ಮಂಗಳೂರು : ಸಂವಿಧಾನ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಕಾಂಗ್ರೆಸ್‌ನವರು ‘ಟೂಲ್’ನಂತೆ ಉಪಯೋಗಿಸಿಕೊಂಡಿದ್ದರು. ಆದರೆ ಇಂದು ಆ ರೀತಿ ಮಾಡಲು ಸಾಧ್ಯವೂ ಇಲ್ಲ, ನಾವು ಬಿಡೋದೂ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದ್ದಾರೆ.
ಸಿಟಿಝನ್ಸ್ ಫಾರ್ ಸೋಶಿಯಲ್ ಜಸ್ಟೀಸ್ ಮಂಗಳೂರು ವತಿಯಿಂದ ನಗರದ ಪುರಭವನದಲ್ಲಿ ಶನಿವಾರ ಸಂವಿಧಾನ ಸನ್ಮಾನ ಮತ್ತು ‘ಸಂವಿಧಾನ ಬದಲಾಯಿಸಿದ್ದು ಯಾರು?’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಯಾವುದೇ ‘ಟೂಲ್’ನ್ನು ಸದಾ ಕಾಲವೂ ಪ್ರಯೋಗ ಮಾಡಲು ಆಗಲ್ಲ. ಕಾಂಗ್ರೆಸ್‌ನವರು ಈಗ ಸಂವಿಧಾನ ಮತ್ತು ಡಾ.ಅಂಬೇಡ್ಕರ್ ಅವರ ಹೆಸರು ಹೇಳಿ ಲಾಭ ಪಡೆಯುವ ಸಮಯದಿಂದ ವಂಚಿತರಾಗಿದ್ದಾರೆ. ಜನರನ್ನು ಸುಳ್ಳು ಹೇಳಿ ಮೋಸ ಮಾಡಲು ಆಗಲ್ಲ. ಅವರಿಗೆ ಸಂವಿಧಾನದ ಮೇಲೆ ಯಾವ ಗೌರವವೂ ಇಲ್ಲ ಎಂದರು.
ಅಂಬೇಡ್ಕರ್‌ರನ್ನು ಸೋಲಿಸಿದ್ದರು: ಕಾಂಗ್ರೆಸ್ ಮತ್ತು ಅಂಬೇಡ್ಕರ್ ನಡುವೆ ಅನೇಕ ಭಿನ್ನಾಭಿಪ್ರಾಯಗಳಿದ್ದವು. ಎಲ್ಲ ಮಹಿಳೆಯರಿಗೆ ಮತದಾನ ಹಕ್ಕು, ಹಿಂದೂ ಕೋಡ್‌ಬಿಲ್, ದಲಿತ ನ್ಯಾಯ, ಕಾಶ್ಮೀರದಲ್ಲಿ ದೇಶದ ಕಾನೂನು ಜಾರಿಗೊಳಿಸುವ ವಿಚಾರದಲ್ಲಿ ನೆಹರೂ ವಿರೋಧ ಇತ್ತು. ಈ ಭಿನ್ನಾಭಿಪ್ರಾಯದ ಕಾರಣಕ್ಕೆ ಅಂಬೇಡ್ಕರ್ ಅವರಿಗೆ ಕಿರುಕುಳ ನೀಡಿದ್ದರು. ಸಂವಿಧಾನ ರಚನಾ ಸಮಿತಿಗೆ ಚುನಾವಣೆ ನಡೆದಾಗ ಮುಂಬೈನಿಂದ ಸ್ಪರ್ಧಿಸಿದ್ದ ಅಂಬೇಡ್ಕರ್ ಅವರನ್ನು ಸೋಲಿಸಿದ್ದರು. ನಂತರ ಪಶ್ಚಿಮ ಬಂಗಾಳದಿಂದ ಚುನಾವಣೆಗೆ ನಿಂತು ಗೆದ್ದಿದ್ದರು. ಬದುಕಿದ್ದಾಗ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್‌ನವರು ಗೌರವ ನೀಡಿಲ್ಲ ಎಂದು ಬಿ.ಎಲ್. ಸಂತೋಷ್ ಆರೋಪಿಸಿದರು.
ಸಂವಿಧಾನ ಅತ್ಯಾಚಾರ: ಇತ್ತೀಚೆಗೆ ಸಂವಿಧಾನವನ್ನು ಅತಿಕ್ರಮಣ ಅಲ್ಲ, ಅತ್ಯಾಚಾರ ಮಾಡುತ್ತಿದ್ದಾರೆ ಎಂದ ಅವರು, ನರೇಂದ್ರ ಮೋದಿ ಸಂವಿಧಾನ ಬದಲಿಸ್ತಾರೆ ಎಂಬ ಆರೋಪ ಮಾಡುತ್ತಾರೆ. ಸಂವಿಧಾನಕ್ಕೆ ಇದುವರೆಗೆ 106 ಬಾರಿ ತಿದ್ದುಪಡಿ ಆಗಿದೆ. ಈ ಪೈಕಿ 75 ಬಾರಿ ತಿದ್ದುಪಡಿ ಮಾಡಿ ಅದರ ಸ್ವರೂಪ ಬದಲಿಸಿದ್ದು ಕಾಂಗ್ರೆಸ್ ಸರ್ಕಾರ. ನರೇಂದ್ರ ಮೋದಿ ಅವಧಿಯಲ್ಲಿ ಸಂವಿಧಾನ ತಿದ್ದುಪಡಿ ಆಗಿದ್ದು ಕೇವಲ 8 ಬಾರಿ. ಅದರಲ್ಲಿ ಒಂದೇ ಒಂದು ತಿದ್ದುಪಡಿಯನ್ನು ದುರುಪಯೋಗ ಮಾಡಿದ್ದರೆ ಹೇಳಲಿ ಎಂದು ಸವಾಲು ಹಾಕಿದರು.
ಸಂವಿಧಾನಕ್ಕೆ ತಿದ್ದುಪಡಿ ಮಾಡಿದ್ದ ಕಾಂಗ್ರೆಸ್ ಸರ್ಕಾರ ಅದರಿಂದಲೇ 90 ರಾಜ್ಯ ಸರ್ಕಾರಗಳನ್ನು ಉರುಳಿಸಿತ್ತು. 11 ಸರ್ಕಾರಗಳನ್ನು ಒಂದೇ ದಿನ ಬರ್ಕಾಸ್ತು ಮಾಡಿದ್ದಾರೆ. ಇಂದಿರಾ ಗಾಂಧಿ ‘ಡಿಕ್ಟೇಟರ್ ಇನ್ ಚೀಫ್’ ಆಗಿದ್ದರು ಎಂದರು.ಅಂಬೇಡ್ಕರ್ ಬದುಕಿದ್ದಾಗ ಕಾಂಗ್ರೆಸ್ ಗೌರವ ನೀಡಿಲ್ಲ. ನೆಹರೂ ನೀತಿಯಿಂದ ಬೇಸತ್ತು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಮರಣಾನಂತರ ದೆಹಲಿಯಲ್ಲಿ ಅಂತ್ಯಸಂಸ್ಕಾರ ಮಾಡಲೂ ಬಿಡಲಿಲ್ಲ. ಅದಾಗಿ ಆರೇ ತಿಂಗಳಲ್ಲಿ ಅವರ ಪತ್ನಿ ಉಳಿದುಕೊಂಡಿದ್ದ ನಿವಾಸವನ್ನು ತೆರವು ಮಾಡಲಾಗಿತ್ತು. ಸ್ಮಾರಕವನ್ನೂ ನಿರ್ಮಿಸಿಲ್ಲ. ಆದರೆ ಅಂಬೇಡ್ಕರ್ ಅವರಿಗೆ ಗೌರವ ನೀಡಿದ್ದು ಬಿಜೆಪಿ. ಅಂಬೇಡ್ಕರ್ ಅವರ ನೆನಪಿನ ಸ್ಥಳಗಳನ್ನು ಪಂಚ ತೀರ್ಥಗಳನ್ನಾಗಿ ಮಾಡಿ ಗೌರವ ಸಲ್ಲಿಸಲಾಗಿದೆ ಎಂದು ಬಿ.ಎಲ್. ಸಂತೋಷ್ ಹೇಳಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಮಾತನಾಡಿ, ನೆಹರೂ ಒಳಪ್ರಯತ್ನದಿಂದ ಆರ್ಟಿಕಲ್ 370 ಸಂವಿಧಾನದೊಳಗೆ ಸೇರಿತ್ತು. ಇದರಿಂದಾಗಿ 30-35 ಸಾವಿರದಷ್ಟಿರುವ ಕೇಂದ್ರ ಕಾನೂನುಗಳು ಜಮ್ಮು ಕಾಶ್ಮೀರಕ್ಕೆ ಅನ್ವಯಿಸುತ್ತಿರಲಿಲ್ಲ. ಆರ್ಟಿಕಲ್ 370 ತೆಗೆದು ಅಂಬೇಡ್ಕರ್ ಆಶಯ ಈಡೇರಿಸಿದ್ದು ನರೇಂದ್ರ ಮೋದಿ ಎಂದರು.
ಸಂವಿಧಾನದ ಆರ್ಟಿಕಲ್ 368ನ್ನು ದುರ್ಬಳಕೆ ಮಾಡಿ ದೇಶಕ್ಕೆ ತುರ್ತು ಪರಿಸ್ಥಿತಿ ಹೇರಲಾಯಿತು. 38ನೇ ತಿದ್ದುಪಡಿ ಮಾಡಿ ತುರ್ತು ಪರಿಸ್ಥಿತಿ ತೀರ್ಮಾನವನ್ನು ಯಾವುದೇ ನ್ಯಾಯಾಲಯ ಪ್ರಶ್ನಿಸದಂತೆ ಮಾಡಲಾಯಿತು. ಈ ತಿದ್ದುಪಡಿಗಳನ್ನು ಮತ್ತೆ ಸರಿಪಡಿಸಿ ಮೂಲ ಸಂವಿಧಾನವನ್ನು ಮತ್ತೆ ಜಾರಿಗೆ ತಂದದ್ದು ತುರ್ತು ಪರಿಸ್ಥಿತಿ ನಂತರ ಬಂದ ಸಮ್ಮಿಶ್ರ ಸರ್ಕಾರ ಎಂದು ಹೇಳಿದರು.
ಪುಸ್ತಕದ ಲೇಖಕ ವಿಕಾಸ್ ಕುಮಾರ್ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಪ್ರಾಧ್ಯಾಪಕ ಡಾ.ಹೃಷಿಕೇಶ್ ಅಮೀನ್ ಇದ್ದರು.