ರಾಜ್ಯದಲ್ಲಿ 2 ಸಾವಿರ ಮಾದರಿ ಪಬ್ಲಿಕ್ ಶಾಲೆ ನಿರ್ಮಾಣ

KannadaprabhaNewsNetwork |  
Published : Mar 16, 2024, 01:48 AM ISTUpdated : Mar 16, 2024, 01:49 AM IST
11.ರಾಮನಗರ ಜಿಪಂ ಸಭಾಂಗಣದಲ್ಲಿ ಮಾದರಿ  ಪಬ್ಲಿಕ್  ಶಾಲೆ ಗಳ ನಿರ್ಮಾಣ ಸಂಬಂಧ ಶುಕ್ರವಾರ ಜಿಪಂ ಸಭಾಂಗಣದಲ್ಲಿ ಸಭೆ ನಡೆಯಿತು. | Kannada Prabha

ಸಾರಾಂಶ

ರಾಮನಗರ: ಖಾಸಗಿ ಕಂಪನಿಗಳ ಸಿಎಸ್ ಆರ್ ನಿಧಿಯಿಂದ ರಾಜ್ಯದಲ್ಲಿ 2 ಸಾವಿರ ಮಾದರಿ ಪಬ್ಲಿಕ್ ಶಾಲೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಇದರ ಪ್ರಾಯೋಗಿಕವಾಗಿ ರಾಮನಗರ ಜಿಲ್ಲೆಯಲ್ಲಿ 20 ಶಾಲೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ರಾಮನಗರ: ಖಾಸಗಿ ಕಂಪನಿಗಳ ಸಿಎಸ್ ಆರ್ ನಿಧಿಯಿಂದ ರಾಜ್ಯದಲ್ಲಿ 2 ಸಾವಿರ ಮಾದರಿ ಪಬ್ಲಿಕ್ ಶಾಲೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಇದರ ಪ್ರಾಯೋಗಿಕವಾಗಿ ರಾಮನಗರ ಜಿಲ್ಲೆಯಲ್ಲಿ 20 ಶಾಲೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಖಾಸಗಿ ಕಂಪನಿಗಳೊಂದಿಗೆ ಜಿಲ್ಲೆಯಲ್ಲಿ ಮಾದರಿ ಪಬ್ಲಿಕ್ ಶಾಲೆಗಳನ್ನು ತೆರೆಯುವ ಸಂಬಂಧ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾದರಿ ಪಬ್ಲಿಕ್ ಶಾಲೆಗಳ ನಿರ್ಮಾಣ ದೇಶದಲ್ಲಿಯೇ ಒಂದು ಮಾದರಿ ಪರಿಕಲ್ಪನೆಯಾಗಿದೆ. ಇದನ್ನು ನಾವು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲೂ ಹೇಳಿದ್ದೆವು. ನಮ್ಮ ಬಜೆಟ್‌ನಲ್ಲೂ ಸಿಎಂ ಸಿದ್ದರಾಮಯ್ಯ ಶಾಲೆಗಳ ನಿರ್ಮಾಣದ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ 2 ಸಾವಿರ ಕೋಟಿ ವೆಚ್ಚದಲ್ಲಿ ಒಟ್ಟು 2 ಸಾವಿರ ಮಾದರಿ ಪಬ್ಲಿಕ್ ಶಾಲೆಗಳ ನಿರ್ಮಾಣದ ಗುರಿ ಹೊಂದಲಾಗಿದೆ ಎಂದರು.

ರಾಜ್ಯದಲ್ಲಿ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಹಳ್ಳಿಗಳಿಂದ ಬೆಂಗಳೂರು ಹಾಗೂ ಇತರೆ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ನಮ್ಮ ಸರ್ಕಾರ ಮಾದರಿ ಪಬ್ಲಿಕ್ ಶಾಲೆಗಳ ನಿರ್ಮಾಣಕ್ಕೆ ಕಾರ್ಯಕ್ರಮ ರೂಪಿಸಿದೆ. ಇದಕ್ಕಾಗಿ ಉಪ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ 5 ಜನ ಸಚಿವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ.

ಈ ಶಾಲೆಗಳ ನಿರ್ಮಾಣಕ್ಕೆ ಸರ್ಕಾರದ ಹಣವನ್ನು ಬಳಸದೇ, ಸಿಎಸ್ಆರ್ ನಿಧಿಯಿಂದ ನಿರ್ಮಿಸಲಾಗುತ್ತಿದೆ. ಪ್ರತಿ ಶಾಲೆಗೆ 7ರಿಂದ 10 ಕೋಟಿ ವೆಚ್ಚ ಮಾಡಲಾಗುವುದು. ಈ ಶಾಲೆಯಲ್ಲಿ 800ರಿಂದ 1200 ಮಕ್ಕಳು ವ್ಯಾಸಂಗ ಮಾಡಬಹುದು. ಈ ಶಾಲೆಗಳು ಎಲ್ಲೆಲ್ಲಿ ನಿರ್ಮಾಣವಾಗಲಿದೆ ಎಂಬ ಪಟ್ಟಿಯನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ ಎಂದರು.

ದೊಡ್ಡ ದೊಡ್ಡ ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆ ಚರ್ಚಿಸಿದ್ದು ಅವರು ಬೋಧಕ ಸಿಬ್ಬಂದಿ ನೀಡಲಿದ್ದಾರೆ. ನಾನು 3 ಶಾಲೆಗಳನ್ನು ನಡೆಸುತ್ತಿದ್ದು, ಅವುಗಳ ಮೂಲಕ ನಾನೂ ಮೂರು ಪಬ್ಲಿಕ್ ಶಾಲೆಗಳ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಕೊರತೆ ಇರುವ ಶಿಕ್ಷಕರ ನೇಮಕಾತಿ ಮಾಡಿ ಅವರಿಗೆ ವೇತನ ನೀಡಲಾಗುವುದು. ಆ ಮೂಲಕ ಸರ್ಕಾರಿ ಶಾಲೆಗಳಲ್ಲೂ ಖಾಸಗಿ ಶಾಲೆಗಳಲ್ಲಿನ ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದರು.

ಮಾದರಿ ಪಬ್ಲಿಕ್ ಶಾಲೆಗಳಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆ ಮಾಧ್ಯಮ, ಖಾಸಗಿ ಶಾಲೆಗಳ ಶಿಕ್ಷಕರಿಂದ ಮಾದರಿ ಪಬ್ಲಿಕ್ ಶಾಲೆ ಶಿಕ್ಷಕರಿಗೆ ತರಬೇತಿ, ಸ್ಮಾರ್ಟ್ ಕ್ಲಾಸ್, ಡಿಜಿಟಲ್ ಗ್ರಂಥಾಲಯ, ಇಂಟರ್ ನೆಟ್, ಆಧುನಿಕ ಪ್ರಯೋಗಾಲಯಗಳು, ಕಲೆ ಮತ್ತು ಸಂಗೀತ ತರಬೇತಿ, ಕ್ರೀಡೆ , ಊಟದ ಕೊಠಡಿ , ಶೌಚಾಲಯ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಹೊಂದಿರುತ್ತದೆ. ಈ ಶಾಲೆಗಳು ಎರಡರಿಂದ ಮೂರು ಪಂಚಾಯಿತಿಗಳು ಸೇರಿ ಒಂದು ಮಾದರಿ ಪಬ್ಲಿಕ್ ಶಾಲೆಯನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

ಈ ಶಾಲೆಗಳು ಸರ್ಕಾರಿ ಶಾಲೆಗಳೇ ಆಗಿದ್ದು, ಸರ್ಕಾರಿ ಆಡಳಿತ ಮಂಡಳಿಗಳೇ ಶಾಲೆಗಳನ್ನು ನಿರ್ವಹಣೆ ಮಾಡಲಿವೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವುದು. ನಗರದಲ್ಲಿ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ವರ್ಷಕ್ಕೆ 80 ಸಾವಿರದಿಂದ 1.50 ಲಕ್ಷದವೆರಗೂ ಶುಲ್ಕ ಪಾವತಿಸಬೇಕಿದೆ. ಗ್ರಾಮೀಣ ಮಕ್ಕಳಿಗೆ ಇಷ್ಟು ಶುಲ್ಕ ಪಾವತಿ ಮಾಡಲು ಆಗುವುದಿಲ್ಲ. ಹೀಗಾಗಿ ಸರ್ಕಾರ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ತೀರ್ಮಾನಿಸಿದೆ ಎಂದರು.

ಮೊದಲ ಹಂತದಲ್ಲಿ ರಾಮನಗರ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಐದು ಶಾಲೆಗಳ ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಂಡಿದ್ದೇವೆ. ಈ ಶಾಲೆಗಳ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದ್ದು, ಸಿಎಸ್ಆರ್ ಹಣ ಸರ್ಕಾರ ಪಡೆಯುವುದಿಲ್ಲ. ಖಾಸಗಿ ಸಂಸ್ಥೆಗಳಿಗೆ ಜಾಗ ತೋರಿಸುತ್ತೇವೆ. ಅವರು ಶಾಲೆ ಕಟ್ಟಿಕೊಡುತ್ತಾರೆ. ಇನ್ನು ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ತರಬೇತಿ ನೀಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಈ ಕಾರ್ಯಕ್ರಮ ಮಾಡಲಾಗಿದೆ ಎಂದು ಶಿವಕುಮಾರ್ ಹೇಳಿದರು.

ಮಾದರಿ ಶಾಲೆಗಳನ್ನು ನಿರ್ಮಿಸಲು ನಾನು ನಮ್ಮ ಜಿಲ್ಲೆಯ ಉದ್ಯಮಿಗಳೊಂದಿಗೆ ಚರ್ಚಸಿದ್ದೇನೆ. ಉದ್ಯಮಿಗಳು ಇದಕ್ಕೆ ಸಹಕಾರ ನೀಡಿದ್ದಾರೆ. ಇನ್ನು ಅನೇಕರು ಮುಂದೆ ಬಂದಿದ್ದಾರೆ. ಕಂಪನಿಗಳು ಕಟ್ಟಡ ನಿರ್ಮಿಸಿದರೆ ಸರ್ಕಾರ ಮತ್ತು ಖಾಸಗಿ ಆಡಳಿತ ಮಂಡಳಿಗಳು ಅಂತಹ ಶಾಲೆಗಳ ಜಂಟಿ ಮಾಲೀಕರಾಗಿರುತ್ತಾರೆ. ಸರ್ಕಾರಿ ಶಾಲೆಯ ಮಾದರಿಯಲ್ಲಿಯೇ ವಿದ್ಯಾರ್ಥಿಗಳ ಶುಲ್ಕ ನಿಗದಿಯಾಗಲಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಎಚ್.ಸಿ. ಬಾಲಕೃಷ್ಣ, ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯರಾದ ರವಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಮನಗರ ಜಿಲ್ಲೆಯ ಅಧ್ಯಕ್ಷ ಕೆ.ರಾಜು, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಎಸ್ಪಿ ಕಾರ್ತಿಕ್ ರೆಡ್ಡಿ, ಎಡಿಸಿ ಶಿವಾನಂದ ಮೂರ್ತಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕೋಟ್ ...........

ಕನಕಪುರದಲ್ಲಿ ನಮ್ಮ ಕುಟುಂಬದಿಂದ ಇಪ್ಪತ್ತು ಎಕರೆ ಶಾಲೆಗಳಿಗಾಗಿ ಬರೆದುಕೊಟ್ಟಿದ್ದೇವೆ. ಇಲ್ಲಿ ಸರ್ಕಾರದ ಹಣ ಇಲ್ಲ. ಸಿಎಸ್‌ಆರ್ ನಿಧಿಯಡಿಯಲ್ಲಿಯೇ ಕೆಲಸ ನಡೆಯಲಿದೆ. ಒಂದು ಶಾಲೆಗೆ 10 ಕೋಟಿ ಹೂಡಿಕೆಯಾಗಲಿದೆ. ಈಗಾಗಲೇ ಶಾಲೆಗಳ ಹೆಸರಿಗೆ ಖಾತೆ ಮಾಡಿಕೊಡಲಾಗಿದೆ. ಕಂಪನಿಗಳು ಕಟ್ಟಡ ಕಟ್ಟಿ ಹಸ್ತಾಂತರಿಸಿದರೆ ಸಾಕು.

-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ

ಕೋಟ್...............

ನಮ್ಮ ಕ್ಷೇತ್ರದಲ್ಲಿ 22 ಶಾಲೆಗಳನ್ನು ನವೀಕರಿಸಲಾಗಿದೆ. ಬೆಂಗಳೂರಿನಲ್ಲಿ ಜಗದ ಸಮಸ್ಯೆ ಇದೆ. ರಾಮನಗರದಲ್ಲಿ ಇಂತಹ ಸಮಸ್ಯೆ ಇಲ್ಲ. ಮೂಲ ಸೌಲಭ್ಯಗಳು ದೊರೆತರೆ ಮಕ್ಕಳು ಸರಕಾರಿ ಶಾಲೆಯತ್ತ ಆರ್ಕಷಿತರಾಗುತ್ತಾರೆ. ಹೀಗಾಗಿ ರಾಮನಗರದ ಮೂಲಕ ಇಡೀ ರಾಜ್ಯದಲ್ಲಿ ಈ ಯೋಜನೆ ಯಶಸ್ವಿಯಾಗಲಿ.

-ರಾಮಲಿಂಗರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವರು, ರಾಮನಗರಕೋಟ್‌.........ರಾಜ್ಯ ಸರ್ಕಾರ ಮೊದಲ ಎರಡು ಮೂರು ವರ್ಷಗಳ ಕಾಲ ಶಿಕ್ಷಣಕ್ಕೆ ಆದ್ಯತೆ ನೀಡಲು ನಿರ್ಧರಿಸಿದೆ. ಇದಕ್ಕೆ ರಾಮನಗರ ಜಿಲ್ಲೆ ಪೈಲೆಟ್ ಪ್ರಾಜೆಕ್ಟ್ ಮಾದರಿಯಲ್ಲಿ ಕೆಲಸ ನಡೆಯಲಿದೆ. ಪಂಚಾಯತಿ ವ್ಯಾಪ್ತಿಯಲ್ಲಿನ ಎಲ್ಲ ಶಿಕ್ಷರನ್ನು ಒಂದುಗೂಡಿಸಿ, ಎಲ್ಲ ಶಾಲೆಗಳನ್ನು ಒಂದೇ ಸೂರಿನಡಿ ತರುವ ಕೆಲಸ ನಡೆಯಲಿದೆ.-ಡಿ.ಕೆ.ಸುರೇಶ್, ಸಂಸದ

15ಕೆಆರ್ ಎಂಎನ್ 11,12.ಜೆಪಿಜಿ

11. ರಾಮನಗರ ಜಿಪಂ ಸಭಾಂಗಣದಲ್ಲಿ ಮಾದರಿ ಪಬ್ಲಿಕ್ ಶಾಲೆಗಳ ನಿರ್ಮಾಣ ಸಂಬಂಧ ಜಿಪಂ ಸಭಾಂಗಣದಲ್ಲಿ ಸಭೆ ನಡೆಯಿತು.

12. ಸಭೆಯಲ್ಲಿ ಖಾಸಗಿ ಕಂಪನಿಗಳ ಅಧಿಕಾರಿಗಳು ಭಾಗವಹಿಸಿರುವುದು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...