ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ನೀರಿನ ಕೊರತೆಯನ್ನು ನೀಗಿಸಲು ರೈತರು ಕೃಷಿ ಹೊಂಡಗಳ ನಿರ್ಮಾಣದತ್ತ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ತಾಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಬೇಸಿಗೆಯ ಕೊನೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಇದರಿಂದ ಕೃಷಿಕರಿಗೆ ತೀವ್ರ ಸಮಸ್ಯೆ ಉಂಟಾಗುತ್ತಿರುವ ಹಿನ್ನಲೆಯಲ್ಲಿ ರೈತರು ಈ ಪ್ರಯತ್ನಕ್ಕೆ ಅಡಿಯಿಟ್ಟಿದ್ದಾರೆ. ಕೃಷಿ ಹೊಂಡ ನಿರ್ಮಾಣಕ್ಕೆ ನರೇಗಾದಲ್ಲಿ ಹೆಚ್ಚಿನ ಮಹತ್ವ ನೀಡುತ್ತಿದ್ದು, ಇದುವರೆಗೆ ತಾಲೂಕಿನ 33 ಕಡೆ ಕೃಷಿ ಹೊಂಡಗಳನ್ನು ರಚಿಸಲಾಗಿದೆ. ಕೃಷಿ ಹೊಂಡಗಳ ನಿರ್ಮಾಣಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸಹಾಯಧನವೂ ಸಿಗುತ್ತದೆ. ಕೃಷಿ ಇಲಾಖೆಯಿಂದಲೂ ಸವಲತ್ತುಗಳು ಸಿಗುತ್ತವೆ. ಬೃಹತ್ ಕೃಷಿ ಹೊಂಡ ನಿರ್ಮಾಣ: ಉಜಿರೆಯ ಅತ್ತಾಜೆ ಎಂಬಲ್ಲಿ ಕೃಷಿಕ ಅತ್ತಾಜೆ ಕೇಶವ ಭಟ್ ಮತ್ತು ಸಹೋದರರು ಬೃಹತ್ ಕೃಷಿ ಹೊಂಡ ನಿರ್ಮಿಸುತ್ತಿದ್ದಾರೆ. ಕೃಷಿಗಾಗಿ ನೀರಿನ ಉದ್ದೇಶಕ್ಕೆ ಕೊಳವೆ ಬಾವಿಗಳಿದ್ದರೂ ಅವುಗಳಲ್ಲಿ ಏಪ್ರಿಲ್ ವೇಳೆಗೆ ನೀರು ಬತ್ತುತ್ತದೆ. ಬೇಸಿಗೆಯ ಕೃಷಿ ನೀರಿಗೆ ಬೃಹತ್ ಗಾತ್ರದ ಕೃಷಿ ಹೊಂಡ ರಚನೆಯಾಗುತ್ತಿದ್ದು, 200 ಅಡಿ ಉದ್ದ 100 ಅಡಿ ಅಗಲ, 42 ಅಡಿ ಆಳ ಇದ್ದು ಆಯತಾ ಕಾರದಲ್ಲಿದೆ. ಒಟ್ಟು 2.13 ಕೋಟಿ ಲೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ದಿನ ಪ್ರತಿ 10 ಗಂಟೆ ಜೆಸಿಬಿ ಮೂಲಕ ಕಾಮಗಾರಿ ನಡೆಸಲಾಗಿದೆ. ಒಟ್ಟು 27 ದಿನದ ಅವಧಿಯಲ್ಲಿ ಇದರ ಭಾಗಶಃ ರಚನೆ ಪೂರ್ಣಗೊಂಡಿದೆ.ಕೃಷಿ ಹೊಂಡದಲ್ಲಿ ನೀರು ಪೋಲಾಗದಂತೆ ಉತ್ತಮ ಗುಣಮಟ್ಟದ ಟಾರ್ಪಲ್ ಹೊದಿಸಲಾಗಿದೆ. ಕೃಷಿ ಹೊಂಡದ ಎರಡು ಅಡಿ ದೂರದಲ್ಲಿ ಸಣ್ಣ ಗಾತ್ರದ ಕಣಿವೆಯನ್ನು ಸುತ್ತಲೂ ತೋಡಲಾಗಿದ್ದು ಇದರೊಳಗೆ ಟಾರ್ಪಲ್‌ನ ಭಾಗವನ್ನು ಮಣ್ಣು ಹಾಕಿ ಮುಚ್ಚಿ ಜಾರದಂತೆ ಮರಳಿನ ಚೀಲಗಳನ್ನು ಜೋಡಿಸಲಾಗುತ್ತದೆ. ಸುರಕ್ಷೆಯ ಉದ್ದೇಶದಿಂದ ಸುತ್ತಲೂ ಬೇಲಿಯೂ ನಿರ್ಮಾಣಗೊಳ್ಳಲಿದೆ. ಇದೊಂದು ಬೃಹತ್ ಗಾತ್ರದ ಕೃಷಿ ಹೊಂಡವಾಗಿದ್ದು ಇದರಲ್ಲಿ ನೀರನ್ನು ಸಂಗ್ರಹಿಸಿ ಕೃಷಿಗೆ ಬಳಸಲಾಗುತ್ತದೆ.ಸೋಲಾರ್ ಪಂಪ್: ಈ ಕೃಷಿ ಹೊಂಡಕ್ಕೆ ಸೋಲಾರ್ ಪಂಪ್ ಅಳವಡಿಸಿ ಕೃಷಿಗೆ ನೀರು ಹಾಯಿಸುವ ವ್ಯವಸ್ಥೆ ಮಾಡಲಾಗುತ್ತದೆ. ಮಳೆಗಾಲದಲ್ಲಿ ಹರಿದು ಬರುವ ನೀರನ್ನು ಈ ಹೊಂಡದಲ್ಲಿ ಸಂಗ್ರಹ ಮಾಡುವ ವ್ಯವಸ್ಥೆಯೂ ಇದೆ. ಈ ಕೃಷಿ ಹೊಂಡ ನಿರ್ಮಾಣಕ್ಕೆ ಒಟ್ಟು 15 ಲಕ್ಷ ರುಪಾಯಿ ವೆಚ್ಚವಾಗಿದ್ದು ಶೇ.30 ಸಬ್ಸಿಡಿ ಸಿಗಲಿದೆ.
- ವೀರಭದ್ರಪ್ಪಎ.ಡಿ., ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಬೆಳ್ತಂಗಡಿ--- ಕೃಷಿ ಹೊಂಡಗಳನ್ನು ನಿರ್ಮಿಸುವುದರಿಂದ ನೀರು ಪೋಲಾಗುವುದಿಲ್ಲ. ನಮ್ಮಲ್ಲಿ ಕೊಳವೆ ಬಾವಿಗಳಿದ್ದರೂ ಬೇಸಿಗೆಯ ಕೊನೆಯ ಭಾಗದಲ್ಲಿ ನೀರಿನ ಕೊರತೆ ಕಾಡುತ್ತದೆ. ಈ ಕಾರಣದಿಂದ ಬೃಹತ್ ಗಾತ್ರದ ಕೃಷಿ ಹೊಂಡ ನಿರ್ಮಿಸಲಾಗಿದೆ.
- ಅತ್ತಾಜೆ ಈಶ್ವರ ಭಟ್, ಕೃಷಿ ಹೊಂಡದ ನೇತೃತ್ವ ವಹಿಸಿದವರು