ಕನ್ನಡಪ್ರಭ ವಾರ್ತೆ ಕಾರಟಗಿ
ಶಿಕ್ಷಣ, ಸುಧಾರಣೆ-ಅಭಿವೃದ್ಧಿಯ ಮಂತ್ರವನ್ನು ಜಾರಿಗೆ ತಂದು ಭರತ ಭೂಮಿಯಲ್ಲಿ ಸಾಮಾಜಿಕ ಸುಧಾರಣೆ ಸಾರಿದ, ವಿಶ್ವ ಮೆಚ್ಚುವ ಅತ್ಯಂತ ಶ್ರೇಷ್ಠ ಗ್ರಂಥ ಸಂವಿಧಾನವನ್ನು ದೇಶಕ್ಕೆ ನೀಡಿದ ಧೀಮಂತ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ್ ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಹೇಳಿದರು.ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಭಾನುವಾರ ನಡೆದ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದರು.
ಸಮಾಜ ಸುಧಾರಕ, ಶಿಕ್ಷಣ ತಜ್ಞ, ಅರ್ಥಶಾಸ್ತ್ರಜ್ಞ, ಕಾನೂನು ತಜ್ಞರಾಗಿ ದೇಶಕ್ಕೆ ವಿಶ್ವವೇ ಮೆಚ್ಚುವಂತಹ ಸಂವಿಧಾನ ನೀಡಿದರು. ನಮ್ಮ ರಾಷ್ಟ್ರ ಕಂಡ ಶ್ರೇಷ್ಠ ನಾಯಕರಲ್ಲಿ ಅಂಬೇಡ್ಕರ್ ಒಬ್ಬರಾಗಿದ್ದಾರೆ. ಅವರ ವಿಚಾರಧಾರೆಗಳು, ತತ್ವಾದರ್ಶಗಳು ಸುಂದರ ಸಮಾಜ ನಿರ್ಮಾಣಕ್ಕೆ ಇಂದಿಗೂ ಪ್ರಸ್ತುತವಾಗಿವೆ. ಭಾರತೀಯರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನ ರಚನೆಯ ಹಿಂದಿನ ಬಹುದೊಡ್ಡ ಶಕ್ತಿಯೆಂದರೆ ಅದು ಅಂಬೇಡ್ಕರ್. ಅಂಥಹ ಮಹಾನ್ ವ್ಯಕ್ತಿ ನಮ್ಮ ನಡುವೆ ಆಗಿ ಹೋಗಿದ್ದಾರೆ ಎನ್ನುವುದೇ ಶತಕೋಟಿ ಭಾರತೀಯರಿಗೆ ಸ್ಪೂರ್ತಿಯ ವಿಚಾರ ಎಂದರು.ನಂತರ ಉಪತಹಸೀಲ್ದಾರ ವಿಶ್ವೇಶ್ವರಯ್ಯಸ್ವಾಮಿ ಸಾಲಿಮಠ ಮಾತನಾಡಿ, ಸಮಾಜದ ಎಲ್ಲ ಜನರ ಸಮಾನತೆಗಾಗಿ ಜಾತಿ ಅಡೆತಡೆಗಳನ್ನು ಕೆಡವಲು, ದೀನ ದಲಿತರಿಗೆ ಶಿಕ್ಷಣ ತಲುಪುವಂತೆ ಮಾಡಲು ಅವಿರತ ಶ್ರಮಿಸಿದರು ಎಂದರು.
ಇದಕ್ಕೂ ಮುನ್ನ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆಗೈಯಲಾಯಿತು.ಈ ಸಂದರ್ಭದಲ್ಲಿ ಕಿರಿಯ ಅಭಿಯಂತರ ಮಂಜುನಾಥ, ನಾಗರಾಜ ತಳವಾರ, ಅಕ್ಷತಾ ಕಮ್ಮಾರ್, ಮಲ್ಲಮ್ಮ, ಚನ್ನಬಸವಸ್ವಾಮಿ, ನಾಗೇಶ್, ಪವನ್ ಕುಮಾರ್, ರಾಮಣ್ಣ, ಹನುಮೇಶ ವಿವಿಧ ಸಂಘಟನೆಗಳ ಯಲ್ಲಪ್ಪ ಕಟ್ಟಿಮನಿ, ಮೌನೇಶ ಜಮದಗ್ನಿ, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇತರರಿದ್ದರು.
ವಿದ್ಯಾ ಸಂಸ್ಥೆ: ಇಲ್ಲಿನ ಶರಣಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.ಶಾಲೆಯ ಮುಖ್ಯಗುರು ಅಮರೇಶ ಪಾಟೀಲ್ ಮಾತನಾಡಿ, ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಗ್ರಂಥ ಎಂದು ಹೆಗ್ಗಳಿಕೆ ಪಡೆದಿರುವ ನಮ್ಮ ಸಂವಿಧಾನವನ್ನುಅಂಬೇಡ್ಕರ್ ರಚಿಸಿದ್ದಾರೆ. ಅವರೊಬ್ಬ ವೈಜ್ಞಾನಿಕ ಚಿಂತಕ, ರಾಜಕೀಯ ಮುತ್ಸದ್ದಿ, ಕಾನೂನು ಮತ್ತು ಆರ್ಥಿಕ ತಜ್ಞರಾಗಿದ್ದಾರೆ. ಅವರು ತೋರಿದ ಸಾಮಾಜಿಕ ಮಾರ್ಗದರ್ಶನಗಳು ಇಂದು ಆಧುನಿಕ ಭಾರತ ನಿರ್ಮಾಣದಲ್ಲಿ ಸಹಕಾರಿಯಾಗಿವೆ. ಸಾಮಾಜಿಕ ತಾರತಮ್ಯ ನಿವಾರಣೆಗೆ ಶಿಕ್ಷಣವೇ ಉತ್ತರ ಎಂಬುದು ಅವರ ವೇದವಾಕ್ಯವಾಗಿತ್ತು ಎಂದರು.
ಈ ವೇಳೆ ವೀರೇಶ ಮ್ಯಾಗೇರಿ, ಮಹಾಂತೇಶ ಗದ್ದಿ, ಎಂ.ಡಿ. ಇಬ್ರಾಹಿಂ, ನಾಗಭೂಷಣ್, ಜಗದೀಶ ಭಜಂತ್ರಿ, ಮೆಹಬೂಬ್ ಕಿಲ್ಲೇದಾರ, ಮಲ್ಲಿಕಾರ್ಜುನ ಹಿಂದುಪುರ ಇದ್ದರು.