ಕನ್ನಡಪ್ರಭ ವಾರ್ತೆ ಪಾಂಡವಪುರ
ದೇಶಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟಂತಹ ಸಂವಿಧಾನ ಪ್ರಪಂಚಕ್ಕೆ ಮಾದರಿಯಾಗಿದೆ. ಅಂತಹ ಮಹಾತ್ಮರು ನಡೆದು ಬಂದ ದಾರಿಯಲ್ಲಿ ನಾವೆಲ್ಲರು ಮುನ್ನಡೆಯಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ನಾಡಹಬ್ಬಗಳ ಆಚರಣ ಸಮಿತಿಯಿಂದ ನಡೆದ ಗಣರಾಜ್ಯೋತ್ಸವದಲ್ಲಿ ಮಾತನಾಡಿ, ಗಣರಾಜ್ಯೋತ್ಸವ ಭಾರತೀಯ ಪ್ರಜೆಗಳು ಹೆಮ್ಮೆ ಪಡುವ, ಸಂಭ್ರಮಿಸುವ ದಿನವಾಗಿದೆ ಎಂದರು.
ಭಾರತದ ಜಿಡಿಪಿ 3.5ಮಿಲಿಯನ್ ಡಾಲರ್ ಇದೆ. ಮುಂದಿನ 2030ಕ್ಕೆ 7.3ಕ್ಕೆ ಏರಿಕೆಯಾಗಲಿದೆ. ಆ ಮೂಲಕ ಪ್ರಪಂಚದಲ್ಲಿಯೇ ಅತಿಹೆಚ್ಚು ಜೆಡಿಪಿ ಹೊಂದಿದ 3ನೇ ರಾಷ್ಟ್ರವಾಗಿ ಭಾರತ ಹೊರ ಹೊಮ್ಮಲಿದೆ. ಇದು ದೇಶದ ಗೌರವಾಗಲಿದೆ ಎಂದರು.ಸಮಾರಂಭದಲ್ಲಿ ಉಪವಿಭಾಗಾಧಿಕಾರಿ ನಂದೀಶ್ ರಾಷ್ಟ್ರಧಜಾರೋಹಣ ನೆರವೇರಿಸಿದರು.
ಬಳಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬ್ಯಾಂಡ್ ಸೆಟ್, ಶಾಲಾ ವಿದ್ಯಾರ್ಥಿಗಳ ತಂಡಗಳನ್ನು ಪರಿಚಯಮಾಡಿಕೊಂಡರು. ಬಳಿಕ ವಿದ್ಯಾರ್ಥಿಗಳ ತಂಡ ವೇದಿಕೆ ಮೇಲಿನ ಗಣ್ಯರನ್ನು ಪಥಸಂಚಲನದ ಮೂಲಕ ವಂದನೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ನಾಡು-ನುಡಿ, ರಾಷ್ಟ್ರಪ್ರೇಮ ಬಿಂಬಿಸುವ ಹಲವಾರು ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ಮೂಡಿಬಂದವು.
ಸಮಾರಂಭದಲ್ಲಿ ತಹಶೀಲ್ದಾರ್ ಶ್ರೇಯಸ, ಸಂತೋಷ್, ಇಒ ಲೋಕೇಶ್ ಮೂರ್ತಿ, ಪುರಸಭೆ ಮುಖ್ಯಾಧಿಕಾರಿ ವೀಣಾ, ಬಿಇಓ ಚಂದ್ರಶೇಖರ್, ರೈತಸಂಘದ ಅಧ್ಯಕ್ಷ ನಾಗರಾಜು, ಪುರಸಭೆ ಸದಸ್ಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ 75ನೇ ಗಣರಾಜ್ಯೋತ್ಸವ ಸಮಾರಂಭವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ರಾಷ್ಟ್ರೀಯ ಹಬ್ಬಗಳನ್ನು ಮನೆ ಹಬ್ಬಗಳಂತೆ ಆಚರಿಸಿ: ಶಾಸಕ ರಮೇಶ ಬಂಡಿಸಿದ್ದೇಗೌಡಶ್ರೀರಂಗಪಟ್ಟಣ:ರಾಷ್ಟ್ರೀಯ ಹಬ್ಬಗಳನ್ನು ಮನೆ ಹಬ್ಬಗಳಂತೆ ಆಚರಿಸಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಳ್ಳಲಾಗಿದ್ದ 75ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೇರವೇರಿ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆಗೂ ಒಂದೇ ಸಮಾನತೆ ಎಂಬ ಅಡಿಯಲ್ಲಿ ಸಂವಿಧಾನವನ್ನು ರಚಿಸಲಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನವಾಗಿ ಬದುಕು ರೂಪಿಸಿಕೊಡಲಾಗಿದೆ ಎಂದರು.ಇದೇ ವೇಳೆ ಪಟ್ಟಣ ಹಾಗೂ ತಾಲೂಕಿನ ಶಾಲಾ ಮಕ್ಕಳು, ಪೊಲೀಸರು ಸಮವಸ್ತ್ರ ಧರಿಸಿ ಪಥಸಂಚಲನ ನಡೆಸ, ಶಾಸಕರು ಹಾಗೂ ಅಧಿಕಾರಿಗಳು ಗೌರವ ವಂಧನೆ ಸಲ್ಲಿಸಿದರು. ಪಥ ಸಮಚಲನ ವಿಜೇತರಿಗೆ ಬಹುಮಾನ ನೀಡಲಾಯಿತು.ಇದಕ್ಕೂ ಮುನ್ನ ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಮುಖ್ಯಾಧಿಕಾರಿ ರಾಜಣ್ಣ ಧ್ವಜಾರೋಹಣ ನೆರವೇರಿಸಿದರು. ನಂತರ ವಾಹನದ ಮೂಲಕ ಭಾರತಾಂಬೆಯ ಭಾವಚಿತ್ರಕ್ಕೆ ಅಲಂಕರಿಸಿ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ಐತಿಹಾಸಿಕ ಭತೇರಿ ತಲುಪಿತು. ನಂತರ ತಹಸೀಲ್ದಾರ್ ಪರುಶುರಾಮ ಸತ್ತಿಗೇರಿ ಅವರಿಂದ ಭತೇರಿಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.ಕಾರ್ಯಕ್ರಮದಲ್ಲಿ ತಾಪಂ ಇಒ ವೇಣು, ಬಿಇಒ ಎಂ.ಆರ್. ಅನಂತರಾಜು, ಡಿವೈಎಸ್ಪಿ ಮುರುಳಿ, ಪುರಸಭಾ ಸದಸ್ಯರು, ಸಂಘ ಸಂಸ್ಥೆಗಳ ಮುಖಂಡರು, ವಿವಿಧ ಇಲಾಖಾ ಅಧಿಕಾರಿ ವರ್ಗದವರು ಹಾಜರಿದ್ದರು.ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ , ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.