ಕನ್ನಡಪ್ರಭ ವಾರ್ತೆ ಗುಬ್ಬಿ
ಕಲ್ಲೂರು ಗ್ರಾಮದಲ್ಲಿ ಸಂವಿಧಾನ ಜಾಗೃತಿ ರಥವನ್ನು ವಿಜೃಂಭಣೆಯಿಂದ ಬರಮಾಡಿಕೊಂಡಿದ್ದು, ನಾವು ರಥಯಾತ್ರೆಗೆ ಅವಮಾನವಾಗುವಂತೆ ನಡೆದುಕೊಂಡಿಲ್ಲ ಎಂದು ಕಲ್ಲೂರು ಗ್ರಾಪಂಯ ಅಧ್ಯಕ್ಷೆ ಲಕ್ಷ್ಮೀ ತಿಳಿಸಿದರು.ಕಲ್ಲೂರು ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಪಂಚಾಯಿತಿಯ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನದ ಮೀಸಲಾತಿಯಡಿ ನಾವು ಅಧಿಕಾರವನ್ನು ಅನುಭವಿಸುತ್ತಿದ್ದು, ಸಂವಿಧಾನ ರಥ ಕಲ್ಲೂರಿಗೆ ಆಗಮಿಸಿದಾಗ ಪಂಚಾಯಿತಿಯ ಆಡಳಿತ ಮಂಡಳಿ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಒಟ್ಟಾಗಿ ಗೌರವದಿಂದ ಬರಮಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವು.
ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದೆವು, ಆದರೆ, ಗ್ರಾಪಂ ಮಾಜಿ ಅಧ್ಯಕ್ಷ ಕೆ. ಎಲ್ .ರವಿಕುಮಾರ್ ಸಂವಿಧಾನ ರಥ ಗ್ರಾಮಕ್ಕೆ ಬಂದಾಗ ಅವಮಾನ ಮಾಡಿದ್ದೇವೆ ಎಂದು ಪತ್ರಿಕಾ ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾದುದು, ಗ್ರಾಪಂಯ ಎಲ್ಲ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಸರ್ಕಾರದ ನಿದರ್ಶನದಂತೆ ಕಾರ್ಯಕ್ರಮ ಆಯೋಜಿಸಿದ್ದು, ಇದರಲ್ಲಿ ಯಾವುದೇ ಲೋಪ ವ್ಯಸಗಿರುವುದಿಲ್ಲ. ಮಾಜಿ ಅಧ್ಯಕ್ಷ ಕೆ ಎಲ್. ರವಿಕುಮಾರ್ ಆರೋಪ ಮಾಡುತ್ತಿರುವುದು ಸರಿಯಲ್ಲ. ಜವಾಬ್ದಾರಿಯುತ ಮುಖಂಡರಾದ ಇವರು, ಏಕಾಏಕಿ ಸಂವಿಧಾನ ರಥಕ್ಕೆ ಅಪಮಾನ ಮಾಡಿದ್ದಾರೆ ಎಂದು ಅಪಪ್ರಚಾರ ಮಾಡುವುದು ತಪ್ಪು ಎಂದು ಬೇಸರ ವ್ಯಕ್ತಪಡಿಸಿದರುಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಯೂಸುಫ್ ಮಾತನಾಡಿ, ಕಲ್ಲೂರು ಗ್ರಾಮಕ್ಕೆ ಸಂವಿಧಾನ ಜಾಥ ರಥವು ಆಗಮಿಸಿದ ವೇಳೆ ಎಲ್ಲರೂ ಸೇರಿ ವಿಜೃಂಭಣೆಯಿಂದ ರಥವನ್ನು ಪೂಜಿಸಿ, ವಿದ್ಯಾರ್ಥಿಗಳ ವಿವಿಧ ವೇಷಭೂಷಣಗಳು ಹಾಗೂ ಕಲಾತಂಡಗಳೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದೆವು. ಗ್ರಾಪಂ ಮಾಜಿ ಅಧ್ಯಕ್ಷ ಕೆ. ಎಲ್. ರವಿಕುಮಾರ ಗ್ರಾಪಂ ಅಧ್ಯಕ್ಷ,ಸದಸ್ಯರು,ಅಧಿಕಾರಿಗಳ ಮೇಲೆ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷೆ ಸುಮಿತ್ರ ಶಿವಯ್ಯ, ಸದಸ್ಯರಾದ ನಾಗರಾಜು .ಶಿವಾನಂದಯ್ಯ, ಹಜರತ್ ಅಲಿ ಮತ್ತಿತರರಿದ್ದರು.