ಮಹಿಳೆಯರ ಬದುಕಿಗೆ ಗೌರವ ನೀಡಿದ್ದು ಸಂವಿಧಾನ: ಕೆ.ಸಿ. ಅಕ್ಷತಾ

KannadaprabhaNewsNetwork |  
Published : Mar 03, 2024, 01:38 AM IST
ಫೋಟೋ : ೨ಎಚ್‌ಎನ್‌ಎಲ್3 | Kannada Prabha

ಸಾರಾಂಶ

ಭಾರತ ಸಂವಿಧಾನದ ಅರ್ಥ ತಿಳಿದು ಗೌರವ ನೀಡಿದಾಗ ಮಾತ್ರ ಮಹಿಳಾ ದಿನಾಚರಣೆಗೆ ಅರ್ಥ ಬರುತ್ತದೆ.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಮಹಿಳೆ ಕೇವಲ ಮಕ್ಕಳನ್ನು ಹೆರುವ ಯಂತ್ರವಲ್ಲ. ತನ್ನ ಹಕ್ಕು, ಅಸ್ತಿತ್ವಕ್ಕಾಗಿ ಧ್ವನಿ ಎತ್ತುವ ಮೂಲಕ ಭಾರತದ ಸಂವಿಧಾನದ ಅರ್ಥ ತಿಳಿದು ಗೌರವ ನೀಡಿದಾಗ ಮಾತ್ರ ಮಹಿಳಾ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಸಾಮಾಜಿಕ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ ಕೆ.ಸಿ. ಅಕ್ಷತಾ ಹೇಳಿದರು.

ಶನಿವಾರ ಪಟ್ಟಣದ ಲೋಯೋಲ ವಿಕಾಸ ಕೇಂದ್ರ ಹಾಗೂ ಪ್ರಗತಿ ಲೋಯೊಲ ಎಸ್ಎಚ್‌ಜಿ ಟ್ರಸ್ಟ್ ತಾಲೂಕು ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-೨೦೨೪ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮಹಿಳೆಯರ ಮರಣ ಶಾಸನ ಬರೆಯುತ್ತಿದ್ದ ಕಾಲಘಟ್ಟದಲ್ಲಿ ಮಹಿಳೆಯರ ಬದುಕಿಗೆ ಗೌರವವನ್ನು ತಂದದ್ದು ನಮ್ಮ ಸಂವಿಧಾನ. ಸಂವಿಧಾನದ ಪ್ರಕಾರ ಮಹಿಳಾ ರಾಜಕೀಯ ಪ್ರಾತಿನಿಧ್ಯ ಕನಸಿನ ಮಾತಾಗಿದೆ. ಧರ್ಮ, ಮೂಢನಂಬಿಕೆಗಳಲ್ಲಿ ಮಹಿಳೆಯರನ್ನು ಕಟ್ಟಿ ಹಾಕಲಾಗುತ್ತಿದೆ. ಈ ಎಲ್ಲ ಕಟ್ಟಳೆಯಿಂದ ಹೊರಬಂದು ಉತ್ತಮ ಶಿಕ್ಷಣ ಪಡೆಯುವ ಮೂಲಕ ಆರ್ಥಿಕ, ರಾಜಕೀಯ, ಸಾಮಾಜಿಕವಾಗಿ ಮಹಿಳೆ ಅಭಿವೃದ್ಧಿ ಹೊಂದಬೇಕಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಸನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ, ಮಹಿಳೆಯರು ಅನ್ಯಾಯವಾದಾಗ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಮಹಿಳೆಯರಿಗಿರುವ ಅವಕಾಶವನ್ನು ಬಳಸಿಕೊಂಡು ಮುಖ್ಯವಾಹಿನಿಗೆ ಬರಬೇಕಿದೆ. ಮಹಿಳೆ ಇಂದು ಎಲ್ಲ ರಂಗದಲ್ಲೂ ಮುಂದಿದ್ದಾಳೆ. ಮಹಿಳಾ ದಿನಾಚರಣೆ ಬದಲಾವಣೆಗೆ ಬುನಾದಿಯಾಗಬೇಕು ಎಂದರು.

ಸಾನಿಧ್ಯ ವಹಿಸಿ ಮಾತನಾಡಿದ ಲೋಯೋಲ ಸಮೂಹ ಸಂಸ್ಥೆಗಳ ಮುಖ್ಯಸ್ಥ ಫಾ. ಮೆಲ್ವಿನ್ ಲೋಬೊ, ಮಹಿಳೆಯರ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಲಿಂಗ ಬೇಧ ತಾರತಮ್ಯ ಹೋಗಿ ಸಮಾನತೆ ಬರಬೇಕಿದೆ. ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದುತ್ತಿದ್ದಾರೆ. ಇಂದು ಮಹಿಳೆಯರಲ್ಲಿ ಬದಲಾವಣೆ ಕಾಣುತ್ತಿದ್ದೇವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಗತಿ ಲೋಯೊಲ ಟ್ರಸ್ಟ್‌ನ ತಾಲೂಕು ಒಕ್ಕೂಟದ ಅಧ್ಯಕ್ಷೆ ಸಂಗೀತಾ ಮಂತಗಿ ಒಕ್ಕೂಟದ ಕಾರ್ಯ ಚಟುವಟಿಕೆಗಳ ವಾರ್ಷಿಕ ವರದಿ ವಾಚಿಸಿದರು. ಇದೇ ಸಂದರ್ಬದಲ್ಲಿ ಸಾಧಕ ಮಹಿಳೆಯರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರೈತ ಮುಖಂಡ ಮಹಲಿಂಗಪ್ಪ ಅಕ್ಕಿವಳ್ಳಿ ಪಾಲ್ಗೊಂಡಿದ್ದರು. ದೀಪಾ ಗಾಡಿಗೇರ ಸ್ವಾಗತಿಸಿದರು. ರೇಶ್ಮಾ ಭೈರಣ್ಣನವರ ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ