ಕನ್ನಡಪ್ರಭ ವಾರ್ತೆ ತರೀಕೆರೆ
ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಕುಂಠಿತವಾಗದಂತೆ ಇರಿಸಲು ಒಣ ಮೇವಿನ ಪೌಷ್ಠೀಕರಣ ಮತ್ತು ರಸಮೇವು ಅವಶ್ಯಕ ಎಂದು ಶಿವಮೊಗ್ಗ ಕೃಷಿ ವಿ.ವಿ.ವಿದ್ಯಾರ್ಥಿನಿ ಮಂಜುಶ್ರೀ ಹೇಳಿದ್ದಾರೆ.ಅವರು, ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿನಿ ಯರು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ ಏರ್ಪಾಡಾಗಿದ್ದ ಒಣಮೇವಿನ ಪೌಷ್ಟೀಕರಣ ಮತ್ತು ರಸ ಮೇವು ತಯಾರಿಕೆಯ ಬಗ್ಗೆ ಗುಂಪು ಚರ್ಚೆ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಒಣಮೇವಿನ ಪೌಷ್ಟೀಕರಣದ ವಿಧಾನವನ್ನು ಮತ್ತು ರಸಮೇವಿನ ಪ್ರಾಮುಖ್ಯತೆಯ ಜೊತೆಗೆ ಅದರ ತಯಾರಿಕೆಯಲ್ಲಿ ಅನುಸರಿಸಬೇಕಾದ ಕ್ರಮಗಳು ಮತ್ತು ಒಣ ಮೇವಿನ ಪೌಷ್ಟೀಕರಣದ ವಿಧಾನವನ್ನು ಮತ್ತು ರಸಮೇವಿನ ಪ್ರಾಮುಖ್ಯತೆಯ ಜೊತೆಗೆ ಅದರ ತಯಾರಿಕೆಯಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಿಕೊಟ್ಟರು.ಒಣ ಮೇವಿನ ಪೌಷ್ಟೀಕರಣ: ಮೊದಲಿಗೆ ಒಣಹುಲ್ಲನ್ನು 1 ರಿಂದ 1.5 ಇಂಚಿನಷ್ಟು ಉದ್ದ ಕತ್ತರಿಸಿ ಒಂದು ಟಾರ್ಪಲ್ ಮೇಲೆ ಹರಡಬೇಕು. 10 ಕೆ.ಜಿ. ಒಣಹುಲ್ಲಿಗೆ, 200 ಗ್ರಾಂ ಯೂರಿಯಾವನ್ನು 4 ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಇದನ್ನು ಒಂದು ಡ್ರಮ್‌ನಲ್ಲಿ ಗಾಳಿ ಆಡದ ಹಾಗೆ ಒತ್ತೊತ್ತಾಗಿ ತುಂಬಿ ಮುಚ್ಚಬೇಕು. ಈ ರೀತಿ ತಯಾರಿಸಿದಂತಹ ಮೇವನ್ನು 20 ರಿಂದ 21 ದಿನಗಳ ನಂತರ ಪ್ರತೀ ಹಸುವಿಗೆ 1 ರಿಂದ 2 ಕೆ.ಜಿ.ಯಂತೆ ನೀಡಬಹುದು ಎಂದು ಅವರು ತಿಳಿಸಿದರು.
ರಸಮೇವು ತಯಾರಿಕೆ : 80 ರಿಂದ 85 ದಿನಗಳ ಜೋಳವನ್ನು ತೆನೆ ಸಮೇತ ಕಟಾವು ಮಾಡಿ ತಂದು 1 ರಿಂದ 1.5 ಇಂಚಿನಷ್ಟು ಉದ್ದ ಕತ್ತರಿಸಿ ಒಂದು ಟಾರ್ಪಲ್ ಮೇಲೆ ಹರಡಬೇಕು ನಂತರ ಇದಕ್ಕೆ 10 ಲೀಟರ್ ನೀರನ್ನು ಸಿಂಪಡಿಸಿ, 1 ರಿಂದ 2 ಕೆ.ಜಿ. ಉಪ್ಪು , 2 ರಿಂದ 4 ಕೆ.ಜಿ. ಬೆಲ್ಲ , 0.5 ರಿಂದ 1 ಕೆ.ಜಿ. ಮಿನರಲ್ ಮಿಶ್ರಣ ಮತ್ತು ಬ್ಯಾಸಿಲಸ್ ಕಲ್ಚರ್ ಅನ್ನು ಹಾಕಿ ಚೆನ್ನಾಗಿ ಕಲಸಬೇಕು. ಇದನ್ನು 50 / 100 ಕೆ.ಜಿ. ರಸಮೇವಿನ ಬ್ಯಾಗ್ ನಲ್ಲಿ ಗಾಳಿ ಆಡದಂತೆ ಒತ್ತೊತ್ತಾಗಿ ತುಂಬಿ 1 ರಿಂದ 1.5 ತಿಂಗಳು ಬಿಡಬೇಕು. ಈ ರೀತಿ ತಯಾರಿಸಿದಂತಹ ರಸಮೇವನ್ನು ಹಸುವಿಗೆ ನೀಡುವ ಮುನ್ನ 15 ನಿಮಿಷಗಳ ಕಾಲ ತೆರೆದಿಟ್ಟು ಪ್ರತೀ ಹಸುವಿಗೆ 1 ರಿಂದ 2 ಕೆಜಿಯಷ್ಟು ನೀಡಬಹುದು. ರಸಮೇವನ್ನು ಗಾಳಿಯಾಡದಂತೆ ಶೇಕರಿಸಿಟ್ಟಲ್ಲಿ 6 ತಿಂಗಳಿಂದ 1 ವರ್ಷದವರೆಗೂ ಇಡಬಹುದು , ಅದೇ ತೆರೆದ ಸ್ಥಿತಿಯಲ್ಲಿ ಟ್ಟರೆ 3 ದಿನಗಳ ಕಾಲ ಇಡಬಹುದು. ಇದನ್ನು ಕರು ಹಾಕಿದ 6 ತಿಂಗಳ ನಂತರ ಹಸುವಿಗೆ ನೀಡಬಹುದು. ಈ ರೀತಿ ಮಾಡುವುದರಿಂದ ಹಸುಗಳಿಗೆ ನೀಡುವ ಹಿಂಡಿಯ ಪ್ರಮಾಣವನ್ನು ಕಡಿಮೆಗೊಳಿಸುವುದಲ್ಲದೆ ಬೇಸಿಗೆಯಲ್ಲೂ ಸಹ ಹಾಲು ಉತ್ಪಾದನೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.ಗುಂಪು ಚರ್ಚೆಯಲ್ಲಿ ವಿದ್ಯಾರ್ಥಿನಿಯರಾದ ಅನುಷಾ, ಜ್ಯೋತಿ, ಕಾವ್ಯ, ನಿವೇದಿತಾ, ಸಹನಾ, ಲಿಖಿತಾ ಅವರು ಭಾಗವಹಿಸಿದ್ದರು.