ತಾರತಮ್ಯ ನಿವಾರಿಸಲು ಕಾನೂನು ಶ್ರಮಿಸುತ್ತಿದೆ: ಸಿಜೆಐ

KannadaprabhaNewsNetwork | Published : Dec 18, 2023 2:00 AM

ಸಾರಾಂಶ

ತಾರತಮ್ಯ ನಿವಾರಿಸಲು ಕಾನೂನು ಶ್ರಮಿಸುತ್ತಿದೆ: ಸಿಜೆಐಕಾನೂನು ವಿವಿಯಿಂದ ನ್ಯಾ.ಇ.ಎಸ್.ವೆಂಕಟರಮಣಯ್ಯ ಶತಮಾನೋತ್ಸವ, ಸ್ಮಾರಕ ‘ರಾಜ್ಯದ ಸಾಂವಿಧಾನಿಕ ಅಗತ್ಯಗಳು–ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿನ ತಾರತಮ್ಯ’ ವಿಚಾರದ ಕುರಿತು ಉಪನ್ಯಾಸ.

ಕಾನೂನು ವಿವಿಯಿಂದ ನ್ಯಾ.ಇ.ಎಸ್.ವೆಂಕಟರಮಣಯ್ಯ ಶತಮಾನೋತ್ಸವ, ಸ್ಮಾರಕ ಉಪನ್ಯಾಸ

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾನೂನುಗಳು ಸಾರ್ವಜನಿಕ ಮತ್ತು ಖಾಸಗಿತನದ ಚೌಕಟ್ಟುಗಳಲ್ಲಿರುವ ಲಿಂಗ, ಜಾತಿ, ಅಂಗವಿಕಲತೆಯ‌ ತಾರತಮ್ಯ ನಿವಾರಿಸಲು ಶ್ರಮಿಸುತ್ತಿವೆ. ಎಲ್ಲರಿಗೂ ಸಮಾನ ಅವಕಾಶ ಸೃಷ್ಟಿಸುವುದು, ತಾರತಮ್ಯ ಆಚರಣೆ ನಿವಾರಿಸುವುದು ಹಾಗೂ ದೀನದಲಿತರ ಸಬಲೀಕರಣವು ನ್ಯಾಯಾಂಗ ವ್ಯವಸ್ಥೆಯ ಮುಖ್ಯ ಗುರಿಯಾಗಿರಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹೇಳಿದ್ದಾರೆ.

ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ಭಾರತೀಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಿಂದ ನಡೆದ ‘ನ್ಯಾ.ಇ.ಎಸ್.ವೆಂಕಟರಮಣಯ್ಯ ಶತಮಾನೋತ್ಸವದ ಸ್ಮಾರಕ ಉಪನ್ಯಾಸ’ ಕಾರ್ಯಕ್ರಮದಲ್ಲಿ ‘ರಾಜ್ಯದ ಸಾಂವಿಧಾನಿಕ ಅಗತ್ಯಗಳು–ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿನ ತಾರತಮ್ಯ’ ವಿಚಾರದ ಕುರಿತು ಅವರು ಮಾತನಾಡಿದರು.

ಸಾಂವಿಧಾನಿಕ ಆಡಳಿತವು ಸಮಾಜವನ್ನು ಸಾರ್ವಜನಿಕ ಮತ್ತು ಖಾಸಗಿ ಎಂಬ ಅವಳಿತನ ಮೀರಿ ತನ್ನದೇ ಆದ ವಿವೇಚಾನಾತ್ಮಕ ದೃಷ್ಟಿಯಿಂದ ನೋಡುವಂತಿರಬೇಕು. ನಮ್ಮಲ್ಲಿ ಮುಕ್ತ ಮನಸ್ಸು ಇದ್ದಾಗ ಮಾತ್ರವೇ ನ್ಯಾಯದ ತಾರ್ಕಿಕ ಅಂತ್ಯಗಳನ್ನು ಕಾಣಬಹುದು. ಸಾಮಾಜಿಕ ಮತ್ತು ಖಾಸಗಿ ವಲಯದಲ್ಲಿ ನಿಜವಾದ ಸಮಾನತೆ ಸಾಧಿಸಲು ವಾಸ್ತವಗಳ ಹಿನ್ನೆಲೆ ಅರ್ಥಮಾಡಿಕೊಳ್ಳಬೇಕು. ಬಳಿಕ ಅಸಮ ತೋಲನ ನಿವಾರಿಸುವುದು ಅಗತ್ಯ ಎಂದರು.

ನ್ಯಾಯಾಂಗವು ಲಿಂಗ ಮತ್ತು ಅಂಗವಿಕಲತೆಯನ್ನು ಬಿಡಿಸಿ ನೋಡುವಾಗ ಅದರಲ್ಲಿ ಮಹಿಳೆಯರು ಎದುರಿಸಬಹುದಾದ ಪರೋಕ್ಷ ತಾರತಮ್ಯವನ್ನೂ ಗಮನಿಸಿದೆ. ಕಾನೂನು ಮತ್ತು ನೀತಿಗಳು ಸಾರ್ವಜನಿಕ – ಖಾಸಗಿತನದ ದ್ವಂದ್ವ ಮೀರಬೇಕು. ಅಧಿಕಾರದ ಅಸಮತೋಲನ ಗಮನಿಸಬೇಕು. ಹಾಗಾದಾಗ ಸಮಾನತೆ ಕೇವಲ ಒಂದು ಘೋಷಣೆಯಾಗಿ ಉಳಿದಿಲ್ಲ ಎಂಬುದರ ಅರಿವಾಗುತ್ತದೆ ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹಾಗೂ ವೆಂಕಟರಮಣಯ್ಯ ಅವರ ಪುತ್ರಿ ಬಿ.ವಿ. ನಾಗರತ್ನ, ‘ ಕಾಯಕವೇ ಕೈಲಾಸ ಎಂದು ನಂಬಿದ್ದ ನ್ಯಾ.ಇ.ಎಸ್.ವೆಂಕಟರಮಣಯ್ಯ ಅವರು ಕರ್ತವ್ಯ ಬದ್ಧತೆಯಿಂದ ನಡೆದುಕೊಂಡವರು. ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾಗಿದ್ದರೂ ಅವರನ್ನು ತಮ್ಮ ಮಂಡ್ಯದ ಮಣ್ಣಿನ ಬಗ್ಗೆ ಸೆಳೆತವಿತ್ತು. ಸಾಹಿತ್ಯದಲ್ಲಿ ಹೆಚ್ಚು ಆಸಕ್ತರಾಗಿದ್ದ ತಮ್ಮ ಹಲವು ತೀರ್ಪಿನಲ್ಲಿ ಸಂಸ್ಕೃತ, ಕನ್ನಡ ಸಾಹಿತ್ಯದ ಉಲ್ಲೇಖ ಮಾಡುತ್ತಿದ್ದರು. ಮನೆಗೆ ಸಂಸ್ಕೃತದ ಪ್ರಾಧ್ಯಾಪಕರನ್ನು ಕರೆಸಿಕೊಂಡು ಅವರಿಂದ ಸಂಸ್ಕೃತವನ್ನು ಕಲಿಯುತ್ತಿದ್ದರು. ನೇರ ನಡೆನುಡಿ ವಾಸ್ತವಿಕತೆಯ ಅರಿವಿದ್ದ ನಮ್ಮ ತಾಯಿ ಅವರ ಬೆನ್ನಿಗೆ ಬಂಡೆಯಂತೆ ನಿಂತಿದ್ದರು’ ಎಂದು ನೆನಪಿಸಿಕೊಂಡರು.

‘ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಅವರು ತಮ್ಮ ಬೇರನ್ನು ಮರೆತಿರಲಿಲ್ಲ. ತಮ್ಮ ಊರು, ಹಳ್ಳಿಯನ್ನು ಯಾವಾಗಲು ಸ್ಮರಿಸಿಕೊಳ್ಳುತ್ತಿದ್ದರು. ತಮ್ಮ ಕೊನೆಯ ದಿನಗಳಲ್ಲಿ ಮಾತನಾಡುವ ಶಕ್ತಿ ಕಳೆದುಕೊಂಡಾಗ ‘ ನಾನು ಭಾರತಕ್ಕಾಗಿ ಪ್ರಾರ್ಥಿಸುತ್ತೇನೆ’ ಎಂದು ಕೈಯಲ್ಲಿ ಬರೆದು ತೋರಿಸುತ್ತಿದ್ದರು’ ಎಂದು ತಮ್ಮ ತಂದೆಯನ್ನು ಸ್ಮರಿಸಿಕೊಂಡರು.

ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ. ಎಸ್‌.ನಜೀರ್ ಅಹ್ಮದ್‌, ಸುಪ್ರೀ ಕೋರ್ಟ್‌ ನ್ಯಾಯಮೂರ್ತಿಗಳಾದ ಹೃಷಿಕೇಶ ರಾಯ್‌ ಮತ್ತು ರಾಜೇಶ್‌ ಬಿಂದಾಲ್‌, ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ, ಹಿಮಾಚಲ ಪ್ರದೇಶದ ಮುಖ್ಯ ನ್ಯಾಯಮೂರ್ತಿ ಎಂ.ಎಸ್‌.ರಾಮಚಂದ್ರ ರಾವ್‌ ಮತ್ತು ಕೊಲ್ಕತ್ತಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌.ಶಿವಜ್ಞಾನಂ, ಕರ್ನಾಟಕ ಹೈಕೋರ್ಟ್‌ನ ಎಲ್ಲ ಹಾಲಿ ನ್ಯಾಯಮೂರ್ತಿಗಳು, ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ಬೆಂಗಳೂರು ವಕೀಲರ ಸಂಘ, ರಾಜ್ಯ ವಕೀಲರ ಪರಿಷತ್‌ ಪದಾಧಿಕಾರಿಗಳು, ಹಿರಿಯ ವಕೀಲರು, ವಿವಿಧ ಜಿಲ್ಲೆಗಳ ನ್ಯಾಯಾಧೀಶರು, ಕಾನೂನು ವಿದ್ಯಾರ್ಥಿಗಳು ಇದ್ದರು.

-------

ಫೋಟೋ

‘ನ್ಯಾ.ಇ.ಎಸ್.ವೆಂಕಟರಮಣಯ್ಯ ಶತಮಾನೋತ್ಸವದ ಸ್ಮಾರಕ ಉಪನ್ಯಾಸ’ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮಾತನಾಡಿದರು.

Share this article