ದೇಶದಲ್ಲಿ ಗೋವುಗಳ ಸಂರಕ್ಷಣೆ ಅತ್ಯಗತ್ಯ: ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ

KannadaprabhaNewsNetwork | Published : Mar 18, 2024 1:56 AM

ಸಾರಾಂಶ

ಜಗತ್ತಿನಲ್ಲಿ ಎಲ್ಲ ಬಗೆಯ ಕಾರ್ಖಾನೆಗಳಿವೆ, ಆದರೆ ಹಾಲು ಉತ್ಪಾದಿಸುವ ಕೈಗಾರಿಕೆ ಎಲ್ಲಿಯೂ ಇಲ್ಲ. ಗೋಪಾಲಕೃಷ್ಣನ (ಗೋವುಗಳು) ಫ್ಯಾಕ್ಟರಿಯಲ್ಲಿ ಮಾತ್ರ ಕ್ಷೀರ ತಯಾರಾಗುತ್ತದೆ. ಗುರುಗಳಿಗೆ ಹಾಲಿನ ಅಭಿಷೇಕ ಮಾಡಿದರೆ ಅವರು ನಮಗೆ ಪಂಚಾಮೃತ ನೀಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ನಮ್ಮ ಸಂಸ್ಕೃತಿಯಿಂದ ದೂರ ಉಳಿಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶದಲ್ಲಿ ಗೋವುಗಳ ಸಂರಕ್ಷಣೆಯಾಗಬೇಕು. ಅವುಗಳು ಕಸಾಯಿಖಾನೆಗೆ ಹೋಗುವುದು ತಡೆಯಬೇಕು ಎಂದು ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ಹೇಳಿದರು.

ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವದ ಗುರು ರಾಯರ ವರ್ಧಂತಿ ಅಂಗವಾಗಿ ಮೃತ್ತಿಕಾ ವೃಂದಾವನಕ್ಕೆ ಸಹಸ್ರ ಕಳಶ ಕ್ಷೀರಾಭಿಷೇಕ ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು. ಹಸುಗಳು ಹಾಲು, ಮೊಸರು, ಬೆಣ್ಣೆ, ತುಪ್ಪ ಸೇರಿ ನಮಗೆ ಬೇಕಾದ ಪದಾರ್ಥಗಳ ನೀಡುವ ಕಾಮಧೇನು. ನಾವು ಅವುಗಳಿಗೆ ಕಸ ನೀಡಿದರೆ ಪ್ರತಿಯಾಗಿ ರಸ ಕೊಡುತ್ತವೆ. ನಮಗೆ ಉಪಕಾರ ಮಾಡುವ ಈ ಪ್ರಾಣಿಗಳು ಸ್ವಚ್ಛಂದವಾಗಿ ವಿಹರಿಸುವಂತಾಗಬೇಕು. ಅವುಗಳ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಜಗತ್ತಿನಲ್ಲಿ ಎಲ್ಲ ಬಗೆಯ ಕಾರ್ಖಾನೆಗಳಿವೆ, ಆದರೆ ಹಾಲು ಉತ್ಪಾದಿಸುವ ಕೈಗಾರಿಕೆ ಎಲ್ಲಿಯೂ ಇಲ್ಲ. ಗೋಪಾಲಕೃಷ್ಣನ (ಗೋವುಗಳು) ಫ್ಯಾಕ್ಟರಿಯಲ್ಲಿ ಮಾತ್ರ ಕ್ಷೀರ ತಯಾರಾಗುತ್ತದೆ. ಗುರುಗಳಿಗೆ ಹಾಲಿನ ಅಭಿಷೇಕ ಮಾಡಿದರೆ ಅವರು ನಮಗೆ ಪಂಚಾಮೃತ ನೀಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ನಮ್ಮ ಸಂಸ್ಕೃತಿಯಿಂದ ದೂರ ಉಳಿಯುತ್ತಿದ್ದಾರೆ. ಅವರಿಗೆ ಜಾಗೃತಿ ಮೂಡಿಸಬೇಕು. ಕುಂಕುಮ, ಬಳೆ, ಕಾಲುಂಗುರ, ಮೂಗುತಿ ಧರಿಸಿ ನಮ್ಮ ಸಂಸ್ಕೃತಿ ಪಾಲಿಸಬೇಕು ಎಂದು ತಿಳಿಸಿದರು.

ಅದಮಾರು ಮಠದ ಈಶಪ್ರಿಯತೀರ್ಥ ಶ್ರೀಪಾದಂಗಳವರು ಮಾತನಾಡಿ, ಭಗವಂತ ಎಲ್ಲೆಡೆ ಇದ್ದಾನೆ, ಯೋಗಿಗಳಿಗೆ ಮಾತ್ರ ಆತ ಸಿಗುತ್ತಾನೆ. ಅಂಥವರ ಸಂಗ ಮಾಡುವುದರಿಂದ ನಾವೂ ದೇವರ ಬಗ್ಗೆ ಸ್ವಲ್ಪ ತಿಳಿಯಬಹುದು. ಎಲ್ಲವನ್ನೂ ಭಗವಂತನಿಗೆ ಸಮರ್ಪಿಸಬೇಕು, ಧರ್ಮ ಜಾಗೃತಿಯಾಗಬೇಕು. ಎಲ್ಲರೂ ಸೇರಿ ಭಾರತ ಕಟ್ಟೋಣ ಎಂದು ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸಪ್ತಾಹ ಕಾರ್ಯಾಚರಣಾ ಸಮಿತಿ ಅಧ್ಯಕ್ಷ, ಅರ್ಚಕರಾದ ಪರಿಮಳಾಚಾರ್ಯ, ವ್ಯಾಸರಾಜಾಚಾರ್ಯ, ರಮಾಕಾಂತಾಚಾರ್ಯ, ವಿದ್ವಾನ್ ಕೆ.ಅಪ್ಪಣ್ಣಾಚಾರ್ಯ, ಡಾ.ಜೆ.ಸದಾನಂದ ಶಾಸ್ತ್ರಿ, ಮಹೋತ್ಸವ ಸಮಿತಿಯ ಕಾರ್ಯದರ್ಶಿ ಕಂಪ್ಲಿ ಗುರುರಾಜಾಚಾರ್ ಭಾಗವಹಿಸಿದ್ದರು.ಆರ್ಥಿಕತೆಯಲ್ಲಿ ದೇಶ ನಂಬರ್‌ 1 ಆಗಲಿ

ಭಾರತ ಹಿಂದು ರಾಷ್ಟ್ರವಾಗುವ ಜೊತೆಗೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಬೇಕು. ರಾಮ ಮಂದಿರ ಪೂರ್ಣವಾಗಿ ರಾಮರಾಜ್ಯವಾಗಬೇಕು. ಕಾಶಿ ಕ್ಷೇತ್ರದಲ್ಲಿ ಕಾರಿಡಾರ್ ಅಭಿವೃದ್ಧಿಯಾಗಿದೆ. ಜಗತ್ತಿನ ಆರ್ಥಿಕತೆಯಲ್ಲಿ ಭಾರತ 5ನೇ ಸ್ಥಾನಕ್ಕೇರಿದ್ದು, ಮುಂಬರುವ ದಿನಗಳಲ್ಲಿ ಮೊದಲ ಸ್ಥಾನಕ್ಕೇರಲಿ, ರಾಯರು ಹಾಗೆ ಮಾಡಿಸಲಿ.

ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಉಡುಪಿ ಪಲಿಮಾರು ಮಠ
ಶ್ರೀರಾಘವೇಂದ್ರ ಸಪ್ತಾಹ ಮಹೋತ್ಸವಕ್ಕೆ ಸಂಭ್ರಮದ ತೆರೆ

ಗುರು ರಾಯರ ಪಟ್ಟಾಭಿಷೇಕ ಮತ್ತು ವರ್ಧಂತಿಯ ಸಂಸ್ಮರಣೆಗಾಗಿ ನಗರದಲ್ಲಿ ಆಯೋಜಿಸಿದ್ದ 31ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವಕ್ಕೆ ಭಾನುವಾರ ಸಂಭ್ರಮದ ತೆರೆ ಬಿದ್ದಿತು.ಮಂತ್ರಾಲಯದ ಶ್ರೀ ರಾಘವೇಂದ್ರ ಸಪ್ತಾಹ ಕಾರ್ಯಾಚರಣ ಸಮಿತಿ ಮತ್ತು ದಾವಣಗೆರೆಯ ಮಹೋತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಧಾರ್ಮಿಕ, ಸಾಂಸ್ಕೃತಿಕ ಹಬ್ಬಕ್ಕೆ ಬೆಣ್ಣೆನಗರಿಯ ಭಕ್ತರು ಸಾಕ್ಷಿಯಾದರು.

ಏಳು ದಿನ ಕಾಲ ವಿಶೇಷ ಪೂಜೆ, ಅಭಿಷೇಕ, ಸುಪ್ರಭಾತ, ಹೋಮ, ಲಕ್ಷ ಪುಷ್ಪಾರ್ಚನೆ ಜತೆಗೆ ಪ್ರವಚನಗಳು ನಡೆದವು. ವಿವಿಧ ಮಠಾಧೀಶರ ಉಪಸ್ಥಿತಿ ಉತ್ಸವದ ಕಳೆ ಹೆಚ್ಚಿಸಿತು. ಪಂಡಿತರಿಂದ ಜ್ಞಾನ ಕಾರ್ಯ ನಡೆದರೆ, ವಿವಿಧ ಕಲಾವಿದರು ಸಂಗೀತ, ನೃತ್ಯ ಇನ್ನಿತರ ಕಲಾ ಪ್ರಕಾರಗಳ ಮೂಲಕ ಎಲ್ಲರಿಗೆ ಗುರುರಾಯರ ಸ್ಮರಣೆ ಮಾಡಿಸಿದರು. ಪಲಿಮಾರು ಮಠದ ಶ್ರೀಗಳು ಏಳೂ ದಿನಗಳ ಕಾಲ ಉಪಸ್ಥಿತರಿದ್ದು ನಿತ್ಯವೂ ಅನುಗ್ರಹ ಸಂದೇಶ ನೀಡಿದರು. ಪೇಜಾವರ, ಅದಮಾರು, ವ್ಯಾಸರಾಜ, ಪಾದರಾಜ ಮಠದ ಗುರುಗಳು ಆಗಮಿಸಿ ರಾಯರ ಮಹಿಮೆ ಕೊಂಡಾಡಿದರು.

ಭರತನಾಟ್ಯ, ಕೊಳಲು, ವೀಣಾ ವಾದನ, ದಾಸವಾಣಿ ಜತೆಗೆ ವಿವಿಧ ಭಜನಾ ಮಂಡಳಿಯವರು ಉತ್ಸಾಹದಿಂದ ಪಾಲ್ಗೊಂಡು ಮಹೋತ್ಸವ ರಂಗೇರುವಂತೆ ಮಾಡಿದರು. ರಸಪ್ರಶ್ನೆ ಸ್ಪರ್ಧೆ, ದೀಪೋತ್ಸವ, ಸಾಮೂಹಿಕ ಲಕ್ಷ್ಮೀ ಶೋಭಾನ ಪಾರಾಯಣ ಇನ್ನಿತರ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚು ಸಂಖ್ಯೆಯಲ್ಲಿದ್ದರು. ಉತ್ಸವದ ಎರಡನೇ ದಿನ ಭವ್ಯ ಶೋಭಾಯಾತ್ರೆ ನೆರವೇರಿತು.

Share this article