ಜ.26 - ಫೆ.23ರ ವರೆಗೆ ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾ: ಡಿಸಿ ವಿದ್ಯಾಕುಮಾರಿ

KannadaprabhaNewsNetwork | Published : Jan 20, 2024 2:07 AM

ಸಾರಾಂಶ

ಜಾಗೃತಿ ಜಾಥಾಕ್ಕೆ ಜ. 26 ರಂದು ಜಿಲ್ಲಾ ಉಸ್ತುವಾರಿ ಸಚಿವರು ಅಜ್ಜರಕಾಡು ಮಹತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಚಾಲನೆ ನೀಡಲಿದ್ದಾರೆ. ಜಾಥಾವು ಸ್ಥಬ್ಧಚಿತ್ರಗಳೊಂದಿಗೆ ಜಿಲ್ಲೆಯ ಎರಡು ವಿಭಾಗಗಳಲ್ಲಿ 155 ಗ್ರಾಮ ಪಂಚಾಯತಿಗಳಲ್ಲಿ ಸಂಚರಿಸಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಜನಸಾಮಾನ್ಯರಲ್ಲಿ ನಮ್ಮ ಸಂವಿಧಾನ ಕುರಿತು ಜಾಗೃತಿ ಮೂಡಿಸುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವು ಜಿಲ್ಲಾದ್ಯಂತ ಜನವರಿ 26 ರಿಂದ ಫೆಬ್ರವರಿ 23ರ ವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದ್ದಾರೆ.

ಅವರು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸಂವಿಧಾನ ಕುರಿತು ಪ್ರತಿಯೊಬ್ಬರಿಗೂ ಮಾಹಿತಿ ತಲುಪಿಸುವುದಕ್ಕಾಗಿ ಸಂವಿಧಾನ ಜಾಗೃತಿ ಜಾಥಾವು ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜರುಗಲಿದೆ ಎಂದರು.

ಜಾಗೃತಿ ಜಾಥಾಕ್ಕೆ ಜ. 26 ರಂದು ಜಿಲ್ಲಾ ಉಸ್ತುವಾರಿ ಸಚಿವರು ಅಜ್ಜರಕಾಡು ಮಹತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಚಾಲನೆ ನೀಡಲಿದ್ದಾರೆ. ಜಾಥಾವು ಸ್ಥಬ್ಧಚಿತ್ರಗಳೊಂದಿಗೆ ಜಿಲ್ಲೆಯ ಎರಡು ವಿಭಾಗಗಳಲ್ಲಿ 155 ಗ್ರಾಮ ಪಂಚಾಯತಿಗಳಲ್ಲಿ ಸಂಚರಿಸಲಿದೆ.

ಗ್ರಾಪಂ ಮಟ್ಟದಲ್ಲಿ ಸಂವಿಧಾನ ಕುರಿತು ಉಪನ್ಯಾಸಕರಿಂದ ಭಾಷಣ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಂವಿಧಾನ ಕುರಿತು ಪ್ರಬಂಧ ಸ್ಫರ್ಧೆ, ಚಿತ್ರಕಲೆ ಹಾಗೂ ಭಾಷಣ ಸ್ಫರ್ಧೆ, ವಿಜೇತರಿಗೆ ಪಂಚಾಯಿತಿ ಮೂಲಕ ಬಹುಮಾನ ನೀಡಲಾಗುವುದು ಎಂದರು.

ಸ್ಥಬ್ಧಚಿತ್ರದ ಮೆರವಣಿಗೆಯೊಂದಿಗೆ ಕಲಾ ತಂಡಗಳು ಪಾಲ್ಗೊಳ್ಳಲಿದ್ದು, ಟ್ಯಾಬ್ಲೋದಲ್ಲಿ ಭಾರತದ ಸಂವಿಧಾನ ಪೀಠಿಕೆ,

ಡಾ.ಬಿ.ಆರ್ ಅಂಬೇಡ್ಕರ್ ಪರಿಕಲ್ಪನೆ ಹಾಗೂ ಪುತ್ಥಳಿ, ಬಸವಣ್ಣವರ ವಚನಗಳು, ಜಿಲ್ಲೆಯ ಸ್ಥಳೀಯ ಐತಿಹಾಸಿಕ ವ್ಯಕ್ತಿಗಳು, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಸರ್ಕಾರದ ಐದು ಯೋಜನೆಗಳ ವಿವರ ಇರಲಿದೆ ಹಾಗೂ ಇದೇ ಸಂದರ್ಭದಲ್ಲಿ ಸಂವಿಧಾನ ಜಾಗೃತಿಯ ಕರಪತ್ರಗಳನ್ನು ಪ್ರತಿಯೊಬ್ಬರಿಗೂ ವಿತರಿಸಲಾಗುವುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಜಿಪ ಉಪಕಾರ್ಯದರ್ಶಿ ರಾಜು ಮೊಗವೀರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ವಿ.ಮಡ್ಲೂರು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ತಾಲೂಕಿನ ತಹಶೀಲ್ದಾರ್‌ಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಸಮಿತಿಯ ಸದಸ್ಯರುಗಳು, ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Share this article