ಸಮರ್ಪಣೆ ಸಂಕಲ್ಪ ಸಮಾವೇಶಕ್ಕೆ ಭವ್ಯ ವೇದಿಕೆ ನಿರ್ಮಾಣ

KannadaprabhaNewsNetwork |  
Published : May 18, 2025, 02:13 AM ISTUpdated : May 18, 2025, 05:31 AM IST
17ಎಚ್‌ಪಿಟಿ1- ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಮರ್ಪಣೆ ಸಂಕಲ್ಪ ಸಮಾವೇಶಕ್ಕಾಗಿ ಭವ್ಯ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. | Kannada Prabha

ಸಾರಾಂಶ

ರಾಜ್ಯದ ಎಲ್ಲ ರಸ್ತೆಗಳು ಹೊಸಪೇಟೆಯತ್ತ ಎನ್ನುವಂತೆ ರಾಜ್ಯ ಸರ್ಕಾರದ ಎರಡನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭವ್ಯ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ಜಿಲ್ಲಾಡಳಿತವೇ ಟೊಂಕ ಕಟ್ಟಿ ನಿಂತಿದೆ.

  ಹೊಸಪೇಟೆ : ರಾಜ್ಯದ ಎಲ್ಲ ರಸ್ತೆಗಳು ಹೊಸಪೇಟೆಯತ್ತ ಎನ್ನುವಂತೆ ರಾಜ್ಯ ಸರ್ಕಾರದ ಎರಡನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭವ್ಯ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ಜಿಲ್ಲಾಡಳಿತವೇ ಟೊಂಕ ಕಟ್ಟಿ ನಿಂತಿದೆ.

ಜಿಲ್ಲಾ ಕ್ರೀಡಾಂಗಣದಲ್ಲಿ ಸಮರ್ಪಣೆ ಸಂಕಲ್ಪ ಸಮಾವೇಶಕ್ಕಾಗಿ ಭವ್ಯ ವೇದಿಕೆ ನಿರ್ಮಾಣ ಮಾಡಲಾಗುತ್ತಿದ್ದು. ಈಗಾಗಲೇ ವೇದಿಕೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್ ಖಾನ್‌ ಹಾಗೂ ಶಾಸಕ ಎಚ್‌.ಆರ್‌. ಗವಿಯಪ್ಪ, ಎಐಸಿಸಿ ವೀಕ್ಷಕ ರವಿ ಬೋಸರಾಜು ವೇದಿಕೆ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಈಗಾಗಲೇ ಹೊಸಪೇಟೆಯಲ್ಲೇ ಬೀಡು ಬಿಟ್ಟಿರುವ ಸಚಿವರ ತಂಡ ವೇದಿಕೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಲು ಸಲಹೆ ನೀಡುತ್ತಿದೆ.

ಜರ್ಮನ್‌ ಟೆಂಟ್‌:

ಭಾರೀ ಬಿಸಿಲು ಇರುವುದರಿಂದ ನೆರಳಿನ ವ್ಯವಸ್ಥೆಯೊಂದಿಗೆ ಸುಸಜ್ಜಿತ ಜರ್ಮನ್‌ ಟೆಂಟ್‌ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನ ಉಡುಪಾಸ್‌ ಸಂಸ್ಥೆಯವರು ವೇದಿಕೆ ನಿರ್ಮಾಣ ಮಾಡುತ್ತಿದ್ದಾರೆ. ಭವ್ಯವಾದ ಜರ್ಮನ್‌ ಟೆಂಟ್‌ ವೇದಿಕೆಯಲ್ಲಿ ಪ್ರಧಾನ ವೇದಿಕೆ ಸೇರಿ ಇನ್ನೂ ಎರಡು ಕಿರು ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. 200 ಅಡಿ ಅಗಲ 70 ಅಡಿ ಉದ್ದದ ಪ್ರಧಾನ ವೇದಿಕೆ ನಿರ್ಮಿಸಲಾಗುತ್ತಿದೆ. ಪ್ರಧಾನ ವೇದಿಕೆಯಲ್ಲಿ 300 ಜನ ಗಣ್ಯರಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ಉಳಿದ ಎರಡು ಕಿರು ವೇದಿಕೆಗಳಲ್ಲಿ 50 ಜನ ಮಾಜಿ ಸಚಿವರಿಗೆ ವೇದಿಕೆ ಕಲ್ಪಿಸಲಾಗುತ್ತಿದೆ. ಇನ್ನೊಂದು ಕಿರು ವೇದಿಕೆಯಲ್ಲಿ ನಿಗಮ ಮಂಡಳಿಗಳ ಅಧ್ಯಕ್ಷರು ಹಾಗು ಪಕ್ಷದ ಪ್ರಮುಖ 50 ಜನ ಗಣ್ಯರಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ.

1.5 ಲಕ್ಷ ಕುರ್ಚಿ ವ್ಯವಸ್ಥೆ:

ರಾಜ್ಯದ ಮೂಲೆ ಮೂಲೆಯಿಂದ ಆಗಮಿಸುವ ಜನರಿಗೆ 1ಲಕ್ಷ 50 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನರು ಹರಿದು ಬಂದರೆ ಇನ್ನೂ 50 ಸಾವಿರ ಕುರ್ಚಿಗಳನ್ನು ಹೆಚ್ಚುವರಿ ತರಿಸಲಾಗಿದೆ. ಕ್ರೀಡಾಂಗಣದ ಅಕ್ಕಪಕ್ಕದ ರಸ್ತೆಯಲ್ಲೂ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ವೇದಿಕೆ ಸೇರಿದಂತೆ ನೂರಾರು ಎಲ್‌ಇಡಿ ಪರದೆಗಳ ವ್ಯವಸ್ಥೆ ಮಾಡಲು ಸಚಿವ ಜಮೀರ್‌ ಅಹಮದ್ ಖಾನ್‌ ಸೂಚಿಸಿದ್ದಾರೆ. ಭೋಜನದ ವ್ಯವಸ್ಥೆಗಾಗಿ ಟೆಂಟ್‌ ನಿರ್ಮಿಸಿ ಕೌಂಟರ್‌ ತೆರೆಯಲಾಗುತ್ತಿದೆ.

ವೇದಿಕೆಯ ಮುಂಭಾಗದಲ್ಲಿ ಗಣ್ಯರು, ಗಣ್ಯಾತಿಗಣ್ಯರಿಗಾಗಿ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ಮಾಧ್ಯಮದವರಿಗೂ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ. ಇಂಟರ್‌ನೆಟ್‌ ವ್ಯವಸ್ಥೆ ಕೂಡ ಮಾಡಲಾಗಿದ್ದು, ಲೈವ್‌ ಕವರೇಜ್‌ಗೂ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ವಿಜಯನಗರ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಎಸ್ಪಿಯವರು ವೇದಿಕೆ ಸ್ವರೂಪದ ಬಗ್ಗೆ ತಿಳಿದುಕೊಂಡಿದ್ದು, ಬಿಗಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಹಂಪಿ ಸ್ಮಾರಕಗಳ ಕಂಬಗಳು:

ಈ ಭವ್ಯ ವೇದಿಕೆಯ ಅಕ್ಕಪಕ್ಕ ಹಾಗೂ ಹೊರಗಡೆ ಹಂಪಿ ಸ್ಮಾರಕಗಳ ಕಂಬ ಬಳಕೆ ಮಾಡಲಾಗುತ್ತಿದೆ. ಈ ವೇದಿಕೆ ಭವ್ಯ ಎಲ್‌ಇಡಿ ಪರದೆ ವೇದಿಕೆ ಆಗಿರುವುದರಿಂದ ಅಕ್ಕಪಕ್ಕದಲ್ಲಿ ಹಂಪಿ ಸ್ಮಾರಕಗಳ ಕಂಬ ಬಳಕೆ ಮಾಡಲಾಗುತ್ತಿದೆ ಎಂದು ಉಡುಪಾಸ್‌ ಸಂಸ್ಥೆಯವರು ತಿಳಿಸಿದ್ದಾರೆ. ಇನ್ನು ಹಂಪಿ ಸ್ಮಾರಕಗಳನ್ನು ಬಳಕೆ ಮಾಡಿಕೊಂಡು ವೇದಿಕೆ ನಿರ್ಮಾಣ ಮಾಡಲು ಜಿಲ್ಲಾಡಳಿತ ಕೂಡ ಸೂಚಿಸಿರುವ ಹಿನ್ನೆಲೆ ವೇದಿಕೆ ಪಕ್ಕ ಹಾಗೂ ಹೊರಗಡೆ ಕೂಡ ಹಂಪಿ ಚಿತ್ರಣ ಹೋಲುವ ಕಂಬಗಳನ್ನು ಬಳಕೆ ಮಾಡಲು ಯೋಜಿಸಲಾಗಿದೆ ಎಂದು ಉಡುಪಾಸ್‌ ಸಂಸ್ಥೆಯವರು ತಿಳಿಸಿದ್ದಾರೆ.

PREV
Read more Articles on

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌