ಆಂಜನೇಯ ಕೇರಿಯಲ್ಲಿ ಶೀಘ್ರ ಬಾಕ್ಸ್‌ ಚರಂಡಿ ನಿರ್ಮಿಸಿ

KannadaprabhaNewsNetwork | Updated : Jul 03 2024, 12:19 AM IST

ಸಾರಾಂಶ

ಹೊನ್ನಾಳಿ ತಾಲೂಕಿನ ಹುರುಳೇಹಳ್ಳಿ ಗ್ರಾಮದ ಆಂಜನೇಯ ಕೇರಿ ರಸ್ತೆಯಲ್ಲಿ ನಿಂತಿರುವ ಮಳೆಯ ನೀರು ಹೊರಗೆ ಹರಿದುಹೋಗಲು ಗ್ರಾಮ ಪಂಚಾಯಿತಿ ಆಡಳಿತ ತುರ್ತಾಗಿ ಬಾಕ್ಸ್ ಚರಂಡಿಗಳ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಸೋಮವಾರ ಸ್ಥಳೀಯ ನಿವಾಸಿಗಳು ಕೊಳಚೆ ನೀರಿನಲ್ಲಿಯೇ ನಿಂತು ಪ್ರತಿಭಟನೆ ನಡೆಸಿದ್ದಾರೆ.

- ಹುರುಳೇಹಳ್ಳಿಯಲ್ಲಿ ಕೊಳಚೆ ನೀರಿನಲ್ಲೇ ನಿಂತು ಗ್ರಾಮಸ್ಥರ ಪ್ರತಿಭಟನೆ । ರಸ್ತೆಗೆ ಮಣ್ಣು ಹಾಕಿ ಅವಾಂತರ ಸೃಷ್ಟಿಗೆ ಅಸಮಾಧಾನ - - - ಕನ್ನಡಪ್ರಭ ವಾರ್ತೆ, ಹೊನ್ನಾಳಿ

ತಾಲೂಕಿನ ಹುರುಳೇಹಳ್ಳಿ ಗ್ರಾಮದ ಆಂಜನೇಯ ಕೇರಿ ರಸ್ತೆಯಲ್ಲಿ ನಿಂತಿರುವ ಮಳೆಯ ನೀರು ಹೊರಗೆ ಹರಿದುಹೋಗಲು ಗ್ರಾಮ ಪಂಚಾಯಿತಿ ಆಡಳಿತ ತುರ್ತಾಗಿ ಬಾಕ್ಸ್ ಚರಂಡಿಗಳ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಸೋಮವಾರ ಸ್ಥಳೀಯ ನಿವಾಸಿಗಳು ಕೊಳಚೆ ನೀರಿನಲ್ಲಿಯೇ ನಿಂತು ಪ್ರತಿಭಟನೆ ನಡೆಸಿದರು.

4 ವರ್ಷಗಳ ಹಿಂದೆ ಈ ಕೇರಿಗೆ ಸಿಮೆಂಟ್ ರಸ್ತೆ ನಿರ್ಮಿಸುವಾಗ ಚರಂಡಿಗಳ ನಿರ್ಮಿಸಿಲ್ಲ. ಇದರಿಂದಾಗಿ ಮಳೆಯ ನೀರು, ಸಿಮೆಂಟ್ ರಸ್ತೆ ಮೇಲೆ ಹರಿಯುತ್ತ ಖಾಸಗಿ ಮಾಲೀಕರ ಜಮೀನಿನ ಮೂಲಕ ಸಾಗಿ, ನದಿ ಸೇರುತ್ತಿತ್ತು. ಕಳೆದ ಬಾರಿ ಮಳೆ ಜಾಸ್ತಿಯಾಗಿ ಹದಡಿ ಮಂಜಪ್ಪ ಅವರ ತೋಟದ ಜಮೀನು ಮನೆಯ ಸುತ್ತಲೂ ನೀರು ನಿಂತಿದೆ. ಇದರಿಂದಾಗಿ ತೋಟದ ಬೆಳೆಗೆ ಹಾನಿಯಾಗಿದೆ. ಪರಿಣಾಮ ಈ ಬಾರಿ ಜಮೀನಿನ ಮಾಲೀಕರು ರಸ್ತೆಯ ನೀರು ಜಮೀನಿಗೆ ಬಾರದಂತೆ ರಸ್ತೆಗೆ ಮಣ್ಣು ಹಾಕಿ ತಡೆಕಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೀರಿಗೆ ಒಡ್ಡು ಕಟ್ಟಿದ ಪರಿಣಾಮ ರಸ್ತೆಯ ಮೇಲೆ ಹರಿಯುವ ಮಳೆನೀರು ಮನೆಗಳಿಗೆ ನುಗ್ಗುತ್ತಿದೆ. ಕೆಲವು ಮನೆಗಳು ಕುಸಿಯುವ ಆತಂಕದಲ್ಲಿವೆ. ಪ್ರತಿ ಮನೆಯವರು ಸಿಮೆಂಟ್ ರಸ್ತೆಗೆ ಎತ್ತರವಾಗಿ ಮಣ್ಣನ್ನು ಸುರಿದು ಅಡ್ಡಕಟ್ಟೆ ಹಾಕಿದ್ದಾರೆ. ಇದರಿಂದಾಗಿ ತಿಂಗಳಿನಿಂದ ನೀರು ರಸ್ತೆಯ ಮೇಲೆಯೇ ನಿಂತು ವಾಸನೆ ಬರುತ್ತಿದೆ. ಸೊಳ್ಳೆಗಳ ಕಾಟವೂ ವಿಪರೀತವಾಗಿದೆ. ಮಕ್ಕಳು, ವೃದ್ಧರು ಕೆಸರು ರಸ್ತೆಯಲ್ಲೇ ನಡೆದಾಡಬೇಕಾದ ದುಸ್ಥಿತಿ ಇದೆ. ಸಾಂಕ್ರಾಮಿಕ ರೋಗಗಳ ಆತಂಕ ಕೇರಿಯ ಜನರಿಗೆ ಕಾಡುತ್ತಿದೆ ಎಂದು ದೂರಿದರು.

- - -

ಕೋಟ್ಸ್‌

ಗ್ರಾಮ ಪಂಚಾಯಿತಿಯಲ್ಲಿ ಈಗಾಗಲೇ ಈ ಸಮಸ್ಯೆ ಪರಿಹಾರಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಚರಂಡಿ ನಿರ್ಮಾಣಕ್ಕೆ ಸ್ಥಳೀಯರ ಸಂಪೂರ್ಣ ಸಹಕಾರ ಇಲ್ಲವಾಗಿದೆ. ಆದ್ದರಿಂದ ಜನರಿಗೆ ಸಮಸ್ಯೆಯಾಗಿದೆ

- ರಾಜಪ್ಪ, ಗ್ರಾ ಪಂ ಸದಸ್ಯ

ಮಳೆನೀರು ಚರಂಡಿ ಮೂಲಕ ಸರಾಗವಾಗಿ ಹರಿದು ಮುಂದೆ ಹೋಗಲು ಚರಂಡಿ ನಿರ್ಮಿಸಲು ಸರ್ಕಾರಿ ಜಾಗ ಇಲ್ಲ. ಕೇರಿಯ ಕೊನೆಯ ಭಾಗದಲ್ಲಿ ಖಾಸಗಿಯವರ ಜಮೀನು ಇದೆ. ಇದರಿಂದಾಗಿ ನೀರು ಮುಂದೆ ಹೋಗಲು ಖಾಸಗಿಯವರು ಸ್ಥಳಾವಕಾಶ ಮಾಡಿಕೊಟ್ಟರೆ ಗ್ರಾ.ಪಂ. ವತಿಯಿಂದ ಜರೂರು ಕೆಲಸ ಮಾಡಿಲಾಗುವುದು. ಈ ವಿಷಯದ ಬಗ್ಗೆ ಶೀಘ್ರ ಗ್ರಾಮಸಭೆ ಕರೆದು ಸ್ಥಳೀಯರ ಸಮ್ಮುಖ ಚರ್ಚಿಸಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು

- ಅಪ್ಪಲ್ ರಾಜು, ಅಧ್ಯಕ್ಷ, ಗ್ರಾಪಂ

- - -

-1ಎಚ್.ಎಲ್.ಐ2:

ಹೊನ್ನಾಳಿ ತಾಲೂಕು ಹುರುಳೇಹಳ್ಳಿ ಗ್ರಾಮದ ಜನರು ಬಾಕ್ಸ್ ಚರಂಡಿ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಕೊಳೆಚೆ ನೀರಲ್ಲಿ ನಿಂತು ಪ್ರತಿಭಟಿಸಿದರು.

Share this article