ರಾಣಿಬೆನ್ನೂರು: ಸಂವಿಧಾನವೇ ಕಾನೂನುಗಳ ಮೂಲ ಗ್ರಂಥವಾಗಿದ್ದು, ಇದರ ಮೂಲಕವೇ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಕೆಲಸ ಮಾಡಬೇಕು ಎಂದು ಹೇಳಿದೆ. ಅದರ ಪ್ರಕಾರವೇ ಎಲ್ಲರೂ ಕರ್ತವ್ಯ ಸಲ್ಲಿಸುತ್ತಿದ್ದಾರೆ ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ವೈ.ಎಲ್. ಲಾಡಖಾನ್ ಹೇಳಿದರು.
ನಗರದ ತಾಪಂ ಸಭಾಭವನದಲ್ಲಿ ಗುರುವಾರ ತಾಲೂಕು ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತ, ನಗರಸಭೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ತಾಪಂ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಮತ್ತು ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ಪ್ರಧಾನವಾದ ನಮ್ಮ ರಾಷ್ಟ್ರದಲ್ಲಿ ಬಡತನ, ಅನಿಷ್ಟ ಪದ್ಧತಿಗಳಿವೆ. ಅವುಗಳನ್ನು ಹೋಗಲಾಡಿಸಲು ಶಿಕ್ಷಣ ಬಹಳ ಮುಖ್ಯವಾಗಿದ್ದು, ಎಲ್ಲರೂ ಶಿಕ್ಷಣ ಪಡೆದು ಕಾನೂನು ತಿಳಿದುಕೊಳ್ಳಬೇಕು ಎಂದು ಹೇಳಿದರು. ಬಾಲ್ಯದಿಂದಲೇ ಶಿಕ್ಷಣದ ಜತೆ ಕಾನೂನು ಅರಿವು ಮೂಡಿಸಬೇಕು. ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ನ್ಯಾಯಾಲಯಗಳಿವೆ. ತಮಗೆ ಅನ್ಯಾಯವಾಗಿದೆ ಎಂದಾದಲ್ಲಿ ಅವರು ನ್ಯಾಯಾಲಯದ ಮೂಲಕ ನ್ಯಾಯ ಪಡೆದುಕೊಳ್ಳಬೇಕು. ಸರ್ಕಾರ ರಚನೆ ಮಾಡುವ ಶಕ್ತಿ ಮತದಾರರ ಕೈಯಲ್ಲಿದ್ದು ಒಳ್ಳೆಯ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು. ಜಾತಿ, ಧರ್ಮ, ಜನಾಂಗ ಪರಿಗಣಿಸದೆ ನಾವೆಲ್ಲರೂ ಭಾರತೀಯರು ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮತ ನೀಡಬೇಕು. 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡಬೇಕು. ಬೇರೆ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ಸಿರಿ ಸಂಪತ್ತು ಹಾಗೂ ನೈಸರ್ಗಿಕ ಸಂಪನ್ಮೂಲಗಳಷ್ಟು ಯಾವ ದೇಶದಲ್ಲೂ ಇಲ್ಲ. ಅವುಗಳನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ ಜಗತ್ತಿನಲ್ಲಿ ನಮ್ಮ ದೇಶ ನಂ. 1 ಆಗಲಿದೆ ಎಂದರು.ತಹಸೀಲ್ದಾರ್ ಎಚ್.ಎನ್. ಶಿರಹಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಮತದಾನ ಮಾಡುವ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ನಗರಸಭೆ ಪೌರಾಯುಕ್ತ ನಿಂಗಪ್ಪ ಕುಮ್ಮಣ್ಣನವರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುಮಲತಾ ಎಸ್.ಪಿ., ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ, ಡಿವೈಎಸ್‌ಪಿ ಡಾ. ಗಿರೀಶ ಬೋಜಣ್ಣನವರ, ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಬುರಡಿಕಟ್ಟಿ, ಉಪಾಧ್ಯಕ್ಷ ಲಕ್ಷ್ಮಣ ಕೆಂಗೊಡ, ಎನ್.ಎಂ. ಡೊಂಬರ, ಕಾರ್ಯದರ್ಶಿ ಟಿ.ಎಸ್. ಜಂಗರಡ್ಡರ ಮತ್ತಿತರರಿದ್ದರು.