ಕನ್ನಡಪ್ರಭ ವಾರ್ತೆ ಮೈಸೂರು
ಆರ್‌ಎಸ್‌ಎಸ್, ವಿ.ಎಚ್.ಪಿ ಅವರ ಮಾತು ಕೇಳಬೇಡಿ. ನಮಗೆ ಸಂವಿಧಾನ ಹೊರತು ಆ ಸಂಘಟನೆಗಳಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೊದಲು ತುಳಿತಕ್ಕೆ ಒಳಗಾದ, ಅಸಮಾನತೆಯಿಂದ ನೊಂದ ಜನರು ಒಂದಾಗಬೇಕು. ವಾಲ್ಮೀಕಿ ಅವರ ಕಷ್ಟ ಈ ಆರ್.ಎಸ್.ಎಸ್ ಮತ್ತು ವಿ.ಎಚ್.ಪಿ ಅವರಿಗೇನು ಗೊತ್ತು ಎಂದು ಪ್ರಶ್ನಿಸಿದರು.ಸಿದ್ದರಾಮಯ್ಯ ಅವರು ಎಸ್.ಇ.ಪಿ ಮತ್ತು ಟಿಎಸ್.ಪಿ. ಹಣ ಏಕೆ ಕೊಟ್ಟಿದ್ದಾರೆ ಎಂಬುದು ಗೊತ್ತಲ್ಲವೇ? ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. 7ರಷ್ಟು ಮಂದಿ ಎಸ್ಟಿ ಇದ್ದಾರೆ. ಆದರೆ ಅವರ ಬಳಿ ವ್ಯವಸಾಯ ಮಾಡಲು ಶೇ. 4ರಷ್ಟು ಹಣ ಕೂಡ ಇಲ್ಲ. ಆದ್ದರಿಂದ ಸಾಮಾಜಿಕ ನ್ಯಾಯ ಪಡೆಯಬೇಕಾದರೆ ಸಂವಿಧಾನದ ಪೀಠಿಕೆ ಜಾರಿಗೊಳ್ಳಬೇಕು ಎಂದರು.
ಅಂಬೇಡ್ಕರ್ ಅವರು 140 ಕೋಟಿ ಜನರ ಒಳಿತಿಗಾಗಿ ಸಂವಿಧಾನ ಕೊಟ್ಟಿದ್ದಾರೆ. ಪ.ಜಾತಿ, ಪ.ಪಂಗಡ ಮತ್ತು ದುಡಿಯುವ ವರ್ಗಕ್ಕೆ ವಿಶೇಷ ಸವಲತ್ತು ಕೊಟ್ಟಿದ್ದಾರೆ. ಆ ಕಾರಣದಿಂದ ಸಂವಿಧಾನ ಪೀಠಿಕೆ ಯಥಾವತ್ತಾಗಿ ಜಾರಿಗೊಳ್ಳಬೇಕು ಎಂದರು.ವಾಲ್ಮೀಕಿ ರಾಮಾಯಣ ಪ್ರಪಂಚದಲ್ಲಿ ಶ್ರೇಷ್ಠವಾದ ಮಹಾಕಾವ್ಯ. ವಾಲ್ಮೀಕಿ ಬೇಟೆಯಾಡಿ, ಕಳ್ಳತನ ಮಾಡುತ್ತಿದ್ದರು. ಇವರಿಗೆ ಊಟಕ್ಕೂ ತೊಂದರೆ ಆಗಿದ್ದರಿಂದ ಆ ಕೆಲಸ ಮಾಡುತ್ತಿದ್ದರು. ಬಳಿಕ ಜ್ಞಾನೋದಯವಾಗಿ ಬದುಕು ವಿಸ್ತರಿಸಿಕೊಂಡಿದ್ದಾಗಿ ಹೇಳಿದರು.
ನಮಗೆ ಸಂವಿಧಾನದ ಹೊರತು ಬಜರಂಗದಳ, ವಿ.ಎಚ್.ಪಿ ಮುಖ್ಯವಲ್ಲ. ಅದಕ್ಕೆ ಪ್ರೇರಣಾಶಕ್ತಿಯಾಗಿ ರಾಮಾಯಣ ಇದೆ. ರಾಮಾಯಣದಲ್ಲಿ ನಮ್ಮ ಕಸುಬು ಬದುಕು ನಡವಳಿಕೆ, ಪರಿಸರದ ಸಂರಕ್ಷಣೆ ಇದೆಲ್ಲಾ ವಿಚಾರಗಳನ್ನು ಒಳಗೊಂಡಿದೆ ಎಂದರು.ಬೇರೆಯವರು ವಾಲ್ಮೀಕಿ ಹೈಜಾಕ್ ಮಾಡುವ ಮೊದಲು ನಮ್ಮ ಮನೆಯಲ್ಲಿ ವಾಲ್ಮೀಕಿ ಪೋಟೋ ಇರಬೇಕು. ಸಮ ಸಮಾಜದ ನಿರ್ಮಾಣಕ್ಕೆ ಹೋರಾಟ ನಡೆಸಬೇಕು. ರಾಮಾಯಣದ ತತ್ತ್ವ, ಸಾರಾಂಶ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಯುವಕರು ಸುಳ್ಳು ಸುದ್ದಿಯನ್ನು ನಂಬಬಾರದು, ಸಂವಿಧಾನ ಪ.ಜಾತಿ, ಪ.ಪಂಗಡದವರಿಗೆ ನೀಡಿರುವ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ರಾಮಾಯಣ, ಮಹಾಭಾರತ ಮಹಾಕಾವ್ಯಗಳು ಎಲ್ಲಾ ಕಾಲಘಟ್ಟ, ಪೀಳಿಗೆಗೆ ಅನ್ವಯ. ರಾಮಾಯಣವು ಭಾರತೀಯರ ಜೀವನಚರಿತ್ರೆಯನ್ನು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯವಾಗಿದೆ. ಈ ಬಾರಿ ಮೈಸೂರಿನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿಯವರ ಪ್ರತಿಮೆಯನ್ನು ನಿರ್ಮಿಸಲು ಶಂಕು ಸ್ಥಾಪನೆ ಕಾರ್ಯಕ್ರಮವನ್ನು ನೆರವೇರಿಸಿರುವುದು ಸಂತಸವಾಗಿದೆ. ವಾಲ್ಮೀಕಿಯು ಕವಿಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಇಂದಿಗೂ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಸತ್ವಯುತವಾದ ಮತ್ತು ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿರುವಂತೆ ನಮ್ಮ ಸಮಸ್ಯೆಗಳ ಬೀಗದ ಕೈ ಇರುವುದು ರಾಜಕೀಯದಲ್ಲಿ ಎಂಬಂತೆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಇಂದು ಶೇ.7 ಜನರಿಗೆ 9 ಸಾವಿರ ಕೋಟಿಯನ್ನು ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಎಸ್ಸಿ, ಎಸ್ಟಿ, ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿ, ಶೋಷಿತ ಸಮಾಜವನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ನಮ್ಮ ಸಂವಿಧಾನ ಬಲಪಡಿಸುವ ಕಾರ್ಯ ನಮ್ಮ ಸರ್ಕಾರದಲ್ಲಿ ಆಗುತ್ತಿದೆ ಎಂದರು.ಇಂದು ವಾಲ್ಮೀಕಿ ರಾಮಾಯಣದ ಆಧಾರದ ಮೇಲೆ ವಿವಿಧ ಭಾಷೆಗಳಲ್ಲಿ ಕಾವ್ಯ, ನಾಟಕ, ಕಾದಂಬರಿ ಮತ್ತು ಕತೆಗಳನ್ನು ಅನೇಕರು ರಚಿಸಿದ್ದಾರೆ. ರಾಮಾಯಣದಂತಹ ಮಹಾಕಾವ್ಯ ಮತ್ತು ವಾಲ್ಮೀಕಿಯಂತಹ ಮಹಾಕವಿ ನಮಗೆ ದೊರೆತಿದ್ದು ಭುವನದ ಭಾಗ್ಯ. ಹಾಗಾಗಿ, ಮನುಷ್ಯ ಅಳಿದರೂ ಈ ಮಹಾಕಾವ್ಯಗಳು ಅಳಿಯುವುದಿಲ್ಲ ಎಂದು ತಿಳಿಸಿದರು.
ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಬೇಡ ಕುಲಕ್ಕೆ ಸೇರಿದ ಮಹರ್ಷಿ ವಾಲ್ಮೀಕಿ ರಾಮಾಯಣ ಎಂಬ ಉತ್ಕೃಷ್ಟ ಮಹಾಕಾವ್ಯವನ್ನೇ ಬರೆದರು. ರಾಮನಾಮ ಉಚ್ಚಾರಣೆಯೇ ಬಾರದ ವಾಲ್ಮೀಕಿಯವರು ರಾಮಾಯಣವನ್ನೇ ರಚಿಸಿದರು. ರಾಮಾಯಣದಲ್ಲಿ 24,253 ಶ್ಲೋಕಗಳಿದ್ದು ಏಳು ಕಾಂಡಗಳಿರುವ ಈ ಕೃತಿಯು ಇಡೀ ಪ್ರಪಂಚಕ್ಕೆ ಅನ್ವಯವಾಗುತ್ತದೆ. ಸಂಸ್ಕೃತದಲ್ಲಿ ರಚಿಸಲಾಗಿರುವ ರಾಮಾಯಣ ಮಹಾಕಾವ್ಯವು ಅನೇಕ ಶ್ಲೋಕಗಳನ್ನು ಹೊಂದಿದೆ ಎಂದು ಶ್ರೀ ಮಹರ್ಷಿ ವಾಲ್ಮೀಕಿಯವರ ಜೀವನ ವೃತ್ತಾಂತವನ್ನು ತಿಳಿಸಿದರು.ಎಲ್ಲಿವರೆಗೆ ಭೂಮಿಯಲ್ಲಿ ಪರ್ವತ, ಸಮುದ್ರ, ನದಿಗಳಿರುತ್ತವೆಯೋ ಅಲ್ಲಿವರೆಗೂ ರಾಮಾಯಣ ಕಾವ್ಯ ಲೋಕದಲ್ಲಿ ಪ್ರಚಲಿತದಲ್ಲಿರುತ್ತದೆ. ಆದ್ದರಿಂದ ಸೂರ್ಯಚಂದ್ರರಿರುವರೆಗೂ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಅಮರಕಾವ್ಯ ಆಗಿರುತ್ತದೆ ಮತ್ತು ಇದನ್ನು ರಚಿಸಿರುವ ಮಹರ್ಷಿ ವಾಲ್ಮೀಕಿಯು ಅಮರಕವಿ ಆಗಿರುತ್ತಾರೆ ಎಂದರು.
ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಈ ಬಾರಿ ಮೈಸೂರಿನಲ್ಲಿ ವಾಲ್ಮೀಕಿ ಅವರ ಪ್ರತಿಮೆಗೆ ಶಂಕು ಸ್ಥಾಪನೆ ಮಾಡಿರುವುದು ನಮ್ಮ ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದರು. ನಮ್ಮ ಜೀವನದಲ್ಲಿ ಪ್ರತಿಯೊಬ್ಬರೂ ಕೂಡ ಪರೋಕ್ಷವಾಗಿ ವಾಲ್ಮೀಕಿ ಅವರ ತತ್ತ್ವಾದರ್ಶಗಳನ್ನು ಅನುಸರಿಸುತ್ತಿದ್ದೇವೆ. ವಾಲ್ಮೀಕಿ ಅವರು ನೀಡಿರುವ ರಾಮಾಯಣ ಮಹಾಕಾವ್ಯದ ಸಾರಾಂಶವನ್ನು ಪ್ರತಿಯೊಬ್ಬರೂ ತಿಳಿದುಕೊಂಡು ಅವರ ಸನ್ಮಾರ್ಗಗಳನ್ನು ಅನುಸರಿಸಬೇಕು ಎಂದು ಅವರು ಹೇಳಿದರು.ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದರು. ನಗರ ಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ವಿಷ್ಣುವರ್ಧನ ಮೊದಲಾದವರು ಇದ್ದರು.