ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಜಲಪುರಿ ಪೊಲೀಸ್ ಕ್ವಾಟ್ರಸ್ ನಲ್ಲಿ ನಿರ್ಮಿಸಲಾಗಿರುವ ಪೊಲೀಸ್ ಆರೋಗ್ಯ ಕೇಂದ್ರದ ಹೊಸ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಉದ್ಘಾಟಿಸಿದರು.ದಶಕಗಳಿಂದ ಇದೇ ಸ್ಥಳದಲ್ಲಿದ್ದ ಪೊಲೀಸ್ ವಸತಿ ಗೃಹದಲ್ಲಿ ಮೆಡಿಕಲ್ ಇನ್ಸ್ ಪೆಕ್ಷನ್ ರೂಂ ಫಾರ್ ಪೊಲೀಸ್ ಕೇಂದ್ರವಾಗಿದ್ದನ್ನು 1.7 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಿ ಪೊಲೀಸ್ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದೆ.
6 ಹಾಸಿಗೆ ಸಾಮರ್ಥ್ಯದ ಈ ಕೇಂದ್ರವು ಕೇವಲ ಹೊರ ರೋಗಿಗಳ ಚಿಕಿತ್ಸಾ ಕೇಂದ್ರವಾಗಿರದೇ ಡೇ ಕೇರ್ ಸೆಂಟರ್ ಆಗಿ ಕಾರ್ಯ ನಿರ್ವಹಿಸಲಿದೆ. ಇದರೊಂದಿಗೆ ಪೊಲೀಸರಿಗೆ ಹೆಚ್ಚುವರಿ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. ದೈಹಿಕ ಆರೋಗ್ಯ ಚಿಕಿತ್ಸೆಯೊಂದಿಗೆ ಮಾನಸಿಕ ಆರೋಗ್ಯ ಸುಧಾರಣೆಗೂ ಒತ್ತು ನೀಡಲಾಗಿದ್ದು, ದೈಹಿಕ ಒತ್ತಡದ ನಿವಾರಣೆಗೆ ಫಿಸಿಯೋಥೆರೆಪಿ ಸೌಲಭ್ಯವನ್ನು ವಿಶೇಷವಾಗಿ ಕಲ್ಪಿಸಲಾಗಿದೆ. ಈ ಕೇಂದ್ರದಲ್ಲಿ ಮೈಸೂರು ನಗರ ಸೇರಿದಂತೆ ಜಿಲ್ಲೆಯ ಪೊಲೀಸರು ಮತ್ತು ಅವರ ಕುಟುಂಬದವರು ಆರೋಗ್ಯ ಸಂಬಂಧ ಚಿಕಿತ್ಸೆಯನ್ನು ಪಡೆಯಬಹುದು ಎಂದು ಪೊಲೀಸ್ ಆರೋಗ್ಯ ಕೇಂದ್ರದ ವೈದ್ಯ ಡಾ.ಜಿ. ವೆಂಕಟೇಶ್ ಬಾಬು ತಿಳಿಸಿದರು.ಪೊಲೀಸ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗೆ ಸೇವೆ ನೀಡುವ ಈ ಕೇಂದ್ರವು ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಸೇವೆ ಲಭ್ಯವಿರಲಿದೆ. ಕೇಂದ್ರದಲ್ಲಿ ಮೈನರ್ ಆಪರೇಷನ್ ಥಿಯೇಟರ್, ಏರ್ಮಜೆನ್ಸಿ ಕೇರ್, ಸರ್ಜಿಕಲ್ ಕೇರ್, ಲ್ಯಾಬೊರೇಟರಿಯೊಂದಿಗೆ ಪಿಸಿಯೋಥೆರಪಿ ಸೇವೆ, ಡಯಟ್ ಕನ್ಸಲ್ಟೆಂಟ್, ಮೆಡಿಕಲ್ ಕನ್ಸಲ್ಟೆಂಟ್ ಸೇವೆ ಇರಲಿದೆ.
ಸದ್ಯಕ್ಕೆ ಒಬ್ಬರು ವೈದ್ಯರು, ಫಾರ್ಮಾಸಿಸ್ಟ್, ನರ್ಸ್ ಇದ್ದು, ಹೆಚ್ಚುವರಿ ವೈದ್ಯರು ಮತ್ತು ಡಿ ಗ್ರೂಪ್ ಹುದ್ದೆ ಖಾಲಿ ಇದ್ದು, ಶೀಘ್ರದಲ್ಲಿಯೇ ನೇಮಕ ಮಾಡಿಕೊಳ್ಳಲಾಗುತ್ತಿದೆ.ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ತನ್ವೀರ್ ಸೇಠ್, ಕೆ. ಹರೀಶ್ ಗೌಡ, ಸಿ.ಎನ್. ಮಂಜೇಗೌಡ, ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ. ಪ್ರಕಾಶ್, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ದಕ್ಷಿಣ ವಲಯ ಡಿಐಜಿ ಅಮಿತ್ ಸಿಂಗ್, ಎಸ್ಪಿ ಸೀಮಾ ಲಾಟ್ಕರ್, ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿ ಮೊದಲಾದವರು ಇದ್ದರು.