ಕನ್ನಡಪ್ರಭ ವಾರ್ತೆ ಹಾಸನ
ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮತ್ತು ಕಟ್ಟಡ ಕಾರ್ಮಿಕರ ಸಂಚಾರಿ ಆರೋಗ್ಯ ಚಿಕಿತ್ಸಾಲಯಗಳನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ನಗರದ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿಗಳ ಕಚೇರಿ ಮುಂದೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಜಿಲ್ಲಾ ನೋಂದಾಯಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಎಚ್.ಟಿ. ರಾಮೇಗೌಡ ಮಾಧ್ಯಮದೊಂದಿಗೆ ಮಾತನಾಡಿ, ನಾಲ್ಕು ದಶಕಗಳ ನಿರಂತರ ಹೋರಾಟದ ಪ್ರತಿಫಲವಾಗಿ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನವೆಂಬರ್ ೨೦೦೬ರಲ್ಲಿ ಜಾರಿಗೆ ಬಂದಿದೆ. ಕಟ್ಟಡ ಕಾರ್ಮಿಕರ ಬೆವರ ಹನಿಯಿಂದ ಸಂಗ್ರಹವಾದ ಸೆಸ್ ೬೫೦ ಕೋಟಿ ಹಣವನ್ನು ಕಟ್ಟಡ ಕಾರ್ಮಿಕರ ಹಾಗೂ ಅವರ ಕುಟುಂಬದ ಕಲ್ಯಾಣಕ್ಕಾಗಿ ಮೀಸಲಾಗಿಡುವುದು ಸರ್ವೋಚ್ಚ ನ್ಯಾಯಾಲಯದ ಕಾನೂನಿನ ಆದೇಶದಂತೆ ಇದೆ. ಆದರೆ ಪ್ರಾಮಾಣಿಕವಾಗಿ ಸರ್ಕಾರಗಳು ಕಟ್ಟಡ ಕಾರ್ಮಿಕರ ಸರ್ವತೋಮುಖ ಅಭಿವೃದ್ಧಿಗೆ ಮೀಸಲು ಇಡಬೇಕು. ಆದರೆ ಕಳೆದ ಸರ್ಕಾರಗಳು ಕಾರ್ಮಿಕರಿಗೆ ಸಂಚಾರಿ ಕ್ಲಿನಿಕ್, ಉಚಿತ ಆರೋಗ್ಯ ತಪಾಸಣೆ ಶಿಬಿರ, ಲ್ಯಾಪ್‌ಟಾಪ್, ಪುಡ್‌ಕಿಟ್, ಟೂಲ್ಸ್ ಕಿಟ್, ನ್ಯೂಟ್ರಿಷನ್ ಕಿಟ್, ಟ್ಯಾಬ್ ಗಳು, ಸ್ಕೂಲ್ ಕಿಟ್ ಇನ್ನು ಹಲವಾರು ಅನವಶ್ಯಕ ಅನುಪಯುಕ್ತ ಯೋಜನೆಗಳ ಮುಖಾಂತರ ಹಣ ದುರುಪಯೋಗ ಮಾಡಿರುವುದು ಕಂಡು ಬಂದಿದೆ. ಈ ಹಣವು ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಾಗಿರುವ ಹಲವಾರು ಯೋಜನೆಗಳಾದ ಶೈಕ್ಷಣಿಕ ಧನಸಹಾಯ, ಮದುವೆ ಧನಸಹಾಯ, ಹೆರಿಗೆ ಭತ್ಯೆ, ಪ್ರಮುಖ ವೈದ್ಯಕೀಯ ಧನಸಹಾಯ, ಮರಣ ಪರಿಹಾರ ಭತ್ಯೆ, ಅಪಘಾತ ಪರಿಹಾರ ಸಹಾಯಧನ, ಪಿಂಚಣಿ ಸೌಲಭ್ಯ ಹಾಗೂ ಇತರೆ ಸೌಲಭ್ಯಗಳನ್ನು ಕೊಡುವ ಸಲುವಾಗಿತ್ತು. ಆದರೆ ಕಳೆದ ಸರ್ಕಾರ ಕೊಟ್ಟಂತಹ ಯೋಜನೆಗಳು ಸರಿಯಿಲ್ಲ, ಅವೈಜ್ಞಾನಿಕತೆಯಿಂದ ಕೂಡಿದ್ದು ಕಟ್ಟಡ ಕಾರ್ಮಿಕರಿಗೆ ನೇರವಾಗಿ ತಲುಪದೇ ಮಧ್ಯವರ್ತಿಗಳ ಪಾಲಾಗಿದೆ ಎಂದು ದೂರಿದರು. ನೈಜ ಕಾರ್ಮಿಕರಲ್ಲದವರು ನೋಂದಣಿಯಾಗಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಅಂತಹ ಅನರ್ಹರ ಸದಸ್ಯತ್ವವನ್ನು ರದ್ದುಗೊಳಿಸಿ, ನೈಜ ಫಲಾನುಭವಿಗಳಿಗೆ ದೊರೆಯುವ ಶೈಕ್ಷಣಿಕ ಧನಸಹಾಯ ಹಾಗೂ ಇನ್ನಿತರ ಸೌಲಭ್ಯಗಳನ್ನು ಹಿಂದಿನಂತೆ ಮುಂದುವರೆಸಿಕೊಂಡು ಹೋಗಬೇಕಾಗಿದೆ. ಶೈಕ್ಷಣಿಕ ಧನಸಹಾಯ ಕಡಿತಗೊಳಿಸದೆ ಈ ಹಿಂದಿನ ಧನಸಹಾಯದಂತೆ ರು. ೫೦೦೦ ದಿಂದ ೫೦೦೦೦ ಒಳಗೆ ನಿಗದಿಪಡಿಸಿ ಮಂಜೂರು ಮಾಡುವುದು. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಖುದ್ದು ಪರಿಶೀಲನೆ ಮಾಡಿ ಮಂಜೂರು ಮಾಡುವುದು ಸೂಕ್ತ. ಇದೆ ಮಾನದಂಡವನ್ನು ಮದುವೆ ಪ್ರಮುಖ ವೈದ್ಯಕೀಯ ಧನಸಹಾಯ, ಮರಣ ಪರಿಹಾರ, ಅಪಘಾತ ಪರಿಹಾರಗಳಿಗೆ ಯಥಾವತ್ತು ಉಳಿಸಿಕೊಂಡು ಹೋಗುವಂತೆ ಎಲ್ಲಾ ಸಂಘಟನೆಗಳು ಒತ್ತಾಯಿಸುತ್ತಿದ್ದೇವೆ ಎಂದರು.ಕಟ್ಟಡ ಕಾರ್ಮಿಕರಿಗೆ ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಎಲ್ಲಾ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಗುವ ಚಿಕಿತ್ಸೆ ಹಾಗೂ ಆರೋಗ್ಯ ಸೇವೆಗಳು ಆಧುನೀಕತೆಯಿಂದ ಕೂಡಿದ್ದು, ಎಲ್ಲಾ ಕಟ್ಟಡ ಕಾರ್ಮಿಕರ ಕುಟುಂಬ ವರ್ಗದವರಿಗೆ ಉಚಿತವಾಗಿ ಸಿಗುತ್ತಿವೆ. ಹೀಗಿರುವಲ್ಲಿ ಹೆಲ್ತ್ ಕ್ಯಾಂಪ್ ಹೆಸರಿನಲ್ಲಿ ಸಾಕಷ್ಟು ಹಣ ಮಧ್ಯವರ್ತಿಗಳ ಪಾಲಾಗಿದೆ. ಈ ರೀತಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣ ದುರುಪಯೋಗವಾಗುತ್ತಿದೆ. ಕಟ್ಟಡ ಕಾರ್ಮಿಕರ ಸಂಚಾರಿ ವೈದ್ಯಕೀಯ ಪರೀಕ್ಷೆಗಳು ಪ್ರಾಮಾಣಿಕವಾಗಿರುವುದಿಲ್ಲ. ತಪ್ಪು ಮಾಹಿತಿಯಿಂದ ಕೂಡಿದೆ. ಇದರ ವರದಿಗಳು ಕಾರ್ಮಿಕರಿಗೆ ೩-೪ ತಿಂಗಳಾದರೂ ತಲುಪುವುದಿಲ್ಲ. ಈ ಹಿಂದೆಯೇ ಈ ಬಗ್ಗೆ ಮೋಸ ಹೋಗಿರುವುದು ಸರಿಯಷ್ಟೆ. ಇನ್ನು ಮುಂದೆ ಹಣ ಲೂಟಿಯಾಗುವುದು ಬೇಕಾಗಿಲ್ಲ. ಅದೇ ಹಣವನ್ನು ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ವಿನಿಯೋಗಿಸಿ ಎಂದು ಕೋರಿದರು.
೨೦೨೨-೨೩ನೇ ಸಾಲಿನಲ್ಲಿ ಶೈಕ್ಷಣಿಕ ಧನಸಹಾಯ ಇಲ್ಲಿವರೆಗೆ ಬಿಡುಗಡೆಯಾಗಿರುವುದಿಲ್ಲ. ಯಾವುದೇ ಕಟ್ಟಡ ಕಾರ್ಮಿಕರ ಖಾತೆಗೆ ಹಣ ಜಮಾ ಆಗಿರುವುದಿಲ್ಲ. ಆದ್ದರಿಂದ ಹಿಂದಿನ ಶೈಕ್ಷಣಿಕ ಧನಸಹಾಯ ಮೊದಲು ಬಿಡುಗಡೆಗೊಳಿಸಿ, ಈ ಹಿಂದೆ ಜಾರಿಯಲ್ಲಿದ್ದ ಶೈಕ್ಷಣಿಕ ಧನಸಹಾಯದ ಮೊತ್ತವನ್ನು ಮಂಜೂರು ಮಾಡಬೇಕು. ಹೊಸ ಕಟ್ಟಡ ಕಾರ್ಮಿಕರ ನೋಂದಣಿ ಹಾಗೂ ನವೀಕರಣ, ಫಲಾನುಭವಿಗಳ ಸಹಾಯಧನದ ಅರ್ಜಿಗಳ ಅರ್ಜಿ ಸಲ್ಲಿಸಲು ತಂತ್ರಜ್ಞಾನ ಹಾಗೂ ನಮೂನೆಗಳನ್ನು ಸರಳೀಕರಣಗೊಳಿಸಿ, ಇಲಾಖೆಯವರೇ ಖುದ್ದು ಸ್ಥಳ ಪರಿಶೀಲನೆ ಮಾಡಿ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದಲ್ಲದೇ ಈ ವಿಷಯಗಳ ಬಗ್ಗೆ ಚರ್ಚಿಸಲು ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಸಂಘಟನೆಗಳ ಅಧ್ಯಕ್ಷರು ಸಭೆಯನ್ನು ಕರೆಯಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇವೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಾಯಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಎಚ್.ಟಿ. ರಾಮೇಗೌಡ, ರಾಜೀವ್, ಶಶಿಧರ್, ಎನ್. ಗಿರೀಶ್, ರಾಮಸ್ವಾಮಿ, ಮಂಜೇಗೌಡ, ಉದ್ಧೂರ್ ಮಂಜೇಗೌಡ, ಯೋಗೀಶ್, ಸಿ. ನಾಗೇಶ್, ಇತರರು ಉಪಸ್ಥಿತರಿದ್ದರು.