರಬೇಕು. ಕೋರ್ಟ್‌ಗೆ ಬರುವ ಮುನ್ನ ಪೂರ್ವ ತಯಾರಿ ಇರಬೇಕು. ಸಂಕ್ಷಿಪ್ತವಾಗಿ ಪ್ರಕರಣ ವಿವರಿಸಬೇಕು. ನ್ಯಾಯಾಧೀಶರ ಎದುರು ಜ್ಞಾನ ಧಾರೆ ಹರವಬೇಕು. ಕೋರ್ಟ್‌ಗೆ ಬರುವುದು ಶೋಕಿಗೆ ಅಲ್ಲ. ಪವಿತ್ರ ನ್ಯಾಯಕಕ್ಕಾಗಿ ಎನ್ನುವುದು ಮರೆಯಬಾರದು. ಆತ್ಮಸಾಕ್ಷಿ ಸರ್ವಶ್ರೇಷ್ಠ ನ್ಯಾಯಾಲಯ ಎಂದು ಪುನರುಚ್ಛಿಸಿದರು.

ಕಡಿಮೆ ಆಗುತ್ತಿರುವ ವೃತ್ತಿಗೌರವ:

ಇಂದು ವೃತ್ತಿ ಗೌರವ ಕಡಿಮೆಯಾಗುತ್ತಿದೆ. ಪ್ರಾಮಾಣಿಕತೆ ಕಾಣ ಸಿಗುತ್ತಿಲ್ಲ. ಸ್ವಾಭಿಮಾನದ ಬದುಕು ಕಳೆದು ಹೋಗುತ್ತಿದೆ. ವಕೀಲರ ಕೈ ಬೇಡುವ ಕೈ ಆಗಬಾರದು. ಶ್ರಮಜೀವಿಗಳಾಗಬೇಕು. ಬುದ್ಧಿ ಸದ್ಬಳಕೆಯಾಗಬೇಕು. ಕಕ್ಷಿದಾರರಿಗೆ ಸುಳ್ಳು ಆಶ್ವಾಸನೆ ನೀಡಬಾರದು. ಕಾಲ ಕಾಲಕ್ಕೆ ಬರುವ ತೀರ್ಪುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಶಿಸ್ತು, ಸಂಯಮ ರೂಪಿಸಿಕೊಂಡಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ ಎನ್ನುವುದಕ್ಕೆ ನಾನೊಬ್ಬ ರೈತನ ಮಗ ಈ ಸ್ಥಾನಕ್ಕೆ ಏರಿದ್ದೇನೆ ಎಂದರು ಹೇಳಿದರು.

ಜನರೇ ಭ್ರಷ್ಟರಾದರೆ?:

ಬುದ್ಧ, ಬಸವ, ಅಂಬೇಡ್ಕರ್‌, ಕುವೆಂಪು ಒಂದೇ ಜಾತಿಗೆ ಸೀಮಿತಗೊಳಿಸಬಾರದು. ಜಾತಿಗಾಗಿ ಶ್ರಮಿಸಿಲ್ಲ. ಸಮಾನತೆ, ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದರು. ಸಮಾಜಕ್ಕಾಗಿ ಆಸ್ತಿಯಾದರು ಹೊರತು ತಮ್ಮ ಕುಟುಂಬಕ್ಕೆ ಆಸ್ತಿ ಮಾಡಲಿಲ್ಲ. ರಿಯಲ್ ಎಸ್ಟೇಟ್ ಉದ್ಯಮಿದಾರರು ನಮ್ಮ ಆಳುತ್ತಿದ್ದಾರೆ. ಜನರು ಕೂಡ ಭಷ್ಟಾಚಾರಿಗಳಾಗಿ ಹೋದರೇ ವ್ಯವಸ್ಥೆಯ ಗತಿ ಏನು ಅಂತ ಖಾರವಾಗಿ ಪ್ರಶ್ನಿಸಿದ ಅವರು, ದುಡ್ಡುಕೊಟ್ಟರೇ ವೋಟು ಹಾಕುತ್ತಾರೆ. ಹಣದಿಂದ ಹೊರಟಿದ್ದೇವೆ. ಇದು ಅವನತಿಯ ಹಾದಿ ಎಂದು ಖೇದ ವ್ಯಕ್ತಪಡಿಸಿದರು.

ಉಚ್ಛ ನ್ಯಾಯಾಲಯದ ನ್ಯಾಯಾದೀಶ ಸಂಜೀವಕುಮಾರ ಹಂಚಾಟೆ ಮಾತನಾಡಿ, ವಕೀಲರು, ನ್ಯಾಯಾಧೀಶರು ಬಡವರು, ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚುವರಿ ನ್ಯಾಯಾಲಯ ಅವಶ್ಯವಿದೆ. ಮುಳಗಡೆ ಸಂಬಂಧಿಸಿದಂತೆ ಸಾವಿರಾರು ಪ್ರಕರಣಗಳು ಬಾಕಿ ಇವೆ. ಅವುಗಳನ್ನು ಇತ್ಯರ್ಥಗೊಳಿಸಬೇಕಿದೆ. ಇಳಕಲ್ಲ ತಾಲೂಕಿನ ಒಂದರಲ್ಲಿ 3 ಸಾವಿರ ಪ್ರಕರಣಗಳಿವೆ. ಹೊಸ ತಾಲೂಕುಗಳಿಗೆ ನ್ಯಾಯಾಲಯ ಸ್ಥಾಪನೆಗೆ ಅಗತ್ಯವಾಗಿ ಬೇಕಿದೆ ಎಂದು ಹೇಳಿದರು.

ಮೂರ್ನಾಲ್ಕು ಕೋರ್ಟ್‌ ಆರಂಭ:

ಕಾನೂನು ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ರಾಜ್ಯದ ಎಲ್ಲ ಕೋರ್ಟ್‌ಗಳಲ್ಲಿ 35 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ. ಏಳು ಹೊಸ ತಾಲೂಕುಗಳಲ್ಲಿ ಹೊಸ ನ್ಯಾಯಾಲಯ ಸ್ಥಾಪನೆಗೆ ಒತ್ತಡವಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ನೋಡಿಕೊಂಡು 3 ರಿಂದ 4 ಕೋರ್ಟ್‌ ಆರಂಭಿಸಲಾಗುವುದು. ಉತ್ತರ ಕರ್ನಾಟಕದ ವಕೀಲರಿಗೆ ಅನುಕೂವಾಗಲು ತರಬೇತಿ ಕೇಂದ್ರ ಆರಂಭಿಸಲಾಗುವುದು. ಕಾನೂನು ಇಲಾಖೆ ಮತ್ತು ಕಾನೂನಿನಲ್ಲಿ ಯಾವುದೇ ಸೂಚನೆ, ಸಲಹೆ ಇದ್ದಲ್ಲಿ ಮುಕ್ತವಾಗಿ ಹಂಚಿಕೊಳ್ಳಿ ಎಂದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಸದಸ್ಯರಾದ ಎಸ್.ಎಸ್.ಮಿಟ್ಟಲಕೋಡ, ವಿ.ಡಿ.ಕಾಮರೆಡ್ಡಿ, ಕೆ.ಬಿ.ನಾಯಕ, ಎಸ್.ಎಚ್.ಆಸೀಪ ಅಲಿ, ಟಿ.ಎಚ್.ಎನ್., ನ್ಯಾಯವಾದಿಗಳ ಸಂಘ ಕಾರ್ಯದರ್ಶಿ ಪಿ.ಎಚ್.ನಾರಾಯಣಕರ, ಉಪಸ್ಥಿತರಿದ್ದರು.

-----

ಕೋಟ್‌

ಬ್ರಿಟಿಷರೇ ಉತ್ತಮ: ಸಂದೇಶ

ಇಂದಿನ ಆಡಳಿತ ವ್ಯವಸ್ಥೆ ನೋಡಿದರೇ ಬ್ರಿಟಿಷರೇ ಉತ್ತಮ ಎನಿಸುತ್ತದೆ. ಗುಲಾಮಗಿರಿ ಪದ್ಧತಿನೇ ವಾಸಿ ಅನಿಸುತ್ತದೆ. ನಿನ್ನೆ ಮೊನ್ನೆ ನಿರ್ಮಿಸಿದ ಬಿಲ್ಡಿಂಡ್‌ಗಳು ಸೋರುತ್ತಿವೆ. ಆದರೇ ಬ್ರಿಟಿಷರು ನಿರ್ಮಿಸಿದ ಕಟ್ಟಡಗಳು ಇಂದಿಗೂ ಹಾಗೇ ಇವೆ. ಸ್ವಾತಂತ್ರ್ಯ ಪೂರ್ವ ದಿನಗಳು ಮರೆಯಲಾಗದು,

-ಎಚ್.ಪಿ.ಸಂದೇಶ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ

---

ಹೆಚ್ಚುವರಿ ನ್ಯಾಯಾಲಯ ಬೇಕು

ಬಾಗಲಕೋಟೆಯಲ್ಲಿ ಮುಳುಗಡೆ ಸಂಬಂಧಿಸಿದಂತೆ 35 ಸಾವಿರಕ್ಕೂ ಹೆಚ್ಚು ಪ್ರಕರಣಗಳಿವೆ. ಹೆಚ್ಚುವರಿ ನ್ಯಾಯಾಲಯ ಸ್ಥಾಪನೆ ಅವಶ್ಯಕತೆ ಇದೆ. ಹೀಗಾಗಿ ಸರ್ಕಾರ ಮುತುವರ್ಜಿ ನ್ಯಾಯಾಲಯ ಸ್ಥಾಪಿಸಬೇಕು. ವಕೀಲರ ಸಂಘದಲ್ಲಿನ ಗ್ರಂಥಾಲಯ ಮೇಲ್ದರ್ಜೆಗೆ ಏರಿಸಬೇಕು. ಕೊಠಡಿಗಳನ್ನು ನಿರ್ಮಿಸಿ ವಕೀಲರಿಗೆ ಅನುಕೂಲ ಮಾಡಿಕೊಡಬೇಕು.

-ರಮೇಶ ಬದ್ನೂರ ವಕೀಲರ ಸಂಘದ ಜಿಲ್ಲಾಧ್ಯಕ್ಷ

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...